ಸಾರಾಂಶ
ಹುಬ್ಬಳ್ಳಿ:
ಪಿಒಪಿ ಹಾಗೂ ಕೆಮಿಕಲ್ ಆಧಾರಿತ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ಒಂದು ವೇಳೆ ಮಾರಾಟ ಮಾಡಲು ಮುಂದಾದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಎಚ್ಚರಿಕೆ ನೀಡಿದರು.ನಗರದ ಸವಾಯಿ ಗಂಧರ್ವ ಭವನದಲ್ಲಿ ಶುಕ್ರವಾರ ನಡೆದ ಗಣೇಶ ಹಬ್ಬದ ಆಚರಣೆ ಕುರಿತು ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಗಣೇಶ ಹಬ್ಬವನ್ನು ಕೆಲವು ಇಲಾಖೆಯ ನಿಯಮಾನುಸಾರ ಆಚರಿಸಬೇಕಿದೆ. ಪಿಒಪಿ ಗಣೇಶ ಮೂರ್ತಿ ನಿಷೇಧಿಸಬೇಕೆಂದು ನ್ಯಾಯಾಲಯದ ಆದೇಶವಿದ್ದು, ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಸೂಚಿಸಿದರು.ಕೆಮಿಕಲ್ ಆಧಾರಿತ ಮೂರ್ತಿ ನಿಷೇಧಿಸಿದ್ದು ಅಂತಹ ಗಣಪತಿ ಕಂಡು ಬಂದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಸೀಜ್ ಮಾಡಲಿದ್ದಾರೆ. ಪಿಒಪಿ ಗಣಪತಿ ಬಳಸಬಾರದು ಎಂದು ಜುಲೈ ತಿಂಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
ಟಾಸ್ಕ್‌ಪೋರ್ಸ್ ರಚನೆ:ಪಿಒಪಿ ಹಾಗೂ ಕೆಮಿಕಲ್ ಆಧಾರಿತ ಗಣೇಶ ಮೂರ್ತಿ ಮಾರಾಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲು ವಾರ್ಡ್ ಹಾಗೂ ತಾಲೂಕು ಮಟ್ಟದಲ್ಲಿ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್‌ಪೋರ್ಸ್ ರಚಿಸಲಾಗಿದೆ. ವಾರ್ಡ್ ಮಟ್ಟದಲ್ಲಿ ವಲಯ ಕಚೇರಿ ಸಹಾಯಕ ಆಯುಕ್ತರು, ಸಹಾಯಕ ಪೊಲೀಸ್, ತಹಸೀಲ್ದಾರ್, ವಾಣಿಜ್ಯ ತೆರಿಗೆ ಅಧಿಕಾರಿ, ಪರಿಸರ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಕರು ಒಳಗೊಂಡಿದೆ. ಇನ್ನೂ ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿ, ಮುಖ್ಯಾಧಿಕಾರಿ, ಉಪ ಪೊಲೀಸ್ ಅಧೀಕ್ಷಕ ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿಗಳು ಇರಲಿದ್ದಾರೆ. ಪಿಒಪಿ ಮೂರ್ತಿಗಳ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಚೆಕ್‌ಪೋಸ್ಟ್:ಮಹಾರಾಷ್ಟ್ರ, ಬೆಳಗಾವಿ ಹಾಗೂ ಪುಣಾದಿಂದ ಪಿಒಪಿ ಗಣಪತಿ ಮೂರ್ತಿಗಳ ತಂದು ಇಲ್ಲಿ ಮಾರಾಟ ಮಾಡುತ್ತಾರೆ ಎಂದು ಮಾಹಿತಿ ಬಂದಿದೆ. ಈ ಹಿನ್ನೆಲೆ ಬೆಳಗಾವಿ, ಅಳ್ನಾವರ ಹಾಗೂ ಸವದತ್ತಿ ರಸ್ತೆಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ ಎಂದ ಜಿಲ್ಲಾಧಿಕಾರಿ, ಮಹಾನಗರದಲ್ಲಿ ಒಟ್ಟು 900 ಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದ್ದು ಆರು ಬಾವಿಯಲ್ಲಿ ವಿಸರ್ಜನೆಗೆ ಅವಕಾಶ ನೀಡಲಾಗಿದೆ ಎಂದರು. ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯವಾಗಿದೆ ಎಂದ ಜಿಲ್ಲಾಧಿಕಾರಿ, ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಮೆರವಣಿಗೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಎಸ್ಪಿ ಗೋಪಾಲ ಬ್ಯಾಕೋಡ, ಡಿಸಿಪಿ ಮಹಾನಿಂಗ ನಂದಗಾವಿ ಇದ್ದರು.ಸಹಾಯವಾಣಿ ಆರಂಭ:ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡುವುದು ಕಂಡು ಬಂದರೆ ಜಿಲ್ಲಾಧಿಕಾರಿ ಕಚೇರಿ 08362447547, ಮಹಾನಗರ ಪಾಲಿಕೆ 9141051611 ಹಾಗೂ ಪೊಲೀಸ್ ಆಯುಕ್ತರ ಕಚೇರಿ 0836-2222603, 9480802002ಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿ ಇಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಪರಿಶೀಲಿಸಿ ಕ್ರಮ:
ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ 11 ದಿನ ಕಾಲಾವಕಾಶ ನೀಡಬೇಕೆಂದು ಅರ್ಜಿಗಳು ಬಂದಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.