ಸಾರಾಂಶ
- ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಕಾರ್ಯ ಒತ್ತಡ ನಿರ್ವಹಣೆ ಕಾರ್ಯಾಗಾರ । ವ್ಯಕ್ತಿಯಲ್ಲಿ ನಿತ್ಯ 80 ಸಾವಿರ ಆಲೋಚನೆ ಮೂಡುತ್ತವೆ: ಮನೋಶಾಸ್ತ್ರಜ್ಞ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಪ್ರತಿಯೊಬ್ಬ ವ್ಯಕ್ತಿಯಲ್ಲೂ ದಿನಕ್ಕೆ 40ರಿಂದ 80 ಸಾವಿರ ಆಲೋಚನೆಗಳು ಮನಸ್ಸಿನಲ್ಲಿ ಮೂಡಲಿದ್ದು, ಇದರಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಆಯ್ದುಕೊಂಡಾಗ ಮಾತ್ರ ಜೀವನದಲ್ಲಿ ಒತ್ತಡ ಮುಕ್ತರಾಗಿ, ಲವಲವಿಕೆಯಿಂದ ಇರಲು ಸಾಧ್ಯ ಎಂದು ಮನೋಶಾಸ್ತ್ರಜ್ಞ ಡಾ. ಪಿ.ಆರ್. ಸುಭಾಶ್ಚಂದ್ರನ್ ಹೇಳಿದರು.ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಬುಧವಾರ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಕಾರ್ಯ ಒತ್ತಡ ನಿರ್ವಹಣೆ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ದೈನಂದಿನ ಬದುಕಿನಲ್ಲಿ ಪ್ರತಿಯೊಬ್ಬರೂ ಸಕಾರಾತ್ಮಕ ಚಿಂತನೆ, ಆಲೋಚನೆ ಮಾಡಬೇಕು ಎಂದರು.
ಮಲಗಿ ಎದ್ದು, ರಾತ್ರಿ ಮಲಗುವವರೆಗೂ ಮನುಷ್ಯನ ತಲೆಯಲ್ಲಿ ಹಲವಾರು ಚಿಂತನೆ ಬರುತ್ತವೆ. ಅವುಗಳಲ್ಲಿ ಕರ್ತವ್ಯದ ಸ್ಥಳ, ಕುಟುಂಬದ್ದು, ನೆರೆಹೊರೆ, ಸಂಬಂಧಿಗಳು, ಕೆಲಸದ ಒತ್ತಡ, ವ್ಯವಹಾರ ಹೀಗೆ ನಾನಾ ಆಲೋಚನೆ ಮೂಡುತ್ತಿರುತ್ತವೆ. ಅವುಗಳಲ್ಲಿ ಕೆಲ ಭಾವನಾತ್ಮಕ, ಕೆಲವು ಸಂತೋಷ, ಮತ್ತೆ ಕೆಲವು ದುಃಖ, ನೋವು, ಸಂಕಟ, ಕರುಣೆ, ಪ್ರೀತಿ, ಭಕ್ತಿ ಸೇರಿದಂತೆ ಅನೇಕ ಭಾವ ವಿಕಾರಗಲು ಮೂಡುತ್ತವೆ. ಅವುಗಳಲ್ಲಿ ಯಾವುದು ಸಕಾರಾತ್ಮಕವೋ ಅಂತಹ ಆಲೋಚನೆಗಳನ್ನು ಮಾತ್ರ ಪರಿಗಣಿಸಿ, ನಕಾರಾತ್ಮಕ ಚಿಂತನೆ ಕೈ ಬಿಡಬೇಕು ಎಂದು ಸಲಹೆ ನೀಡಿದರು.ಮಕ್ಕಳ ಬಗ್ಗೆ ಚಿಂತನೆ ಮಾಡಿ, ಇತರರಿಗೆ ಹೋಲಿಸುವುದುಂಟು. ಆದರೆ, ಅಂತಹ ಮಕ್ಕಳ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಕೆಲಸ ಆಗಬೇಕೆ ಹೊರತು, ಹೋಲಿಕೆ ಮಾಡಬಾರದು. ಮಕ್ಕಳ ಸಾಮರ್ಥ್ಯ ವೃದ್ಧಿಗೆ ಏನು ಮಾಡಬೇಕೆಂಬ ಆಲೋಚನೆ ಇಲ್ಲಿ ಬಹುಮುಖ್ಯ. ಒತ್ತಡದಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ಒತ್ತಡಗಳನ್ನು ತಲೆಭಾರವಾಗಿ ತೆಗೆದುಕೊಳ್ಳದೇ, ಎಲ್ಲ ಕೆಲಸಗಳನ್ನು ಸೂಕ್ಷ್ಮ ತೆಯಿಂದ ನಿರ್ವಹಿಸಬೇಕು. ಆಗ ಮಾತ್ರ ಒತ್ತಡದ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯ. ಸಕಾರಾತ್ಮಕ ಚಿಂತನೆಗಳು ಒತ್ತಡದ ಬದುಕಿನಿಂದ ಹೊರಬರಲು ಸಹಕಾರಿ ಆಗುತ್ತವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮಾತನಾಡಿ, ಪೊಲೀಸ್ ಕರ್ತವ್ಯದ ವೇಳೆ ಅನೇಕ ಒತ್ತಡಗಳು ಸಹಜ. ದೈಹಿಕ, ಮಾನಸಿಕವಾಗಿ ಹಲವಾರು ಒತ್ತಡದಲ್ಲೇ ಕಾರ್ಯನಿರ್ವಹಿಸಬೇಕಾಗುತ್ತದೆ. ಇವುಗಳ ಜೊತೆಗೆ ವೈಯಕ್ತಿಕ ಜೀವನವೂ ಬಹುಮುಖ್ಯ. ಇಂತಹ ಸಮಯದಲ್ಲಿ ಜೀವನ ಸಮತೋಲನ ಕಾಪಾಡಲು ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯದ ಕಡೆಗೂ ಗಮನ ಮುಖ್ಯ. ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಅನುಕೂಲ ಆಗಲೆಂದು ಈ ಕಾರ್ಯಾಗಾರ ಆಯೋಜಿಸಿದ್ದು, ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಡಿವೈಎಸ್ಪಿಗಳಾದ ಮಲ್ಲೇಶ ದೊಡ್ಡಮನಿ, ಪ್ರಶಾಂತ ಸಿದ್ದನಗೌಡರ, ಡಿಎಆರ್‌ನ ಪಿ.ಬಿ.ಪ್ರಕಾಶ, ಚನ್ನಗಿರಿ ಉಪ ವಿಭಾಗದ ಉಜ್ಜಿನಿಕೊಪ್ಪ, ಬೆರಳು ಮುದ್ರೆ ಘಟಕದ ರುದ್ರೇಶ, ಎಸ್‌ಪಿ ಕಚೇರಿ ಸಹಾಯಕ ಆಡಳಿತಾಧಿಕಾರಿ ಮಹಬೂಬ್, ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿ ಇದ್ದರು.
ಇದೇ ವೇಳೆ ಎಸ್‌ಪಿ ಉಮಾ ಪ್ರಶಾಂತ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾವಿಧಿ ಬೋಧಿಸಿದರು.- - - -12ಕೆಡಿವಿಜಿ4:
ದಾವಣಗೆರೆ ಎಸ್‌ಪಿ ಕಚೇರಿಯಲ್ಲಿ ಬುಧವಾರ ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಕಾರ್ಯ ಒತ್ತಡ ನಿರ್ವಹಣೆ ಕಾರ್ಯಾಗಾರವನ್ನು ಡಾ.ಸುಭಾಶ್ಚಂದ್ರನ್ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಎಸ್‌ಪಿ ಉಮಾ ಪ್ರಶಾಂತ, ಮನೋಶಾಸ್ತ್ರಜ್ಞ ಡಾ.ಪಿ.ಆರ್..ಸುಭಾಶ್ ಚಂದ್ರನ್, ವಿಜಯಕುಮಾರ ಸಂತೋಷ, ಜಿ.ಮಂಜುನಾಥ, ಪಿ.ಬಿ.ಪ್ರಕಾಶ ಇದ್ದರು. -12ಕೆಡಿವಿಜಿ5, 6:ದಾವಣಗೆರೆ ಎಸ್‌ಪಿ ಕಚೇರಿಯಲ್ಲಿ ಬುಧವಾರ ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ಮನೋಶಾಸ್ತ್ರಜ್ಞ ಡಾ. ಪಿ.ಆರ್. ಸುಭಾಶ್ಚಂದ್ರನ್ ನಡೆಸಿಕೊಟ್ಟ ಕಾರ್ಯ ಒತ್ತಡ ನಿರ್ವಹಣೆ ಕಾರ್ಯಾಗಾರದಲ್ಲಿ ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿಗಳು ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡರು.