ಸಾರಾಂಶ
ಮಾಗಡಿ: ಇಂದಿನ ಯುವ ಪೀಳಿಗೆಗೆ ಕುವೆಂಪು ಸಂದೇಶಗಳು ಸ್ಪೂರ್ತಿದಾಯಕವಾಗಿವೆ ಎಂದು ಹಿರಿಯ ಪತ್ರಕರ್ತ ತಿರುಮಲೆ ಶ್ರೀನಿವಾಸ್ ಹೇಳಿದರು.
ಮಾಗಡಿ: ಇಂದಿನ ಯುವ ಪೀಳಿಗೆಗೆ ಕುವೆಂಪು ಸಂದೇಶಗಳು ಸ್ಪೂರ್ತಿದಾಯಕವಾಗಿವೆ ಎಂದು ಹಿರಿಯ ಪತ್ರಕರ್ತ ತಿರುಮಲೆ ಶ್ರೀನಿವಾಸ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ದಿನಪತ್ರಿಕೆ ವರದಿಗಾರರ ಬಳಗ ಆಯೋಜಿಸಿದ್ದ ಕುವೆಂಪು 119ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಪೀಳಿಗೆ ರಾಷ್ಟ್ರಕವಿ ಕುವೆಂಪು ರಚಿಸಿರುವ ಪುಸ್ತಕಗಳನ್ನು ಓದಬೇಕು. ಕನ್ನಡದ ಬಗ್ಗೆ ಕುವೆಂಪು ಅವರ ಚಿಂತನೆ, ಕಾಳಜಿ, ಮಾತಿನ ಪ್ರಜ್ಞೆ, ರೈತರ ಬಗ್ಗೆ ಗೌರವ ಎಲ್ಲವೂ ಸ್ಪೂರ್ತಿದಾಯಕ. "ಬಾರಿಸು ಕನ್ನಡ ಡಿಂಡಿಮವ " ಕಾವ್ಯ ಅವರಿಗೆ ಕನ್ನಡದ ಬಗೆಗಿದ್ದ ಅಭಿಮಾನವನ್ನು ತೋರಿಸುತ್ತದೆ. "ಜೈ ಭಾರತ ಜನನಿಯ ತನುಜಾತೆ " ಅರ್ಥಪೂರ್ಣ ನಾಡಗೀತೆ ನೀಡಿದ ನಮ್ಮ ವಿಶ್ವಮಾನವ ಕವಿ ಕುವೆಂಪು ಎಂದು ತಿಳಿಸಿದರು.ಹಿರಿಯ ಪತ್ರಕರ್ತ ಹಾಗೂ ನಿವೃತ್ತ ಶಿಕ್ಷಕ ಮಾರಣ್ಣ ಮಾತನಾಡಿ, ಸಾಹಿತ್ಯ ಲೋಕದಲ್ಲಿ ತನ್ನದೆ ಆದ ಕೊಡುಗೆಯನ್ನು ಕುವೆಂಪು ನೀಡಿದ್ದಾರೆ. ರಾಮಾಯಣಂ ದರ್ಶನ ಕೃತಿಗೆ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ಬಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಪ್ರತಿಯೊಬ್ಬರು ವಿಶ್ವಮಾನ ಸಂದೇಶ ಸಾರಿದ ಕುವೆಂಪು ಅವರ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡಬೇಕು. ಅವರ ಕೃತಿಗಳಲ್ಲಿನ ಸಾರಾಂಶವನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಅವರನ್ನು ಗೌರವಿದಂತೆ ಆಗುತ್ತದೆ ಎಂದು ತಿಳಿಸಿದರು.
ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಇದೇ ವೇಳೆ ತಾಲೂಕು ಪತ್ರಕರ್ತರಾದ ಹೊಸಪೇಟೆ ಮಾದೇಶ್, ಚಕ್ರಬಾವಿ ಸುಧೀಂದ್ರ, ಸಿದ್ದಲಿಂಗೇಶ್ವರ್, ದೊಡ್ಡಿ ಜಗದೀಶ್, ಗಿರೀಶ್, ನಾಗೇಶ್ ಸೇರಿದಂತೆ ಇತರರು ಭಾಗವಹಿಸಿದರು.29ಮಾಗಡಿ1: ಮಾಗಡಿಯಲ್ಲಿ ರಾಜ್ಯ ದಿನಪತ್ರಿಕೆ ವರದಿಗಾರರ ಬಳಗದ ಪದಾಧಿಕಾರಿಗಳು ಕುವೆಂಪು 119ನೇ ಜಯಂತಿ ಕಾರ್ಯಕ್ರಮವನ್ನು ಆಚರಿಸಿದರು.