ಸರ್ಕಾರಿ ಶಾಲೆಗಳ ಕುರಿತು ಧನಾತ್ಮಕ ಚಿಂತನೆ ಅಗತ್ಯ: ಡೀಸಿ ಬಸವರಾಜು

| Published : Jul 25 2025, 12:30 AM IST

ಸರ್ಕಾರಿ ಶಾಲೆಗಳ ಕುರಿತು ಧನಾತ್ಮಕ ಚಿಂತನೆ ಅಗತ್ಯ: ಡೀಸಿ ಬಸವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಕೆಲ ಜಾಗೃತ ಪಾಲಕರು ಸಮಾಜದ ಬದಲಾವಣೆಗೆ ಮಾದರಿಯಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ವೇದಿಕೆ ಇಂತಹ ಪೋಷಕರು ಹಾಗೂ ಮಕ್ಕಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಸಕಾರಾತ್ಮಕ ಸಂದೇಶ ನೀಡುತ್ತಿದೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಸರ್ಕಾರಿ ಶಾಲೆಗಳಲ್ಲಿ ಮತ್ತು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಭವಿಷ್ಯಕ್ಕೆ ಹಿನ್ನಡೆಯಾಗುತ್ತದೆ ಎಂಬ ತಪ್ಪು ಕಲ್ಪನೆ ಬೇಸರದ ಸಂಗತಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅಭಿಪ್ರಾಯಪಟ್ಟರು.

ಬೆಂ.ಗ್ರಾ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ನವ ಕರ್ನಾಟಕ ಯುವಶಕ್ತಿ ವೇದಿಕೆ ವತಿಯಿಂದ ತೂಬಗೆರೆ ಹೋಬಳಿಯ ಹಿರೇಮುದ್ದೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ ಶಾಲೆ ಉಳಿಸಿ - ಕನ್ನಡ ಬೆಳೆಸಿ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ತಾವೂ ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದು, ಕನ್ನಡ ಮಾಧ್ಯಮ ಯಶಸ್ಸಿಗೆ ಅಡ್ಡಿಯಾಗುವುದಿಲ್ಲ. ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸ್ಥಳೀಯ ಭಾಷೆಯಲ್ಲಿಯೇ ಓದಿ ಯುಪಿಎಸ್‌ಸಿ ಸೇರಿದಂತೆ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಿದ್ದಾರೆ. ಇದು ಮಾತೃಭಾಷೆಯಲ್ಲಿಯೇ ಉನ್ನತ ಸಾಧನೆ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಇಂದು ಅಗತ್ಯ ಮೂಲಸೌಕರ್ಯಗಳು ಲಭ್ಯವಿವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣ ಪಡೆದರೆ ಖಂಡಿತವಾಗಿಯೂ ಉತ್ತಮ ಫಲಿತಾಂಶ ಸಿಗಬಹುದು. ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಜಾಗರೂಕರಾಗಬೇಕು, ಆದರೆ ಭಾಷೆಯ ಆಧಾರದ ಮೇಲೆ ಶಾಲೆ ಆಯ್ಕೆ ಮಾಡುವ ಧೋರಣೆ ಸಲ್ಲದು. ಈ ಕುರಿತು ಜಾಗೃತಿ ಮೂಡಿಸಲು ನವ ಕರ್ನಾಟಕ ಯುವಶಕ್ತಿ ವೇದಿಕೆ ಆರಂಭಿಸಿರುವ ಸರ್ಕಾರಿ ಶಾಲೆ ಉಳಿಸಿ- ಕನ್ನಡ ಬೆಳೆಸಿ ಅಭಿಯಾನ ಶ್ಲಾಘನೀಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಶಂಕರಯ್ಯ ಮಾತನಾಡಿ, ಇದು ಶಿಕ್ಷಣ ಕ್ಷೇತ್ರದಲ್ಲಿ ಒಂದು ವಿಶಿಷ್ಟ ಪ್ರಯತ್ನ. ಸಾರ್ವಜನಿಕ ಶಿಕ್ಷಣದ ಮಹತ್ವವನ್ನು ಜನತೆಗೆ ತಿಳಿಸಿ, ಸಮಾಜದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಲು ನವ ಕರ್ನಾಟಕ ಯುವ ಶಕ್ತಿ ವೇದಿಕೆಯ ಈ ಕಾರ್ಯ ಶ್ಲಾಘನೀಯ. ಈ ಕಾರ್ಯಕ್ರಮದಿಂದ ಮಕ್ಕಳ ಮನೋಬಲ ಹೆಚ್ಚುತ್ತದೆ ಎಂದರು.

ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ ಮಾತನಾಡಿ, ಕೆಲ ಜಾಗೃತ ಪಾಲಕರು ಸಮಾಜದ ಬದಲಾವಣೆಗೆ ಮಾದರಿಯಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ವೇದಿಕೆ ಇಂತಹ ಪೋಷಕರು ಹಾಗೂ ಮಕ್ಕಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಸಕಾರಾತ್ಮಕ ಸಂದೇಶ ನೀಡುತ್ತಿದೆ ಎಂದರು.

ನವ ಕರ್ನಾಟಕ ಯುವಶಕ್ತಿ ವೇದಿಕೆ ಅಧ್ಯಕ್ಷ ಹಳ್ಳಿರೈತ ಅಂಬರೀಶ್, ನಿವೃತ್ತ ಅರೆಸೇನಾ ಯೋಧರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಅನಂತರಾಜ್ ಗೋಪಾಲ್, ಪತ್ರಕರ್ತ ಗಂಗರಾಜು, ಕನ್ನಡ ಹೋರಾಟಗಾರ ತೂಬಗೆರೆ ಷರೀಫ್, ಕಸಾಪ ತೂಬಗೆರೆ ಹೋಬಳಿ ಅಧ್ಯಕ್ಷ ಕುಮಾರ್, ಮುಖ್ಯಶಿಕ್ಷಕ ವಸಂತ ಕುಮಾರ್ ಗೌಡ, ರಾಧಾಕೃಷ್ಣ, ಎಸ್.ಡಿ.ಎಂ.ಸಿ. ಅಧ್ಯಕ್ಷ ಕಾಂತರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಪ್ಪ ಟಿ ಎನ್, ಮಂಜುಳಾ ರಾಜಕುಮಾರ್, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.