ಸಾರಾಂಶ
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಇಲ್ಲಿನ ಮರಾಠಾ ಗಲ್ಲಿಯಲ್ಲಿ ಪ್ರತಿಷ್ಠಾಪಿಸಿರುವ "ಹುಬ್ಬಳ್ಳಿ ಕಾ ಮಹಾರಾಜಾ " ಸೌಂದರ್ಯಕ್ಕೆ ಮನಸೋತ ಭಕ್ತರು ತಂಡೋಪ ತಂಡವಾಗಿ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲದೆ ರಾಜ್ಯಾದ್ಯಂತ ವಿವಿಧೆಡೆಯಿಂದ ಭಕ್ತರ ದಂಡು ಆಗಮಿಸುತ್ತಿದ್ದು ನಿತ್ಯ 25 ಸಾವಿರಕ್ಕೂ ಅಧಿಕ ಜನ ವಿಘ್ನನಿವಾರಕನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಇಲ್ಲಿನ ಮರಾಠಾಗಲ್ಲಿಯಲ್ಲಿ ಶ್ರೀ ಶಿವರಾಯ ಯುವಕ ಮಂಡಳ, ಜೀಜಾಮಾತಾ ಮಹಿಳಾ ಮಂಡಳ, ಶ್ರೀಗಣೇಶ ಉತ್ಸವ ಸಮಿತಿ ಆಶ್ರಯದಲ್ಲಿ ಹುಬ್ಬಳ್ಳಿ ಕಾ ಮಹಾರಾಜ ಮೂರ್ತಿಯನ್ನು ಕೋಲ್ಕತ್ತಾದ ಅಪ್ಪು ಪಾಲ್ ಎಂಬ ಮೂರ್ತಿ ತಯಾರಕರ ತಂಡವು 20 ವರ್ಷಗಳಿಂದ ತಯಾರಿಸಿಕೊಂಡು ಬಂದಿದೆ. ಈ ಮೂರ್ತಿ ತಯಾರಿಸುವುದಕ್ಕಾಗಿಯೇ ಕೋಲ್ಕತ್ತಾದಿಂದ ನಾಲ್ಕೈದು ತಿಂಗಳು ಮೊದಲೇ ಹುಬ್ಬಳ್ಳಿಗೆ ಆಗಮಿಸುವ ಕಲಾವಿದರ ತಂಡವು ಇಲ್ಲಿಯೇ ನೆಲೆಸಿ ಮೂರ್ತಿ ತಯಾರಿಸುತ್ತದೆ.ಹೇಗಿರುತ್ತೆ ತಯಾರಿ?
ಗಣೇಶ ಚತುರ್ಥಿ ಹಬ್ಬದ ನಾಲ್ಕೈದು ತಿಂಗಳು ಮೊದಲೇ ಕೋಲ್ಕತ್ತಾದಿಂದ ಆಗಮಿಸುವ ಅಪ್ಪು ಪಾಲ್ ನೇತೃತ್ವದ 25 ಮೂರ್ತಿ ತಯಾರಕರ ತಂಡವು ಇದಕ್ಕೆ ಬೇಕಾಗುವ ಮಣ್ಣನ್ನು ಕೋಲ್ಕತ್ತಾ(ಗಂಗಾನದಿಯ)ದಿಂದ ಹುಬ್ಬಳ್ಳಿಗೆ ತಂದು ಮೂರ್ತಿ ತಯಾರಿಸುವುದು ವಿಶೇಷ. ಇದರೊಂದಿಗೆ ಸ್ಥಳೀಯ ಮಣ್ಣನ್ನೂ ಬಳಸಲಾಗುತ್ತದೆ.ಅತೀ ಎತ್ತರದ ಗಣೇಶ:
ಈ ಗಜಕಾಯದ ಗಣಪತಿಯು 25 ಅಡಿ ಎತ್ತರದಲ್ಲಿದೆ. ಸುಮಾರು 5 ಟನ್‌ಗೂ ಅಧಿಕ ತೂಕ ಹೊಂದಿದ್ದು, ಸಂಪೂರ್ಣ ಮಣ್ಣಿನಿಂದ ತಯಾರಿಸಿರುವ ಪರಿಸರ ಸ್ನೇಹಿಯಾಗಿದೆ. ಈ ಮೂರ್ತಿ ಕರ್ನಾಟದಲ್ಲಿಯೇ ಅತೀ ಎತ್ತರದ ಮೂರ್ತಿ ಎಂಬ ಹೆಗ್ಗಳಿಕೆ ಹೊಂದಿದೆ. ಪ್ರತಿ ವರ್ಷವೂ 25 ಅಡಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ.25 ಕೆಜಿ ಬೆಳ್ಳಿಯ ಆಭರಣ ಬಳಕೆ:
ಪ್ರತಿ ವರ್ಷವೂ ಈ ಮೂರ್ತಿಗೆ 25 ಕೆಜಿಗೂ ಅಧಿಕ ಬೆಳ್ಳಿಯ ಆಭರಣ ಹಾಕಲಾಗುತ್ತದೆ. ಮೂರ್ತಿಯ ಹಸ್ತ, ಪಾದುಕೆ, ಕೊರಳಲ್ಲಿರುವ ಬೃಹತ್ ಮಾಲೆ, ಮೋದಕ, ಕಿವಿಯೋಲೆಗಳನ್ನು ಸಂಪೂರ್ಣವಾಗಿ ಬೆಳ್ಳಿಯಿಂದ ತಯಾರಿಸಲಾಗುತ್ತದೆ. ಇದರೊಂದಿಗೆ ಉಂಗುರ, ದಂತ, ತ್ರಿಶೂಲಕ್ಕೆ 70 ಗ್ರಾಂಗೂ ಅಧಿಕ ಬಂಗಾರ ಬಳಕೆ ಮಾಡಲಾಗಿದೆ. ಮೂರ್ತಿಯ ದೋತ್ರ(ಪಂಚೆ)ಕ್ಕೆ 25 ಮೀಟರ್ ಗಾತ್ರದ ಬಟ್ಟೆ ಬಳಕೆ ಮಾಡಿರುವುದು ಮತ್ತೊಂದು ವಿಶೇಷ.42 ವರ್ಷಗಳಿಂದ ಪ್ರತಿಷ್ಠಾಪನೆ:
ಇಲ್ಲಿ ಕಳೆದ 42 ವರ್ಷಗಳಿಂದ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗುತ್ತಿದೆ. ಮೊದಲು ಚಿಕ್ಕದಾದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ, ಶಬರಿಮಲೆಯ ಅಯ್ಯಪ್ಪಸ್ವಾಮಿ ಮಂದಿರ, ಅಷ್ಟವಿನಾಯಕ ಮಂದಿರಗಳು, 65 ಅಡಿ ಎತ್ತರದ ಅಮೆರಿಕ ಟಾವರ್, ಅಜಂತಾ ಎಲ್ಲೋರಾ ಗುಹೆ, ಬರ್ನಿಂಗ್ ಟ್ರೇನ್ ಸೇರಿದಂತೆ ಹಲವು ರೂಪಕಗಳನ್ನು ಪ್ರದರ್ಶನದ ವ್ಯವಸ್ಥೆ ಮಾಡಿಲಾಗಿತ್ತು. ಈಗ ಕಳೆದ 20 ವರ್ಷಗಳಿಂದ 25 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ.ಲಕ್ಷಾಂತರ ಭಕ್ತರಿಂದ ವೀಕ್ಷಣೆಸೆ. 7ರಿಂದ 17ರ ವರೆಗೆ 11 ದಿನ ಪ್ರತಿಷ್ಠಾಪನೆಯಾಗುವ ಈ ಹುಬ್ಬಳ್ಳಿ ಕಾ ಮಹಾರಾಜ ಗಣೇಶ ಮೂರ್ತಿ ವೀಕ್ಷಣೆಗೆ ಲಕ್ಷಾಂತರ ಭಕ್ತರು ಆಗಮಿಸುವುದು ವಿಶೇಷ. ನಿತ್ಯವೂ 25 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ. ಜಿಲ್ಲೆಯಲ್ಲದೇ ಸುತ್ತಮುತ್ತಲಿನ ಹತ್ತಾರು ಜಿಲ್ಲೆ, ಗೋವಾ, ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸುತ್ತಾರೆ. ಸೆ. 17ರಂದು ಸಂಜೆ 6ಕ್ಕೆ ಆರಂಭವಾಗುವ ವಿಸರ್ಜನಾ ಮೆರವಣಿಗೆಯು ಮ್ಯಾದಾರ ಓಣಿ, ದಾಜಿಬಾನಪೇಟೆ, ಸಂಗೊಳ್ಳಿ ರಾಯಣ್ಣ ವೃತ್ತ, ಚೆನ್ನಮ್ಮ ವೃತ್ತ, ನಿಲಿಜಿನ್ ರೋಡ, ಭಗತ್‌ಸಿಂಗ್ ವೃತ್ತದ ಮೂಲಕ ಹಾದು ಹೊಸೂರು ಬಾವಿಯಲ್ಲಿ ವಿಸರ್ಜನೆಯಾಗಲಿದೆ ಎಂದು ಸಮಿತಿಯ ಕಾರ್ಯಕರ್ತರು ಕನ್ನಡಪ್ರಭಕ್ಕೆ ತಿಳಿಸಿದರು.