ಸಾರಾಂಶ
ಕಳಪೆ ಕಾಮಗಾರಿ: ಬೂದಿಕೇರಿ ರಸ್ತೆ ದುರಸ್ತಿಗೆ ಒತ್ತಾಯ
ಕನ್ನಡಪ್ರಭ ವಾರ್ತೆ ಕನಕಪುರ
ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಬೂದಿಕೇರಿ ರಸ್ತೆ ನೂತನವಾಗಿ ನಿರ್ಮಿಸಿದ ಕೆಲವೇ ದಿನಗಳಲ್ಲಿ ಕಳಪೆ ಕಾಮಗಾರಿಯಿಂದ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಆರೋಪಿಸಿದ್ದಾರೆ.ರೈತ ಸಂಘಟನೆ ಹಾಗೂ ಕನ್ನಡ ಪರ ಸಂಘಟನೆಗಳ ಜತೆ ನಗರದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಲಿಂಗಯ್ಯ ಅವರಿಗೆ ಈ ಬಗ್ಗೆ ದೂರು ಸಲ್ಲಿಸಿ ಮಾತನಾಡಿ, ಬೂದಿಕೇರಿ ರಸ್ತೆಯು ಸಂಪೂರ್ಣವಾಗಿ ವಾಣಿಜ್ಯ ಮಳಿಗೆಗಳಿಂದ ಕೂಡಿದ್ದು, ಇಲ್ಲಿನ ರಸ್ತೆ ಕಾಮಗಾರಿಯು ಆಮೆಗತಿಯಿಂದ ಜನ ಕಷ್ಟಪಡುವಂತಾಗಿತ್ತು, ಕಾಮಗಾರಿ ಮುಗಿದ ನಂತರ ಸಾರ್ವಜನಿಕರು ನಿಟ್ಟುಸಿರು ಬಿಡುವಷ್ಟರಲ್ಲಿ ರಸ್ತೆ ಸಂಚಾರ ಆರಂಭವಾದ ಹಿನ್ನೆಲೆ ರಸ್ತೆ ಕಾಮಗಾರಿಗೆ ಬಳಸಿದ ಕಾಂಕ್ರೀಟ್‌ನಲ್ಲಿ ಸರಿಯಾದ ಪ್ರಮಾಣ ಇರದೆ, ಡಸ್ಟ್ ಅನ್ನೇ ಹೆಚ್ಚು ಬಳಸಿ ರಸ್ತೆ ನಿರ್ಮಿಸಿದ್ದರಿಂದ ಜಲ್ಲಿಕಲ್ಲು ಎದ್ದು ಬಂದು ಕೆಲವೇ ದಿನಗಳಲ್ಲೇ ಅಲ್ಲಲ್ಲಿ ಗುಂಡಿಗಳಾಗಿವೆ ಈ ರಸ್ತೆ ನಿರ್ಮಾಣದ ನೀಲನಕ್ಷೆಯೇ ಅವೈಜ್ಞಾನಿಕವಾಗಿರುವುದರಿಂದ ಸಾರ್ವಜನಿಕರು ಹಾಗೂ ಈ ರಸ್ತೆ ಆಸುಪಾಸಿನಲ್ಲಿ ವಾಸ ಮಾಡುತ್ತಿರುವ ನಿವಾಸಿಗಳು ಪರೆದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಚೀಲೂರು ಮುನಿರಾಜು, ಕೆಆರ್‌ಎಸ್ ಪಕ್ಷದ ಪ್ರಶಾಂತ್ ಹೊಸದುರ್ಗ, ಸ್ವತಂತ್ರ ಕರ್ನಾಟಕ ಸೇನೆಯ ಭಾಸ್ಕರ್, ಕಹಳೆ ರುದ್ರೇಶ್, ಹಾರೋಹಳ್ಳಿ ಗಿರೀಶ್, ಕುಮಾರ್, ಪರಮೇಶ್, ಸಾಗರ್, ಅಂಗಡಿ ರಮೇಶ್, ರೈತಸಂಘದ ಶಿವರಾಮು, ಕೆ.ಬಿ.ಬಸವರಾಜು, ಮಾದೇಶ ಹಾಜರಿದ್ದರು.