ಸಾರಾಂಶ
ಬ್ಯಾಡಗಿ: ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿ ರೈತರಿಗೆ ಮೋಸವೆಸಗಿದ ಧನ ಕ್ರಾಪ್ ಪ್ರೈ.ಲಿ. ವಿರುದ್ಧ ಕಾನೂನು ಕ್ರಮ ಸೇರಿದಂತೆ ಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ರಾಜ್ಯ ರೈತ ಸಂಘದ ಸದಸ್ಯರು ಶಾಸಕರ ಕಚೇರಿ ಎದುರು ನಡೆಸುತ್ತಿರುವ ಧರಣಿ ಎರಡನೇ ದಿನವಾದ ಗುರುವಾರವೂ ಯಾವುದೇ ಫಲಪ್ರದ ಕಾಣದೇ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ವೇಳೆ ಮಾತನಾಡಿದ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಕೃಷಿ ಅಧಿಕಾರಿಗಳ ತಪ್ಪಿನಿಂದ ಇಂತಹ ಮೋಸದ ಕಂಪನಿಗಳು ರೈತರಿಗೆ ಕಂಟಕಪ್ರಾಯವಾಗಿ ಪರಿಣಮಿಸಿವೆ. ಶೀಘ್ರದಲ್ಲೇ ಈ ಕಂಪನಿ ಮಾರಾಟಕ್ಕೆ ಸಂಬಂಧಿಸಿದ ಎಲ್ಲ ವಹಿವಾಟನ್ನು ಸ್ಥಗಿತಗೊಳಿಸಬೇಕು ಹಾಗೂ ಜಿಲ್ಲೆಯ ಬಹುತೇಕ ಕಡೆ ಧನಕ್ರಾಪ್ ಪ್ರೈ.ಲಿ. ಮಾರಾಟದ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿದರು.ಮಾರಾಟ ನಿಷೇಧಿಸಿ: ಧನಕ್ರಾಪ್ ಪ್ರೈ.ಲಿ. ಕೇವಲ ಮೆಣಸಿನಕಾಯಿಯನ್ನಷ್ಟೇ ಅಲ್ಲ, ಕಳಪೆ ಗುಣಮಟ್ಟದ ಕ್ಯಾಬೀಜದ ಬೀಜ ಮಾರಾಟ ಮಾಡಿ ಪರಾರಿಯಾಗಿದ್ದಾರೆ. ಕೆಲ ರೈತರ ಜತೆ ಬೋಗಸ್ ಅಗ್ರಿಮೆಂಟ್ ಮಾಡಿಕೊಂಡಿರುವ ಕಂಪನಿಯು ಮತ್ತೊಂದು ವಿವಾದವನ್ನು ಸೃಷ್ಟಿಸಿದೆ. ಕಂಪನಿಯ ಒಂದೊಂದೇ ಬಣ್ಣ ಬಯಲಾಗುತ್ತಿದ್ದು, ಕೆರೂಡಿ ಕದರಮಂಡಲಗಿ, ಕಲ್ಲೇದೇವರ ಬುಡಪನಹಳ್ಳಿ ಗ್ರಾಮಗಳಲ್ಲಿ ಕಳಪೆ ಕ್ಯಾಬೀಜ ಬಿತ್ತನೆ ಮಾಡಿದ ರೈತರೂ ಸಹ ಪಾಲ್ಗೊಂಡಿದ್ದು, ಸಂತ್ರಸ್ತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದರು.ವಿದೇಶಕ್ಕೆ ತೆರಳಿದ ವ್ಯವಸ್ಥಾಪಕ ನಿರ್ದೇಶಕ: ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ದರಾಮಯ್ಯ ಭೈರಗಿಮಠ ಸ್ಥಳೀಯ ತೋಟಗಾರಿಗೆ ಸಹಾಯಕ ನಿರ್ದೇಶಕ ಅಶೋಕ ಕುರುಬರ ಸೇರಿದಂತೆ ಇನ್ನಿತರ ಅಧಿಕಾರಿಗಳು, ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ರೈತರ ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡಿದ ಅಧಿಕಾರಿಗಳು ಕಂಪನಿ ವ್ಯವಸ್ಥಾಪಕ ನಿರ್ದೇಶಕರು ವಿದೇಶಕ್ಕೆ ತೆರಳಿದ್ದಾಗಿ ತಿಳಿಸಿದರು. ಇದರಿಂದ ಆಕ್ರೋಶಗೊಂಡ ರೈತರು, ಈ ಕುರಿತು ದಾಖಲೆ ಕೊಡಿ. ಸುಳ್ಳು ಹೇಳಿ ಪ್ರತಿಭಟನೆ ಹತ್ತಿಕ್ಕುವ ಕೆಲಸಕ್ಕೆ ಕೈಹಾಕಬೇಡಿ. ಮೊದಲೇ ಸುಳ್ಳು ಎಫ್‌ಐಆರ್ ಹಾಕಿಸಿರುವ ನೀವು ಮತ್ತೊಂದು ನಾಟಕ ಮಾಡಬೇಡಿ ಎಂದರು. ಈ ವೇಳೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಯಿತು.
ಮೌನೇಶ ಕಮ್ಮಾರ ಮಾತನಾಡಿದರು. ನೂರಾರು ರೈತರು ಇದ್ದರು.ವ್ಯವಸ್ಥಿತ ಜಾಲ: ಜಿಲ್ಲಾದ್ಯಂತ ಕಳಪೆ ಬೀಜ ಮಾರಾಟ ದಂಧೆ ನಡೆಸುತ್ತಿರುವ ವ್ಯವಸ್ಥಿತ ಜಾಲವೊಂದು ಕ್ರಿಯಾಶೀಲವಾಗಿದೆ. ಬಿತ್ತನೆ ಬೀಜ ಮಾರಾಟಗಾರರಿಗೆ ಹಣ ಮತ್ತು ವಿದೇಶ ಪ್ರವಾಸದ ಆಮಿಷವೊಡ್ಡಿ ಕಳಪೆ ಬೀಜ ಮಾರಾಟಕ್ಕೆ ಮುಂದಾಗಿದ್ದು, ಇದರಿಂದ ರೈತರ ಶೋಷಣೆಯಾಗುತ್ತಿದೆ. ಕೂಡಲೇ ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಂಡು ಇಂಥವರನ್ನು ಮಟ್ಟಹಾಕುವ ಕೆಲಸಕ್ಕೆ ಮುಂದಾಗಬೇಕು ಎಂದು ರೈತ ಸಂಘದ ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ ತಿಳಿಸಿದರು.
ಕಳಪೆ ಎಂದು ಸಾಬೀತು: ವಿಜ್ಞಾನಿಗಳ ವರದಿಯಲ್ಲಿ ಮಾರಾಟ ಮಾಡಿದ ಬಿತ್ತನೆ ಬೀಜಗಳು ಈಗಾಗಲೇ ಕಳಪೆ ಎಂದು ಸಾಬೀತಾಗಿದೆ. ಪರಿಹಾರ ನೀಡಲು ಇಷ್ಟೇಕೆ ತಡ? ಶಾಸಕರೇ ಕೂಡಲೇ ಹೈದ್ರಾಬಾದ್ ಧನ್ ಕ್ರಾಪ್ ಮತ್ತು ಸನ್ಸ್ಸ್ ಪ್ರೈ.ಲಿ.ನಿಂದ ಪರಿಹಾರ ಕೊಡಿಸಿ ರೈತರ ರಕ್ಷಣೆಗೆ ನಿಲ್ಲಬೇಕು ಎಂದು ರೈತ ಮುಖಂಡ ಗಂಗಣ್ಣ ಎಲಿ ತಿಳಿಸಿದರು.