ಜನಸಂಖ್ಯಾ ಸ್ಫೋಟಕ್ಕೆ ನಿಯಂತ್ರಣ ಅಗತ್ಯ: ಅಶೋಕ್ ರೈ

| Published : Aug 04 2024, 01:23 AM IST

ಸಾರಾಂಶ

ಪುತ್ತೂರಿನ ಪುರಭವನದಲ್ಲಿ ತಾಲೂಕು ಮಟ್ಟದ ವಿಶ್ವಜನಸಂಖ್ಯಾ ದಿನಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಜನಸಂಖ್ಯೆಯ ಮೇಲೆ ನಿಯಂತ್ರಣ ಹೇರುವ ಕಾರ್ಯವಾಗದೇ ಹೋದರೆ ದೇಶದ ಆರ್ಥಿಕ ಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಜನಸಂಖ್ಯಾ ನಿಯಂತ್ರಣ ಕುರಿತು ಯುವ ಪೀಳಿಗೆಗೆ ಮನವರಿಕೆ ಮಾಡುವ ಕಾರ್ಯವಾಗಬೇಕಾಗಿದೆ. ಪಠ್ಯ ಪುಸ್ತಕದಲ್ಲಿ ಜನ ಸಂಖ್ಯೆ ನಿಯಂತ್ರಣ ಮಾಡುವ ವಿಚಾರ ತರಬೇಕಾಗಿದೆ. ಜಾತಿ, ಧರ್ಮ ಬಿಟ್ಟು ಎಲ್ಲರೂ ಒಂದಾಗಿ ಜನಸಂಖ್ಯಾ ಸ್ಫೋಟಕ್ಕೆ ನಿಯಂತ್ರಣ ಹಾಕಬೇಕಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಮಂಗಳೂರು, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಆಶ್ರಯದಲ್ಲಿ ಶನಿವಾರ ಪುತ್ತೂರು ಪುರಭವನದಲ್ಲಿ ಆಯೋಜಿಸಲಾದ ವಿಶ್ವ ಜನಸಂಖ್ಯಾ ದಿನಾಚರಣೆ - ೨೦೨೪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ಜನಸಂಖ್ಯೆಯ ಹೆಚ್ಚಳಕ್ಕೆ ಕಡಿವಾಣ ಹಾಕುವ ಬಗ್ಗೆ ಬಹಳಷ್ಟು ಮಂದಿಗೆ ಜಿಜ್ಞಾಸೆಗಳಿವೆ. ಆದರೆ ದೇಶದ ಒಟ್ಟಾರೆ ಪರಿಸ್ಥಿತಿಯನ್ನು ಗಮನಿಸಿದಾಗ ಜನಸಂಖ್ಯಾ ನಿಯಂತ್ರಣದ ಅನಿವಾರ್ಯತೆ ಮನದಟ್ಟಾಗುತ್ತದೆ ಎಂದರು.

ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ನಮಿತಾ ನಾಯ್ಕ್ ಸಂಪನ್ಮೂಲ ವ್ಯಕ್ತಿಯಾಗಿ ಜನಸಂಖ್ಯಾ ನಿಯಂತ್ರಣದ ಕುರಿತು ಮಾಹಿತಿ ನೀಡಿದರು. ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಆರ್. ಲೋಕೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಮಾತನಾಡಿದರು.ಕಾರ್ಯಕ್ರಮದಲ್ಲಿ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಸಾಧನೆಗೈದ ಜನ ಸಂಖ್ಯೆಯ ನಿಯಂತ್ರಣದಲ್ಲಿ ಕೊಡುಗೆ ನೀಡಿದ ಎ.ಎನ್.ಎಂ. ಕುಸುಮಾ, ಆಶಾ ಕಾರ್ಯಕರ್ತೆ ನಳಿನಾಕ್ಷಿ ಹಾಗೂ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಉತ್ತಮ ಆರೋಗ್ಯ ಕೇಂದ್ರ ಪ್ರಶಸ್ತಿ ನೀಡಲಾಯಿತು. ಜನಸಂಖ್ಯಾ ನಿಯಂತ್ರಣ ಕುರಿತ ರೀಲ್ಸ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಅನನ್ಯ ಮತ್ತು ತಂಡ (ಪ್ರಥಮ ಸ್ಥಾನ), ಪಾತಿಮತ್ ಸಾಜಿದ ಮತ್ತು ತಂಡ (ದ್ವಿತೀಯ ಸ್ಥಾನ), ಸತೀಶ್ ಮತ್ತು ತಂಡ(ತೃತೀಯ ಸ್ಥಾನ) ಅವರಿಗೆ ಬಹುಮಾನ ವಿತರಿಸಲಾಯಿತು. ಎನ್.ಎಸ್.ವಿ. ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದ ವಿದ್ಯಾ, ಅಕ್ಷತಾ, ನಂದಿನಿ, ವಿಜಯಲಕ್ಷ್ಮಿ, ತ್ರಿವೇಣಿ, ವೀಣಾ, ದಯಾಕಿರಣಾ, ದಮಯಂತಿ, ಉಷಾ, ಲೀನಾ, ಲಲಿತಾ, ರಶ್ಮಿ, ವಿಜಯಶ್ರೀ, ಚೇತನಾ, ಯಶೋಧರ ಅವರನ್ನು ಗೌರವಿಸಲಾಯಿತು.ವೇದಿಕೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೀಪಾ ಪ್ರಭು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳಿಪಾಡಿ, ಪ್ರಗತಿ ಪಾರ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಪ್ರೀತಾ, ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಜ್ಯೋತಿ ಪುತ್ತೂರಾಯ ಉಪಸ್ಥಿತರಿದ್ದರು.ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರವಿ ವಂದಿಸಿದರು. ಶಿಕ್ಷಕಿ ದೇವಕಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ ಸಹಕರಿಸಿದರು.