ಕುಕನೂರು: ತಾಲೂಕಿನ ವೀರಾಪುರ ಗ್ರಾಮದಲ್ಲಿ ಅಂಬೇಡ್ಕರ್ ಮತ್ತು ಇತರ ಮಹಾನ್ ವ್ಯಕ್ತಿಗಳ ಭಾವಚಿತ್ರಗಳಿಗೆ ಬುಧವಾರ ಮಧ್ಯರಾತ್ರಿ ಕಿಡಿಗೇಡಿಗಳು ಸಗಣಿ ಬಳಿದು ಅಪಮಾನಿಸಿದ ಘಟನೆ ನಡೆದಿದೆ.
ಕಿಡಿಗೇಡಿಗಳ ಕೃತ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ದಲಿತ ಸಂಘಟನೆ ಮುಖಂಡರು ಗುರುವಾರ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ವೀರಾಪುರ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಅಳವಡಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಮಹಾತ್ಮ ಜ್ಯೋತಿಬಾ ಫುಲೆ, ವಿಶ್ವಗುರು ಬಸವಣ್ಣ, ಗೌತಮ ಬುದ್ಧ, ಪೆರಿಯಾರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಭಾವಚಿತ್ರಗಳಿಗೆ ದುಷ್ಕರ್ಮಿಗಳು ಸಗಣಿ ಬಳಿದು, ವಿಕೃತಿ ಮೆರೆದಿದ್ದಾರೆ. ಸಮಾಜದ ಶಾಂತಿ ಕದಡುವ ಈ ಹೇಯ ಕೃತ್ಯವನ್ನು ಗ್ರಾಮಸ್ಥರು ಮತ್ತು ದಲಿತ ಪರ ಸಂಘಟನೆಗಳು ಖಂಡಿಸಿದವು. ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಕಠಿಣ ಎಚ್ಚರಿಕೆ: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ಎಸ್.ಪಿ. ನಾಯಕ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿ, ಮಹಾಪುರುಷರಿಗೆ ಮಾಡಿದ ಈ ಅವಮಾನ ಅಕ್ಷಮ್ಯ. ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಈಗಾಗಲೇ ತನಿಖೆ ಚುರುಕುಗೊಳಿಸಲಾಗಿದೆ. ಯಾರೇ ಆಗಿರಲಿ, ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.ತಹಸೀಲ್ದಾರ್ ಬಸವರಾಜ ಬೆಣ್ಣೆ ಶಿರೂರು ಮಾತನಾಡಿ, ಹೇಯ ಕೃತ್ಯ ಎಸಗಿರುವ ಕಿಡಿಗೇಡಿಗಳ ಪತ್ತೆ ಮಾಡಲಾಗುವುದು. ಅವರು ಯಾರೇ ಆಗಿದ್ದರೂ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದರು.
ಆಕ್ರೋಶ:ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಮತ್ತು ಚಂದ್ರಕಾಂತ ಕಾದ್ರೋಳಿ ಬಣದ ಜಿಲ್ಲಾಧ್ಯಕ್ಷ ನಿಂಗು ಜಿ.ಎಸ್. ಬೆಣಕಲ್ಲ ಮತ್ತು ತಾಲೂಕು ಸಂಘದ ಪದಾಧಿಕಾರಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಬಸವರಾಜ ನಡಲುಮನಿ, ಗಾಳೆಪ್ಪ ದೊಡ್ಡಮನಿ, ಪ್ರಕಾಶ ವೀರಾಪುರ ಸೇರಿದಂತೆ ಅನೇಕ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು, ಇಲ್ಲದಿದ್ದರೆ ಹೋರಾಟ ಜಿಲ್ಲೆಯಾದ್ಯಂತ ವಿಸ್ತರಿಸಲಾಗುವುದು ಎಂದು ಎಚ್ಚರಿಸಿದರು.
ದಲಿತ ಮುಖಂಡ ಎಂ.ಡಿ. ಗಾಳೆಪ್ಪ ಮಾತನಾಡಿ, ಗ್ರಾಮದಲ್ಲಿ ಮೇಲ್ವರ್ಗದವರಿಗೂ ಮತ್ತು ದಲಿತರಿಗೂ ಆಗಾಗ ವೈಷಮ್ಯವಿತ್ತು. ಅಂಬೇಡ್ಕರ್ ಅವರಿಗೆ ಅಷ್ಟೇ ಅಲ್ಲದೆ ರಮಾಬಾಯಿ, ರಾಮಜಿ, ಬಸವಣ್ಣ, ಬುದ್ಧ, ಪೆರಿಯಾರ್, ಶಾಹು ಮಹಾರಾಜ್, ಜ್ಯೋತಿಬಾ ಫುಲೆ, ಬಾಬು ಜಗಜೀವನ್ ರಾಮ್, ಸಾವಿತ್ರಿಬಾ ಫುಲೆ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಗಳಿಗೂ ಸಗಣಿ ಎಸೆದು ಅವಮಾನ ಮಾಡಿದ್ದಾರೆ. ಇಂತಹ ಕಿಡಿಗೇಡಿಗಳನ್ನು ಶೀಘ್ರದಲ್ಲಿ ಬಂಧಿಸಿ ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ಹೇಳಿದರು.
ನಂತರ ದಲಿತ ಸಂಘಟನೆಯವರು ಅಂಬೇಡ್ಕರ್ ಹಾಗೂ ಗಣ್ಯರ ಭಾವಚಿತ್ರಕ್ಕೆ ಸಗಣಿ ಎಸೆದವರನ್ನು ಬೇಗ ಪತ್ತೆ ಮಾಡಿ ಬಂಧಿಸಬೇಕು ಎಂದು ಕುಕನೂರು ಪೊಲೀಸ್ ಠಾಣೆಗೆ ದೂರು ನೀಡಿದರು. ಪ್ರಕರಣ ದಾಖಲಾದ ಆನಂತರ ವಾತಾವರಣ ಹಾಗೂ ಪ್ರತಿಭಟನೆಯನ್ನು ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಸಿಪಿಯ ಮೌನೇಶ್ವರ, ತಾಪಂ ಇಟೊ ಸಂತೋಷ ಬಿರಾದಾರ, ತಹಸೀಲ್ದಾರ್ ಬಸವರಾಜ ಬೆಣ್ಣೆ ಶಿರೂರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಶಿಧರ ಸಕ್ರಿ, ಕ್ರೈಂ ಪಿಎಸ್ಐ ನಾಗಪ್ಪ, ಪಿಎಸ್ಐ ಎಸ್.ಪಿ. ನಾಯಕ್, ಟಿ. ಗುರುರಾಜ, ಆರ್.ಐ. ರಂಗನಾಥ, ಪಿಡಿಒ ಚನ್ನಬಸಪ್ಪ, ವಿ.ಎ. ಮಮತಾ, ವಲಯ ಅರಣ್ಯಾಧಿಕಾರಿ ಬಸವರಾಜ ಗೋಗೆರಿ, ಉಪವಲಯ ಅರಣ್ಯಾಧಿಕಾರಿ ಬಾಬುರಾವ್ ಜಗತಾಪ ಹಾಗೂ ಅಧಿಕಾರಿ ವರ್ಗದವರ ನೇತೃತ್ವದಲ್ಲಿ ಶಾಂತಗೊಳಿಸಲಾಯಿತು.ಗಣ್ಯರ ಭಾವಚಿತ್ರಕ್ಕೆ ಎಸೆದ ಸಗಣಿಯನ್ನು ಸ್ವಚ್ಛಗೊಳಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ದಲಿತ ಮುಖಂಡ ಯಲ್ಲಪ್ಪ ಮುದ್ಲಾಪುರ, ನಿಂಗು ಬೆಣಕಲ್ ಹಾಗೂ ಗ್ರಾಮಸ್ಥರು ಇದ್ದರು.
ವೀರಾಪುರ ಗ್ರಾಮದ ಅಂಬೇಡ್ಕರ್ ವೃತ್ತ ಹಾಗೂ ಮಹನೀಯರ ಭಾವಚಿತ್ರಕ್ಕೆ ಸಗಣಿ ಎರಚಿರುವುದು ನಿಜಕ್ಕೂ ಖಂಡನೀಯ. ಗ್ರಾಮದಲ್ಲಿ ಅತ್ಯಂತ ಸುಂದರವಾಗಿ ರಚಿಸಿರುವ ಡಾ. ಅಂಬೇಡ್ಕರ್ ವೃತ್ತ ಹಾಗೂ ಅದರ ಸುತ್ತಲಿರುವ ದಾರ್ಶನಿಕರು, ಮಹನೀಯರ ಭಾವಚಿತ್ರಗಳಿಗೆ ದುಷ್ಕರ್ಮಿಗಳು ಸಗಣಿ ಎಸೆದಿರುವುದು ನಿಜಕ್ಕೂ ಖೇದದ ಸಂಗತಿ. ತಪ್ಪಿಸ್ಥರನ್ನು ಬೇಗನೆ ಗುರುತಿಸಿ ತಕ್ಕ ಶಿಕ್ಷೆಗೆ ಒಳಪಡಿಸಬೇಕು. ಈ ರೀತಿಯ ಘಟನೆಗಳು ಮುಂದೆ ಆಗದಿರುವ ರೀತಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರಕುಕನೂರು ತಾಲೂಕಿನ ವೀರಾಪುರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ವೃತ್ತದ ಸುತ್ತ ಇರುವ ಗಣ್ಯರ ಭಾವಚಿತ್ರಕ್ಕೆ ಕಿಡಿಗೇಡಿಗಳು ಸಗಣಿ ಎರಚಿರುವುದನ್ನು ಖಂಡಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.