ಅಂಚೆ ಕಚೇರಿ: 15 ತಿಂಗಳಿನಿಂದ ಆಧಾರ್‌ ಸೇವೆ ಬಂದ್‌!

| Published : Oct 09 2025, 02:01 AM IST

ಸಾರಾಂಶ

ಉಪ್ಪಿನಂಗಡಿ ಅಂಚೆ ಕಚೇರಿಯಲ್ಲಿದ್ದ ಆಧಾರ್ ಸೇವೆ ಸಿಬ್ಬಂದಿ ಕೊರತೆಯಿಂದ ಸ್ಥಗಿತಗೊಂಡು 15 ತಿಂಗಳು ಕಳೆದರೂ ಪರ್ಯಾಯ ವ್ಯವಸ್ಥೆಯಾಗದಿರುವುದು ಜನತೆಯನ್ನು ಸಂಕಷ್ಟಕ್ಕೆ ಈಡು ಮಾಡಿದೆ.

ಸಿಬ್ಬಂದಿ ಕೊರತೆಯಿಂದ ಸೇವೆ ಅಲಭ್ಯ । ಅನಿವಾರ್ಯ ಸಂದರ್ಭಗಳಲ್ಲಿ ಜನತೆ ಹೈರಾಣು

ಉಪ್ಪಿನಂಗಡಿ: ನಾಲ್ಕು ತಾಲೂಕುಗಳ ಹಲವು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿರುವ, ಹೋಬಳಿ ಕೇಂದ್ರ ಉಪ್ಪಿನಂಗಡಿಯಲ್ಲಿ ಸಮರ್ಪಕ ಆಧಾರ್ ಸೇವೆ ಒದಗಿಸುವ ಕೇಂದ್ರವಿಲ್ಲದೆ ಜನರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಕಚೇರಿಯಲ್ಲಿದ್ದ ಆಧಾರ್ ಸೇವೆ ಸಿಬ್ಬಂದಿ ಕೊರತೆಯಿಂದ ಸ್ಥಗಿತಗೊಂಡು 15 ತಿಂಗಳು ಕಳೆದರೂ ಪರ್ಯಾಯ ವ್ಯವಸ್ಥೆಯಾಗದಿರುವುದು ಜನತೆಯನ್ನು ಸಂಕಷ್ಟಕ್ಕೆ ಈಡು ಮಾಡಿದೆ.

ಖಾಸಗಿ ಸಂಸ್ಥೆ ನೇತೃತ್ವದಲ್ಲಿ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಆಧಾರ್ ಸೇವೆ ಲಭಿಸುತ್ತಿದ್ದರೂ ಅಲ್ಲಿ ಎಲ್ಲಾ ಸ್ವರೂಪದ ಸೇವೆಗಳು ಲಭಿಸುತ್ತಿಲ್ಲ. ಮುಖ್ಯವಾಗಿ ಸಣ್ಣ ಮಕ್ಕಳ ಆಧಾರ್ ಕಾರ್ಡ್ ಅಪ್‌ಡೇಟ್ ಕಾರ್ಯ ನಡೆಯದಿರುವುದರಿಂದ ದಿನವಿಡೀ ಸರತಿ ಸಾಲಿನಲ್ಲಿ ನಿಂತು ಬಳಿಕ ನಿರಾಸೆಯಿಂದ ನಿರ್ಗಮಿಸುವ ಸ್ಥಿತಿ ಪ್ರಸಕ್ತ ಇದೆ. ಇದರಿಂದಾಗಿ ಎಳೆಯ ಮಕ್ಕಳನ್ನು ದೂರದ ಪುತ್ತೂರಿಗೆ ಕರೆದೊಯ್ದು ಅಲ್ಲಿ ಸರತಿ ಸಾಲಿನಲ್ಲಿ ನಿಂತು ಆಧಾರ್ ಸೇವೆ ಪಡೆದುಕೊಳ್ಳುವ ಸ್ಥಿತಿ ಇದೆ. ಸೇವೆ ಪುನಾರಂಭವಾಗಲಿ: ಈ ಹಿಂದೆ ಉಪ ಅಂಚೆ ಕಚೇರಿಯಾಗಿರುವ ಉಪ್ಪಿನಂಗಡಿಯಲ್ಲಿ ಆಧಾರ್ ಸೇವೆಗೆಂದೇ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದ್ದು, ದಿನಂಪ್ರತಿ ೪೦ಕ್ಕೂ ಮಿಕ್ಕಿದ ಮಂದಿಗೆ ಆಧಾರ್ ಸೇವೆ ಒದಗಿಸಲಾಗುತ್ತಿತ್ತು. ಆದರೆ ಸಿಬ್ಬಂದಿ ವರ್ಗಾವಣೆ ಬಳಿಕ ಸಿಬ್ಬಂದಿ ಇಲ್ಲ ಎಂಬ ಕಾರಣ ನೀಡಿ ೨೦೨೪ ರ ಜೂನ್ ತಿಂಗಳಿಂದ ಆಧಾರ್ ಸೇವೆ ಸ್ಥಗಿತಗೊಂಡಿದೆ. ಅಂಚೆ ಕಚೇರಿಯಲ್ಲಿ ಪ್ರತಿನಿತ್ಯ ಆಧಾರ್ ಸೇವೆ ದೊರಕುವಂತಾಗಲು ಅಧಿಕಾರಿಗಳು ಗಮನ ಹರಿಸಬೇಕೆನ್ನುವುದು ನಾಗರಿಕರ ಅಗ್ರಹವಾಗಿದೆ.

ಸಿಬ್ಬಂದಿ ಕೊರತೆ ಕಾರಣಕ್ಕೆ ಅಂಚೆ ಕಚೇರಿಯಲ್ಲಿ 15 ತಿಂಗಳಿಂದ ಆಧಾರ್ ಸೇವೆ ಸ್ಥಗಿತಗೊಂಡಿದೆ ಎನ್ನುವುದು ಆಡಳಿತ ವ್ಯವಸ್ಥೆಗೆ ಶೋಭೆಯಲ್ಲ. ಜನರು ಆಧಾರ್ ಸೇವೆಗಾಗಿ ದಿನಗಟ್ಟಲೆ ಅಲೆದಾಡುವ ಸ್ಥಿತಿ ಇಂದಿಗೂ ಇದೆ ಎನ್ನುವುದು ಖೇದಕರ . ಜನಪ್ರತಿನಿಧಿಗಳು ಇದರತ್ತ ಗಮನಹರಿಸಬೇಕು.

-ರಶೀದ್‌ ಅಗ್ನಾಡಿ, ಉಪ್ಪಿನಂಗಡಿ ಛೇಂಬರ್ ಆಫ್‌ ಕಾಮರ್ಸ್ ಪೂರ್ವಾಧ್ಯಕ್ಷ.ಉತ್ತಮ ಆದಾಯ ತಂದುಕೊಡುತ್ತಿದ್ದ ಆಧಾರ್ ಸೇವೆ 15 ತಿಂಗಳಿಂದ ಸಿಬ್ಬಂದಿ ಇಲ್ಲವೆಂಬ ಕಾರಣಕ್ಕೆ ಸ್ಥಗಿತಗೊಂಡಿರುವುದು ಗ್ರಾಹಕರನ್ನು ತೀವ್ರ ಸಮಸ್ಯೆಗೆ ಸಿಲುಕುವಂತೆ ಮಾಡಿದೆ. ಉತ್ತಮ ಸೇವೆಯೊಂದಿಗೆ ಜನಮಾನಸದಲ್ಲಿ ಬೆರೆತಿರುವ ಅಂಚೆ ಕಚೇರಿಯಲ್ಲಿ ಸೇವೆಗಳು ನಿರಂತರ ದೊರಕುವಂತೆ ಮಾಡಬೇಕಾದ ಅಗತ್ಯತೆ ಇದೆ.

-ರಾಧಾಕೃಷ್ಣ ಬೊಳ್ಳಾವುರ, ಗೆಳೆಯರು-೯೪ ಸಂಸ್ಥೆಯ ಅಧ್ಯಕ್ಷ.