ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಶುದ್ಧ ಕುಡಿಯುವ ನೀರು ನೀಡುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಿದ ನೀರಿನ ಟ್ಯಾಂಕ್ ಕಾಮಗಾರಿ ಕಳಪೆಯಾಗಿದ್ದು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟಿಸಿದರು.ತಾಲೂಕಿನ ಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಶಿವಾಲದಹಳ್ಳಿಯಲ್ಲಿ ಪ್ರಗತಿಯಲ್ಲಿರುವ ಜೆಜೆಎಂ ಟ್ಯಾಂಕ್ ವಾಲುತ್ತಿರುವ ಬಗ್ಗೆ ಗ್ರಾಮಸ್ಥರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲಯ್ಯ ಮಾತನಾಡಿ, ಸರ್ಕಾರ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಮಹತ್ವಪೂರ್ಣ ಯೋಜನೆ ರೂಪಿಸಿದೆ. ಆದರೆ ಇಲಾಖೆಗಳ ನಿರ್ಲಕ್ಷದಿಂದ ಟ್ಯಾಂಕ್ ಕಾಮಗಾರಿ ಕಳಪೆಯಿಂದ ಕೂಡಿದೆ. ಈ ಬಗ್ಗೆ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರನ್ನು ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಶಾಸಕರು ಸ್ಥಳಕ್ಕೆ ಆಗಮಿಸಿ ಕಳಪೆ ಕಾಮಗಾರಿ ನಿಲ್ಲಿಸಿ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು. ಬೇಕಾಬಿಟ್ಟಿ ರಸ್ತೆಗಳನ್ನು ಆಗೆದು ಮೂರು ತಿಂಗಳಾದರೂ ಕೂಡ ಕೊಳವೆ ಜೊಡಣೆ ಕಾಮಗಾರಿ ನಡೆಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು . ಗ್ರಾಮಸ್ಥರಾದ ರಮೇಶ್ ಮತ್ತು ಮಂಜೇಗೌಡ ಮಾತನಾಡಿ, ಟ್ಯಾಂಕ್ ಕಾಮಗಾರಿಯನ್ನು ಬೇಕಾಬಿಟ್ಟಿ ಮಾಡಿದ್ದಾರೆ, ಗ್ರಾಮಸ್ಥರಿಗೆ ಕೇಳಿದರೆ ನೀವುಗಳು ಯಾರು ಎಂದು ಗುತ್ತಿಗೆದಾರರು ಪ್ರಶ್ನೆ ಮಾಡುತ್ತಾರೆ. ನೀರು ತುಂಬುವ ಮೊದಲೇ ಟ್ಯಾಂಕ್ ವಾಲುತ್ತಿರುವ ಹಿನ್ನಲೆಯಲ್ಲಿ ಟ್ಯಾಂಕ್ ತೆರವುಗೊಳಿಸಿ ಪರ್ಯಾಯ ಗುಣಮಟ್ಟದ ಟ್ಯಾಂಕ್ ನಿರ್ಮಿಸಬೇಕು. ಸುಭದ್ರವಾದ ಸಿಮೆಂಟ್ ರಸ್ತೆಗಳನ್ನು ಎಲ್ಲೆಂದರಲ್ಲಿ ಒಡೆದು ಹಾಕಿದ್ದು ಸುಸ್ಥಿತಿ ಕಾಮಗಾರಿ ನಡೆಸಬೇಕು ಎಂದು ಒತ್ತಾಯಿಸಿದರು . ಜೆಜೆಎಂ ಯೋಜನಾ ಅಧಿಕಾರಿ ಅನ್ವರ್‌ಪಾಷ ಮಾತನಾಡಿ, ಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜೆಜೆಎಂ ಯೋಜನೆಯಲ್ಲಿ ಕೆಲವು ಭಾಗದಲ್ಲಿ ಕಳಪೆಯಿಂದ ಕೂಡಿದ ಬಗ್ಗೆ ತಿಳಿದಿದೆ. ಈಗಾಗಲೇ ನಾಲ್ಕು ಟ್ಯಾಂಕ್ ತೆರವುಗೊಳಿಸಿ ಪರ್ಯಾಯ ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದೆ. ಅಂತೆಯೇ ಶಿವಾಲದಹಳ್ಳಿ ಗ್ರಾಮದ ಟ್ಯಾಂಕ್ ತೆರವುಗೊಳಿಸಲಾಗುತ್ತದೆ. ಗುತ್ತಿಗೆದಾರನ ವಿರುದ್ದ ಕ್ರಮಕೈಗೊಳ್ಳಲಾಗುತ್ತದೆ. ಈಗಾಗಲೇ ನಮ್ಮ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನಂಜೇಶ್, ಸೋಮಶೆಖರ್, ರಮೇಶ್, ಧರ್ಮೇಗೌಡ, ಯೋಗಣ್ಣ ಹಾಜರಿದ್ದರು.