ಕೇಂದ್ರ ಸರ್ಕಾರದ ಯೋಜನೆಗಳ ಪ್ರತಿಶಃ ಅನುಷ್ಠಾನಗೊಳಿಸಿ: ಕೋಟ ಸೂಚನೆ

| Published : Aug 04 2024, 01:24 AM IST

ಕೇಂದ್ರ ಸರ್ಕಾರದ ಯೋಜನೆಗಳ ಪ್ರತಿಶಃ ಅನುಷ್ಠಾನಗೊಳಿಸಿ: ಕೋಟ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ರಜತಾದ್ರಿಯ ಸಂಸದರ ಕಚೇರಿಯಲ್ಲಿ ಪಿಎಂ ಕಿಸಾನ್ ಸಮ್ಮಾನ್, ವಿಶ್ವಕರ್ಮ ಯೋಜನೆ ಮತ್ತು ಸೂರ್ಯ ಘರ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಬೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಾದ ಪ್ರಧಾನಮಂತ್ರಿ ವಿಶ್ವಕರ್ಮ, ಸೂರ್ಯ ಘರ್

ಹಾಗೂ ಕಿಸಾನ್ ಸಮ್ಮಾನ್ ಯೋಜನೆಗಳನ್ನು ಸಮರ್ಪಕವಾಗಿ ಪ್ರತಿಶತಃ ಅನುಷ್ಠಾನಗೊಳಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವು ಉಡುಪಿ ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಶನಿವಾರ ಇಲ್ಲಿನ ರಜತಾದ್ರಿಯ ತಮ್ಮ ಕಚೇರಿಯಲ್ಲಿ ಪಿಎಂ ಕಿಸಾನ್ ಸಮ್ಮಾನ್, ವಿಶ್ವಕರ್ಮ ಯೋಜನೆ ಮತ್ತು ಸೂರ್ಯ ಘರ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 1,79,452 ಜನ ಅರ್ಜಿ ಸಲ್ಲಿಸಿದ್ದು, 1,62,344 ರೈತರ ಖಾತೆಗಳಿಗೆ ಹಣ ನೇರವಾಗಿ ಜಮಾ ಆಗುತ್ತಿವೆ. ಬಾಕಿ ಉಳಿದ 17,108 ರೈತರಿಗೂ ಕೃಷಿ ಸಖಿಯರ ಮೂಲಕ ಅವರ ದಾಖಲಾತಿ ಮತ್ತಿತರ ವಿವರಗಳನ್ನು ಕ್ರೋಡೀಕರಿಸಿ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ, ಫಲಾನುಭವಿಗಳನ್ನಾಗಿಸಬೇಕು. ಈಗಾಗಲೇ ಈ ಯೋಜನೆಯಡಿ ನೀಡುತ್ತಿರುವ ಆರ್ಥಿಕ ನೆರವಿನ ಮಾಹಿತಿಗಳನ್ನು ಅವರುಗಳಿಗೆ ಕಳುಹಿಸುವಂತೆ ತಿಳಿಸಿದರು.

ಹವಾಮಾನ ಆಧಾರಿತ ಬೆಳೆ ವಿಮೆಯ ಅವಧಿಯನ್ನು ಒಂದು ತಿಂಗಳ ವಿಸ್ತರಿಸಲು ಕೃಷಿ ಸಚಿವರು ಸೂಚಿಸಿದ್ದಾರೆ. ರೈತರು ಇದರ ಲಾಭ ಪಡೆಯಬೇಕು. ಈ ಬಗ್ಗೆ ಅಧಿಕಾರಿಗಳು ರೈತರಿಗೆ ಮಾಹಿತಿ ಕೊಡಬೇಕು ಎಂದರು.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ 14,756 ಜನರು ಅರ್ಜಿ ಸಲ್ಲಿಸಿದ್ದು, ಸ್ಥಳೀಯ ಸಂಸ್ಥೆಗಳು 12,394 ಜನರ ಅರ್ಜಿಗಳನ್ನು ಶಿಫಾರಸ್ಸು ಮಾಡಿ ಜಿಲ್ಲಾ ಸಮಿತಿಗೆ ವರ್ಗಾಯಿಸಲಾಗಿದೆ. ಜಿಲ್ಲಾ ಸಮಿತಿಯು 7,233 ಅರ್ಜಿಗಳನ್ನು ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಿದ್ದು, ಅವುಗಳಲ್ಲಿ 6324 ಅರ್ಜಿಗಳು ರಾಜ್ಯ ಸಮಿತಿಯಿಂದ ಅನುಮೋದನೆಗೊಂಡಿವೆ. ಬಾಕಿ ಉಳಿದ ಅರ್ಜಿಗಳನ್ನು ಪರಿಶೀಲಿಸಿ, ಕೂಡಲೇ ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಬೇಕೆಂದು ಸಂಸದರು ಸೂಚನೆ ನೀಡಿದರು.

ಸೂರ್ಯ ಘರ್ ಯೋಜನೆಯಡಿ ಮನೆ ಮೇಲ್ಛಾವಣಿಯಲ್ಲಿ 300 ಯೂನಿಟ್‌ಗಳವರೆಗೂ ಸೋಲಾರ್ ವಿದ್ಯುತ್‌ಚ್ಛಕ್ತಿ ಉತ್ಪಾದಿಸುವ ಯೋಜನೆಯಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಇದರ ಪ್ರಯೋಜನ ಪಡೆಯುವಂತೆ ಮಾಡಬೇಕು ಎಂದರು. ಈ ಎಲ್ಲ ಯೋಜನೆಗಳು ಜನರಿಗೆ ತಲುಪಲು ಅನುಕೂಲವಾಗುವಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ, ಸಾರ್ವಜನಿಕರಿಗೆ, ದೊಡ್ಡ ಮಟ್ಟದಲ್ಲಿ ಕಾರ್ಯಾಗಾರಗಳನ್ನು ಆಯೋಜನೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್ ನಾಯ್ಕ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್, ಜಂಟಿ ನಿರ್ದೇಶಕಿ ಸೀತಾ, ಮೆಸ್ಕಾಂ ಎಂಜಿನಿಯರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.