ಶಿವಕುಮಾರ ಕುಷ್ಟಗಿ

ಗದಗ: ವಿಶೇಷ ಮತದಾರರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಮಹತ್ವದ ಹಂತ ತಲುಪಿದ್ದು, ಜು. 19ರ ವರೆಗಿನ ಅಂಕಿ, ಅಂಶಗಳ ಪ್ರಕಾರ ಗದಗ ಕ್ಷೇತ್ರವೊಂದರಲ್ಲಿಯೇ 16061 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ(ರದ್ದು) ಸಾಧ್ಯತೆ ಇದೆ.

ಜಿಲ್ಲಾ ಕೇಂದ್ರವನ್ನು ಒಳಗೊಂಡಿರುವ ಗದಗ ಕ್ಷೇತ್ರ ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ಕ್ಷೇತ್ರವಾಗಿರುವುದರಿಂದ, ಈ ಬೆಳವಣಿಗೆ 2028ರ ವಿಧಾನಸಭಾ ಚುನಾವಣೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಚುನಾವಣಾ ಆಯೋಗದ ಸೂಚನೆಯ ಮೇರೆಗೆ ನಡೆಸುತ್ತಿರುವ ಎಸ್ಐಆರ್ ಪ್ರಕ್ರಿಯೆ ಕುರಿತು ಲಭ್ಯವಿರುವ ಮಾಹಿತಿಯ ಪ್ರಕಾರ, ಮತದಾರರ ಪಟ್ಟಿಯಿಂದ ಕೈಬಿಡಲು ಗುರುತಿಸಲಾದವರಲ್ಲಿ 6113 ಮಂದಿ ಮೃತಪಟ್ಟವರು, 7416 ಮಂದಿ ಸ್ಥಳಾಂತರಗೊಂಡವರು. 1467 ಮಂದಿ ಡಬಲ್ ಎಂಟ್ರಿ ಮತದಾರರು. 1,033 ಮಂದಿ ಗೈರಾಗಿರುವವರು ಹಾಗೂ 32 ಮಂದಿ ಇತರೆ ಕಾರಣಗಳಿಂದ ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆಯಲ್ಲಿದ್ದಾರೆ.

ಒಟ್ಟು ಕೈಬಿಡುವ ಸಾಧ್ಯತೆಯಿರುವ ಮತಗಳಲ್ಲಿ ಸ್ಥಳಾಂತರಗೊಂಡವರ ಪಾಲು ಸುಮಾರು ಶೇ. 46.2 ಇದೆ. ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ನಗರೀಕರಣದ ಪರಿಣಾಮವಾಗಿ ದೊಡ್ಡ ಪ್ರಮಾಣದಲ್ಲಿ ಜನರು ಬೇರೆಡೆಗೆ ತೆರಳಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಇನ್ನು ಮೃತಪಟ್ಟ ಮತದಾರರ ಪ್ರಮಾಣ ಸುಮಾರು ಶೇ. 38.1 ಆಗಿದ್ದು, ಸಕಾಲದಲ್ಲಿ ಮರಣ ದಾಖಲಾತಿ ಮತ್ತು ಮತದಾರರ ಪಟ್ಟಿಯ ನಡುವೆ ಸಮನ್ವಯದ ಕೊರತೆಯಿಂದಾಗಿ ಇವರೆಲ್ಲ ಇದುವರೆಗೂ ಮತದಾರರ ಪಟ್ಟಿಯಲ್ಲಿ ಉಳಿದಿದ್ದಾರೆ.


ಡಬಲ್ ಮತದಾರರ ಪತ್ತೆ: ಒಂದೇ ವ್ಯಕ್ತಿಯ ಹೆಸರು ಎರಡು ಕಡೆ ದಾಖಲಾಗಿರುವ 1467 ಪ್ರಕರಣಗಳು ಪತ್ತೆಯಾಗಿವೆ. ಚುನಾವಣಾ ಆಯೋಗವು ಇತ್ತೀಚಿನ ವರ್ಷಗಳಲ್ಲಿ ಆಧಾರ್ ಲಿಂಕಿಂಗ್, ಡಿಜಿಟಲ್ ಪರಿಶೀಲನೆ ಹಾಗೂ ಬೂತ್ ಮಟ್ಟದ ಅಧಿಕಾರಿಗಳ ಮನೆ, ಮನೆ ಪರಿಶೀಲನೆ ಮೂಲಕ ಇಂತಹ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿನ ಪ್ರತಿಯೊಂದು ಹಳ್ಳಿಗಳಲ್ಲಿಯೂ ಇರುವ ಗ್ರಾಮ ದೇವರ ಹೆಸರುಗಳನ್ನು ಮಕ್ಕಳಿಗೆ ಇಡುವುದು ಸಾಮಾನ್ಯ. ಇದರೊಟ್ಟಿಗೆ ಒಂದೇ ಸರ್ ನೇಮ್(ಅಡ್ಡ ಹೆಸರು) ಹೊಂದಿರುವ ಹಲವಾರು ಕುಟುಂಬಗಳಿದ್ದು, ಇದು ಕೂಡಾ ಡಬಲ್ ಮತದಾರರು ಎಂದಾಗುವ ಆತಂಕ ಎದುರಾಗಿದೆ.

2028ರ ಚುನಾವಣೆಗೆ ಏಕೆ ಮಹತ್ವ?: ಗದಗ ವಿಧಾನಸಭಾ ಕ್ಷೇತ್ರವು ಜಿಲ್ಲಾ ಕೇಂದ್ರ ಹೊಂದಿರುವ ಕಾರಣ ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಕಣವಾಗಿದೆ. (ಕಳೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ) 2008ರಲ್ಲಿ 8616 ಮ ತಗಳಿಂದ ಬಿಜೆಪಿ, 2013ರಲ್ಲಿ 33727 ಮತಗಳಿಂದ ಕಾಂಗ್ರೆಸ್, 2018ರಲ್ಲಿ ಕೇವಲ 1868 ಮತಗಳಿಂದ ಕಾಂಗ್ರೆಸ್ ಹಾಗೂ 2023ರಲ್ಲಿ 15130 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಅಂಕಿ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸಾವಿರಾರು ಮತಗಳ ಅಂತರವೇ ಫಲಿತಾಂಶ ನಿರ್ಧರಿಸಿದ ಉದಾಹರಣೆ ಕಣ್ಣ ಮುಂದಿದೆ. ಇಂತಹ ಸಂದರ್ಭದಲ್ಲಿ 16 ಸಾವಿರಕ್ಕೂ ಅಧಿಕ ಮತಗಳ ರದ್ದು ಆಗುತ್ತಿರುವುದು 2028ರ ಚುನಾವಣೆಯ ಫಲಿತಾಂಶವನ್ನೇ ಬದಲಿಸಬಹುದಾಗಿದೆ. ಇನ್ನೂ ಬದಲಾವಣೆ ಸಾಧ್ಯತೆ: ಈ ಅಂಕಿ, ಅಂಶಗಳು ಜು. 19ರ ವರೆಗಿನ ಪ್ರಾಥಮಿಕ ಪರಿಶೀಲನೆಯ ವಿವರಗಳಾಗಿದ್ದು, ಆಕ್ಷೇಪಣೆಗಳು, ದಾಖಲೆಗಳ ಪರಿಶೀಲನೆ ಹಾಗೂ ಮೇಲ್ಮನವಿಗಳ ನಂತರ ಅಂತಿಮ ಮತದಾರರ ಪಟ್ಟಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ. ಸೂಕ್ತ ದಾಖಲೆಗಳನ್ನು ಸಲ್ಲಿಸಿದ ಮತದಾರರ ಹೆಸರುಗಳು ಅಂತಿಮ ಪಟ್ಟಿಯಲ್ಲಿ ಮುಂದುವರಿಯುವ ಅವಕಾಶವೂ ಇದೆ ಎನ್ನುತ್ತಾರೆ ಅಧಿಕಾರಿಗಳು.