ಸಾರಾಂಶ
ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ನಿರಂತರವಾಗಿ ಸಾಗಿದೆ. ಸಕಾಲದಲ್ಲಿ ಒಪ್ಪಿಗೆ ಕಬ್ಬನ್ನು ಕಟಾವು ಮಾಡಲಾಗುತ್ತಿದೆ. ಆದರೆ, ಖಾಸಗಿ ಕಂಪನಿಗಳ ಜೊತೆ ಶಾಮೀಲಾಗಿರುವ ಬಿಜೆಪಿ ಪಕ್ಷದ ಕಾರ್ಯಕರ್ತರು, ಎರಡು ದಿನ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಸ್ಥಗಿತ ಮಾಡಿದ್ದನ್ನು ನೆಪ ಮಾಡಿಕೊಂಡು ಕಾರ್ಖಾನೆ ವಿರುದ್ಧ ಅಪಪ್ರಚಾರ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರದ ಮೈಷುಗರ್ ಕಾರ್ಖಾನೆ ಸುಸ್ಥಿತಿಯಲ್ಲಿ ಮುನ್ನಡೆಯುತ್ತಿದ್ದರೂ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ನಗರದ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕದ ಆಶ್ರಯದಲ್ಲಿ ಸೇರಿದ ಪಕ್ಷದ ಕಾರ್ಯಕರ್ತರು, ಮೈಷುಗರ್ ಉಳಿಸಿ ರೈತರ ಹಿತ ಕಾಪಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಸಿಹಿ ನೀಡಿದೆ ಎಂದು ಸಕ್ಕರೆ ತಿನ್ನುವ ಮೂಲಕ ಸಂಭ್ರಮಿಸಿದರು.
ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ನಿರಂತರವಾಗಿ ಸಾಗಿದೆ. ಸಕಾಲದಲ್ಲಿ ಒಪ್ಪಿಗೆ ಕಬ್ಬನ್ನು ಕಟಾವು ಮಾಡಲಾಗುತ್ತಿದೆ. ಆದರೆ, ಖಾಸಗಿ ಕಂಪನಿಗಳ ಜೊತೆ ಶಾಮೀಲಾಗಿರುವ ಬಿಜೆಪಿ ಪಕ್ಷದ ಕಾರ್ಯಕರ್ತರು, ಎರಡು ದಿನ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಸ್ಥಗಿತ ಮಾಡಿದ್ದನ್ನು ನೆಪ ಮಾಡಿಕೊಂಡು ಕಾರ್ಖಾನೆ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಎಂದು ದೂರಿದರು.ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಖಾನೆ ಮುಚ್ಚಲು ಪ್ರಯತ್ನಿಸಿ ಖಾಸಗೀಕರಣ ಮಾಡುವ ಹುನ್ನಾರ ನಡೆಸಿದ್ದರು. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ತಿಂಗಳೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 50 ಕೋಟಿ ರು. ಅನುದಾನ ನೀಡಿ ಕಾರ್ಖಾನೆ ಆರಂಭಕ್ಕೆ ನಾಂದಿ ಹಾಡಿದ್ದಾರೆ. ಆದರೆ, ಬಿಜೆಪಿ ಅಪಪ್ರಚಾರದಲ್ಲಿ ನಿರತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೈಷುಗರ್ ಅಧ್ಯಕ್ಷರಾಗಿದ್ದ ನಾಗರಾಜಪ್ಪ ಕೋಟ್ಯಾಂತರ ರು. ಹಣ ನುಂಗಿದ್ದಾರೆ. ಈ ಬಗ್ಗೆ ಲೋಕಾಯುಕ್ತ ತನಿಖೆ ಕೂಡ ಆಗಿದೆ. ಆ ಹಣವನ್ನು ಬಿಜೆಪಿ ನಾಯಕರು ವಸೂಲಿ ಮಾಡಿಕೊಡಲಿ ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಮೋಹನ್ ಕುಮಾರ್, ಶಿವನಂಜು, ಅಂಜನಾ ಶ್ರೀಕಾಂತ್, ಸಿ.ಎಂ.ದ್ಯಾವಪ್ಪ, ಸುಂಡಹಳ್ಳಿ ಮಂಜುನಾಥ್, ಎಚ್.ಡಿ.ಜಯರಾಮ್, ಚಂದಗಾಲು ವಿಜಯಕುಮಾರ್, ಪ್ರಕಾಶ್ ಹಲವರು ಭಾಗವಹಿಸಿದ್ದರು.