ಹಮಾಲರು ಅಕಾಲಿಕವಾಗಿ ಮರಣ ಹೊಂದಿದರೆ ಸಂಘದ ವತಿಯಿಂದ ಗೌರವ ಶ್ರದ್ಧಾಂಜಲಿ ಸಲ್ಲಿಸಿ, ಮೃತರ ಕುಟುಂಬದವರ ನೋವಿಗೆ ಸ್ಪಂದಿಸಿ ಸಾಂತ್ವನ ಹೇಳಿ, ಸಂಘದಿಂದ ಸಾಧ್ಯವಾದ ಆರ್ಥಿಕ ನೆರವು ನೀಡಲಾಗುವುದು.
ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲಾ ಮಂಡಿ ಹಮಾಲಿ ಮತ್ತು ಕೂಲಿ ಕಾರ್ಮಿಕರ ಸಂಘದ ಪ್ರಸಕ್ತ ಸಾಲಿನ ವಾರ್ಷಿಕೋತ್ಸವ ಶುಕ್ರವಾರ ನಗರದ ಎಪಿಎಂಸಿ ಯಾರ್ಡ್ ನಲ್ಲಿರುವ ಸಂಘದ ಕಚೇರಿಯಲ್ಲಿ ನಡೆದು, ಹಮಾಲಿ, ಕೂಲಿ ಕಾರ್ಮಿಕರ ಸಮಸ್ಯೆಗಳು ಹಾಗೂ ಸರ್ಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಚರ್ಚೆ ನಡೆಸಲಾಯಿತು.ಸಂಘದ ಅಧ್ಯಕ್ಷ ಚಿಕ್ಕಹನುಮಂತಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಬಾಬೂ ಜಗಜೀವನರಾಮ್, ಡಾ.ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಹಲವಾರು ವರ್ಷಗಳಿಂದ ಹಮಾಲಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಕಾರ್ಮಿಕರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಸಂಘದ ಅಧ್ಯಕ್ಷ ಚಿಕ್ಕಹನುಮಂತಯ್ಯ ಮಾತನಾಡಿ, ಹಮಾಲರು ಅಕಾಲಿಕವಾಗಿ ಮರಣ ಹೊಂದಿದರೆ ಸಂಘದ ವತಿಯಿಂದ ಗೌರವ ಶ್ರದ್ಧಾಂಜಲಿ ಸಲ್ಲಿಸಿ, ಮೃತರ ಕುಟುಂಬದವರ ನೋವಿಗೆ ಸ್ಪಂದಿಸಿ ಸಾಂತ್ವನ ಹೇಳಿ, ಸಂಘದಿಂದ ಸಾಧ್ಯವಾದ ಆರ್ಥಿಕ ನೆರವು ನೀಡಲಾಗುವುದು. ಅಲ್ಲದೆ, ಆರ್.ಎಂ.ಸಿ ವತಿಯಿಂದ ಅಕಾಲಿಕ ಮರಣ ಹೊಂದಿದ ಹಮಾಲರ ಅಂತ್ಯ ಸಂಸ್ಕಾರ ಕಾರ್ಯಕ್ಕಾಗಿ ಮೃತರ ಕುಟುಂಬಕ್ಕೆ 25 ಸಾವಿರ ರು. ನೆರವು ಹಾಗೂ ಸಕಾಲದಲ್ಲಿ ಎಲ್‌ಐಸಿಯ ವಿಮಾ ಸೌಲಭ್ಯ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.ಪ್ರತಿ ವರ್ಷ ಸಂಘದಿಂದ ಅಂಬೇಡ್ಕರ್ ಜಯಂತಿ, ಬಸವ ಜಯಂತಿ ಆಚರಣೆ ಮಾಡಿ 60 ವರ್ಷ ಮೇಲ್ಪಟ್ಟ ಸಂಘದ ಸದಸ್ಯರಿಗೆ ಧನ ಸಹಾಯ ಮಾಡಲಾಗುವುದು. ಎಲ್ಲಾ ಸದಸ್ಯರು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಲಹೆ, ಸಹಕಾರ ನೀಡಬೇಕು ಎಂದು ಅಧ್ಯಕ್ಷ ಚಿಕ್ಕಹನುಮಯ್ಯ ಕೋರಿದರು.
ಸಂಘದ ಕಾರ್ಯದರ್ಶಿ ಕೆ.ಹುಚ್ಚಹನುಮಯ್ಯ ಮಾತನಾಡಿ, ಎಲ್ಲಾ ಕೂಲಿ ಕಾರ್ಮಿಕರು ಸಂಘಟಿತರಾಗಬೇಕು. ಸಮಸ್ಯೆಗಳ ಬಗ್ಗೆ ಸಂಘದ ಗಮನಕ್ಕೆ ತಂದು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.ಸಹ ಕಾರ್ಯದರ್ಶಿ ಎಂ.ಡಿ. ರಾಮಚಂದ್ರ ಮಾತನಾಡಿ, ಎಲ್ಲಾ ಹಮಾಲಿಗಳು ತಪ್ಪದೇ ಲೈಸೆನ್ಸ್ ಪಡೆದುಕೊಂಡರೆ ಸಂಘದ ಮೂಲಕ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಅವಕಾಶವಾಗುತ್ತದೆ. ಎಲ್ಲಾ ಕೂಲಿ ಕಾರ್ಮಿಕರಿಗೂ ಕಾರ್ಮಿಕ ಇಲಾಖೆಯಿಂದ ಲೇಬರ್ ಕಾರ್ಡ್, ವಿಮಾ ಸೌಲಭ್ಯ ಒದಗಿಸಬೇಕು ಎಂದು ಇಲಾಖೆಗೆ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಎಲ್ಲಾ ಹಮಾಲಿಗಳಿಗೂ ಇಂತಹ ಸೌಕರ್ಯಗಳು ದೊರೆಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಂಘದ ಸಭೆಯ ಅಭಿಪ್ರಾಯದ ಮೇರೆಗೆ ೮ ಜನರನ್ನು ಸಂಘಕ್ಕೆ ನಿರ್ದೇಶಕರನ್ನಾಗಿ ಈ ವೇಳೆ ನೇಮಕ ಮಾಡಿ ಅವರನ್ನು ಗೌರವಿಸಿ ಸಂಘಕ್ಕೆ ಸ್ವಾಗತಿಸಲಾಯಿತು. ಮಂಜುನಾಥ್, ಸುರೇಶ್, ನಾಗರಾಜು, ಲಕ್ಷ್ಮೀ, ಸುಮಿತ್ರ, ಮಾರುಕಟ್ಟೆ ಮಂಜುನಾಥ್, ರಮೇಶ್, ಸಿ.ಬಿ.ಕೆಂಪಯ್ಯ ಸಂಘದ ನಿರ್ದೇಶಕರಾಗಿ ನೇಮಕವಾದರು.ಸಂಘದ ಉಪಾಧ್ಯಕ್ಷ ಮೂರ್ತಿ, ಖಜಾಂಚಿ ತರಕಾರಿ ನಾಗರಾಜು, ನಿರ್ದೇಶಕರಾದ ಸಿದ್ದಯ್ಯ, ಎಲ್.ಡಿ.ಕುಂಭಯ್ಯ, ಗೋವಿಂದಯ್ಯ, ಪೂಜಯ್ಯ, ಎಡ್ವಿನ್, ಕುಂಭಯ್ಯ, ನಾಗರಾಜು, ದೊರೆಬಾಬು, ಜಿ.ಎ.ಸೋಮಶೇಖರ್, ನರಸಿಂಹರಾಜು, ಫೈರೋಜ್, ಕೆಂಪಯ್ಯ, ದೇವರಾಜು, ವಸಂತ್, ಕೆಂಪರಾಜು, ಮೆಹಬೂಬ್ ಪಾಷಾ ಮೊದಲಾದವರು ಭಾಗವಹಿಸಿದ್ದರು.