ಜಿಲ್ಲೆಯ ಮೂಲೆ ಮೂಲೆಯಿಂದ, ಬರೋಬ್ಬರಿ 7 ತಾಲೂಕುಗಳಿಂದ ಆಗಮಿಸಿದ್ದ 187 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ಶಿವಕುಮಾರ ಕುಷ್ಟಗಿ
ಗದಗ: ಪ್ರಶಾಂತ ಪರಿಸರ, ಸುತ್ತಲೂ ಹಕ್ಕಿಗಳ ಇಂಚರ, ತಂಪಾದ ನೆರಳಿನ ಗಿಡ ಮರಗಳು... ಇಂಥ ಆಹ್ಲಾದಕರ ವಾತಾವರಣಕ್ಕೆ ಸಾಕ್ಷಿಯಾಯಿತು ಗದಗ ಮೃಗಾಲಯ. ಭಾನುವಾರದ ಬಿಡುವಿನ ದಿನದಂದು ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳ ಪ್ರತಿಭೆ ಮಿಂದೆದ್ದು, ಧನ್ಯತೆಯ ಭಾವವನ್ನು ಒಡಮೂಡಿಸಿತು.ಜಿಲ್ಲೆಯ ಮೂಲೆ ಮೂಲೆಯಿಂದ, ಬರೋಬ್ಬರಿ 7 ತಾಲೂಕುಗಳಿಂದ ಆಗಮಿಸಿದ್ದ 187 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. 8ನೇ ತರಗತಿಗೆ ಸಾಲುಮರದ ತಿಮ್ಮಕ್ಕ, 9ನೇ ತರಗತಿಗೆ ವನ್ಯಜೀವಿ ಸಂರಕ್ಷಣೆ, 10ನೇ ತರಗತಿಗೆ ವನ್ಯಜೀವಿ ಮತ್ತು ಮಾನವ ಸಂಘರ್ಷ ಈ ವಿಷಯದ ಮೇಲೆ ತಮ್ಮ ಚಿತ್ರಗಳನ್ನು ಬಿಡಿಸಿ, ಅದಕ್ಕೆ ಸೂಕ್ತವಾದ ಬಣ್ಣವನ್ನು ಬಳಿಯುವ ಮೂಲಕ ಮಕ್ಕಳ ಕೈಯಲ್ಲಿ ಬಣ್ಣಗಳು ಮಾತಾಡಿದವು. ಸ್ಪರ್ಧೆಯ ನಿಯಮಗಳಿಗಿಂತ ಹೆಚ್ಚಾಗಿ, ಯಾವುದೇ ಕಟ್ಟಳೆಗಳಿಲ್ಲದೆ ಮನಸ್ಸಿಗೆ ಬಂದಂತೆ ಕುಳಿತು ಚಿತ್ರ ಬಿಡಿಸುತ್ತಿದ್ದ ಮಕ್ಕಳ ಮುಖದಲ್ಲಿ ಅಚ್ಚರಿಯ ಸಂತೋಷ ಅರಳಿತ್ತು.
ಅರಳಿದ ಸಾಲು ಮರದ ತಿಮ್ಮಕ್ಕ: ಸ್ಪರ್ಧೆಯ ವಿಶೇಷ ಆಕರ್ಷಣೆಯೆಂದರೆ ಮಕ್ಕಳ ಕುಂಚದಲ್ಲಿ ಅರಳಿದ ಮಹಾನ್ ಪರಿಸರಪ್ರೇಮಿ ಸಾಲು ಮರದ ತಿಮ್ಮಕ್ಕ ಅವರ ಭಾವಚಿತ್ರ. ಪ್ರಕೃತಿಯ ಮಧ್ಯೆ ಕೂತು ಪ್ರಕೃತಿಯ ಕರುಳಬಳ್ಳಿ ಸಾಲು ಮರದ ತಿಮ್ಮಕ್ಕನ ಚಿತ್ರ ಬಿಡಿಸಿದ್ದು ಒಂದು ಅಪೂರ್ವ ಅನುಭವ. ಕೇವಲ ಕಾಗದದ ಮೇಲೆ ಚಿತ್ರವಲ್ಲ, ಮಕ್ಕಳ ಮನಸ್ಸಿನಲ್ಲಿದ್ದ ಪರಿಸರದ ಮೇಲಿನ ಪ್ರೀತಿ, ಆ ಮಹಾನ್ ಚೇತನಕ್ಕೆ ಅವರು ಸಲ್ಲಿಸಿದ ಭಾವನಾತ್ಮಕ ಗೌರವ ಇದಾಗಿತ್ತು ಎಂದರೆ ತಪ್ಪಾಗಲಾರದು.ಕಲೆಯ ಕಲರವ, ಸಂತೋಷದ ನಲಿವುಮೃಗಾಲಯದ ಶಾಂತ ವಾತಾವರಣ, ಸುತ್ತಲಿನ ಪ್ರಕೃತಿಯ ತಂಪು, ಹಕ್ಕಿಗಳ ನಿರಂತರ ಕಲರವ, ಇಡೀ ಸ್ಪರ್ಧಾ ಸ್ಥಳವನ್ನೇ ಒಂದು ನಂದನವನದಂತೆ ಮಾಡಿತ್ತು. ಕಲಾವಿದ ಮಕ್ಕಳ ನಗು, ಅವರ ಕುಂಚದ ನುರಿತ ಚಲನೆ, ಮತ್ತು ಅಮೂಲ್ಯವಾಗಿ ಅರಳಿದ ಚಿತ್ರಗಳು - ಇವೆಲ್ಲವೂ ಕೇವಲ ಸ್ಪರ್ಧೆಯ ದೃಶ್ಯಗಳಾಗಿರದೆ, ನಮ್ಮ ನಾಡಿನ ಮುಂದಿನ ಪೀಳಿಗೆಯಲ್ಲಿರುವ ಕಲೆ ಮತ್ತು ಪರಿಸರ ಪ್ರಜ್ಞೆಯ ಆಳವನ್ನು ಸಾರಿ ಹೇಳುವ ಭಾವಪೂರ್ಣ ದೃಶ್ಯಗಳಾಗಿದ್ದವು. ಮಕ್ಕಳ ಈ ಸಂತೋಷದಾಯಕ ಅಭಿವ್ಯಕ್ತಿಗೆ ಗದಗ ಮೃಗಾಲಯ ಸಾಕ್ಷಿಯಾಗಿತ್ತು.
ವಿನೂತನ ಪ್ರಯತ್ನ: ಚಿತ್ರಕಲಾ ಸ್ಪರ್ಧೆ ಇದೊಂದು ವಿನೂತನ ಮತ್ತು ವಿಶೇಷ ಪ್ರಯತ್ನವಾಗಿದೆ. ಇದನ್ನು ಅತ್ಯಂತ ಉತ್ಸಾಹದಿಂದ ಆಯೋಜಿಸಲು ವೇದಿಕೆ ಕಲ್ಪಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಡಿಡಿಪಿಐ ಆರ್.ಎಸ್. ಬುರುಡಿ ತಿಳಿಸಿದರು.ಸಾಟಿ ಇಲ್ಲ: ಮಕ್ಕಳಿಗೆ ಉತ್ತಮ ವೇದಿಕೆ ನೀಡುವುದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆ ವಿಶೇಷ ಕಾಳಜಿಯಿಂದ ಚಿತ್ರಕಲಾ ಸ್ಪರ್ಧೆ ಆಯೋಜಿಸಿದೆ. ಇಂದು ಮಕ್ಕಳು ಬಿಡಿಸಿದ ಚಿತ್ರಗಳನ್ನು ಗಮನಿಸಿದಲ್ಲಿ, ಜಿಲ್ಲೆಯ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗೆ ಸರಿಸಾಟಿಯೇ ಇಲ್ಲ ಎಂದು ಆರ್‌ಎಫ್‌ಒ ಸ್ನೇಹಾ ಕೊಪ್ಪಳ ತಿಳಿಸಿದರು.