ಸಾರಾಂಶ
ಕುದೂರು: ನಾಡಿನ ಎಲ್ಲಾ ದೇವಾಲಯಗಳಲ್ಲೂ ಬೆಳಗಿನ ಜಾವ ಪೂಜಾ ಕೈಂಕರ್ಯ ನಡೆಯುತ್ತದೆ ಎಂದರೆ ಅದು ಧನುರ್ಮಾಸದಲ್ಲಿ ಮಾತ್ರ. ಇಂತಹ ದಿನಗಳಲ್ಲಿ ಬೆಟ್ಟದಲ್ಲಿರುವ ದೇವಾಲಯಗಳಲ್ಲಿ ಪಾದಯಾತ್ರೆ ಮಾಡಿದರೆ ಒಂದು ರೀತಿಯ ಧನಾತ್ಮಕ ಶಕ್ತಿ ನಮ್ಮೊಳಗೆ ಉಂಟಾಗುತ್ತದೆ ಎಂದು ಜಡೇದೇವರ ಮಠದ ಇಮ್ಮಡಿ ಶ್ರೀ ಬಸವಲಿಂಗಸ್ವಾಮೀಜಿ ತಿಳಿಸಿದರು.
ಕುದೂರು ಮತ್ತು ಮಾಗಡಿ ಭಕ್ತರುಧನುರ್ಮಾಸ ಸಂದರ್ಭದಲ್ಲಿ ಏರುಮಲೆ ಬಸವನ ಹಾದಿಯ ಮಲೆಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ ಸಂದರ್ಭದಲ್ಲಿ ಮಾತನಾಡಿದರು.ಇದೊಂದು ರೀತಿಯ ಯೋಗವಿದ್ದಂತೆ. ಯೋಗ ಎಂದರೆ ದೇಹ ದಂಡನೆ ಎಂದು ಒಂದರ್ಥವಾದರೆ ಬೆಳಗಿನ ಜಾವದ ಸಂದರ್ಭದಲ್ಲಿ ಪ್ರಕೃತಿಯ ಸೊಬಗಿನ ಆನಂದವನ್ನು ಅನುಭವಿಸಿ ಬೆಟ್ಟ ಹತ್ತುವುದು ಕೂಡಾ ಯೋಗ ಇದ್ದವರಿಗೆ ಸಾದ್ಯ ಎಂಬುದು ಇನ್ನೊಂದು ಅರ್ಥವಾಗುತ್ತದೆ. ದೇಹದಂಡನೆ ಮಾಡಿದರೆ ಮನಸ್ಸು ಮಾಗುತ್ತದೆ ಎಂದು ಹೇಳಿದರು.
ಪಾದಯಾತ್ರೆ ಸಮಿತಿಯ ಮುಖ್ಯಸ್ಥ ರಮೇಶ್ ಮಾತನಾಡಿ, ಭಾರತೀಯ ಪರಂಪರೆಗಳಲ್ಲಿ ಕಾಲ್ನಡಿಗೆಯಲ್ಲಿ ದೇವರ ದರ್ಶನ ಮಾಡುವುದು ಎಂದರೆ ಮನಸಿಗೆ ಸಮಾಧಾನವಾಗುವ ವಿಷಯ ಎಂದು ತಿಳಿಸಿದರು.ಛಾಯಾಗ್ರಾಹಕ ಸಂಘದ ಮುಖ್ಯಸ್ಥ ಮಹೇಶ್ ಮಾತನಾಡಿ, ಮಾಡುವ ಕಾರ್ಯಗಳಲ್ಲಿ ನಾವು ಭಗವಂತನನ್ನು ಕಾಣಬಹುದು ಎಂಬ ತತ್ವವನ್ನು ಅತ್ಯಂತ ಸುಲಭವಾಗಿ ಭಾರತೀಯ ಪರಂಪರೆ ತಿಳಿಸಿಕೊಡುವ ಕೆಲಸ ಮಾಡಿದೆ ಎಂದರು.
ಪಾದಯಾತ್ರಿ ರಮೇಶ್ ಮಾತನಾಡಿ, ನಿರಂತರವಾಗಿ16 ವರ್ಷದಿಂದ ಪಾದಯಾತ್ರೆ ಮಾಡಿಕೊಂಡು ಬರುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಧನುರ್ಮಾಸದ ಬೆಳಗಿನ ಜಾವದಲ್ಲಿ ಏರುಮಲೈ ಮಹದೇಶ್ವರ ಸ್ವಾಮಿಯ ಬೆಟ್ಟ ಹತ್ತುವುದು ನಿಜಕ್ಕೂ ಪುಣ್ಯದ ಕೆಲಸವೇ ಸರಿ ಎಂದರು.ಈ ಸಂದರ್ಭದಲ್ಲಿ ಸಮಿತಿ ಸದಸ್ಯ ರುದ್ರೇಶ್, ಪಂಡಿತ್ ಮಹೇಶ್, ಮಂಜುನಾಥ್ ಇತರರಿದ್ದರು. 30ಕೆಆರ್ ಎಂಎನ್ 14.ಜೆಪಿಜಿ
ಜಡೆದೇವರ ಮಠದ ಇಮ್ಮಡಿ ಶ್ರೀ ಬಸವಲಿಂಗಸ್ವಾಮೀಜಿ ನೇತೃತ್ವದಲ್ಲಿ ಕುದೂರು, ಮಾಗಡಿ, ಹೊಸಪೇಟೆಯ ನೂರಾರು ಭಕ್ತರು ಮಲೆಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಬೆಳೆಸಿದರು,