ಅಂಚೆ ಮತ ಪತ್ರ ವಿತರಣೆ ವ್ಯವಸ್ಥಿತವಾಗಿರಲಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ನಿರ್ದೇಶನ

| Published : Mar 27 2024, 01:05 AM IST

ಅಂಚೆ ಮತ ಪತ್ರ ವಿತರಣೆ ವ್ಯವಸ್ಥಿತವಾಗಿರಲಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ನಿರ್ದೇಶನ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿರುವವರಿಗೆ ಹಾಗೂ ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ನೌಕರರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಸೌಲಭ್ಯ ಲಭ್ಯವಿದೆ. ಎಲ್ಲರೂ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಜಿಲ್ಲೆಯಲ್ಲಿ ಅಗತ್ಯ ಸೇವೆಗಳಡಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಮತ್ತು ರಾಜ್ಯ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ಅಂಚೆ ಮತ ಪತ್ರಗಳ ವಿತರಣಾ ಕಾರ್ಯವನ್ನು ಅತ್ಯಂತ ವ್ಯವಸ್ಥಿತವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಅಂಚೆ ಮತ ಪತ್ರ ವಿತರಣೆ ಕುರಿತು ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿರುವವರಿಗೆ ಹಾಗೂ ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ನೌಕರರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಸೌಲಭ್ಯ ಲಭ್ಯವಿದೆ. ಎಲ್ಲರೂ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಗತ್ಯ ಸೇವೆಗಳಡಿ ಬರುವ ಜೆಸ್ಕಾಂ, ಬಿಎಸ್‍ಎನ್‍ಎಲ್, ರೈಲ್ವೇ, ಅಂಚೆ ಇಲಾಖೆ, ದೂರದರ್ಶನ, ಆಲ್ ಇಂಡಿಯಾ ರೇಡಿಯೋ, ಆರೋಗ್ಯ ಸೇವೆ, ಸಾರಿಗೆ, ಟ್ರಾಫಿಕ್, ಕೆಪಿಸಿಎಲ್, ಬಿಟಿಪಿಎಸ್, ಆ್ಯಂಬುಲೆನ್ಸ್‌ ಹಾಗೂ ಇತರೆ ಸೇವೆಗಳಡಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾತ್ರ ಅಂಚೆ ಮತ ಪತ್ರ ವಿತರಣೆ ಮಾಡಬೇಕು ಎಂದರು.

ಅಗತ್ಯ ಸೇವೆಗಳಡಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊರತುಪಡಿಸಿ, ಉಳಿದೆಲ್ಲವರೂ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಈ ಕುರಿತು ನಿಗಾವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಒಮ್ಮೆ ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಸಿದಲ್ಲಿ ಮತಕೇಂದ್ರಕ್ಕೆ ಬಂದು ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸುವುದಿಲ್ಲ. ಈ ವಿಷಯವನ್ನು ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.

ಚುನಾವಣಾ ಆಯೋಗದ ಸೂಚನೆಯಂತೆ ಅಂಚೆ ಮತ ಪತ್ರ ವಿತರಣೆ ಮಾಡಲಾಗಿದ್ದು, ನಿಗದಿತ ದಿನದೊಳಗೆ ಅಂಚೆ ಮತಪತ್ರ ಸ್ವೀಕಾರ ಮಾಡಿಕೊಳ್ಳಬೇಕು. ನಮೂನೆ-12 ಡಿ ಸರಿಯಾಗಿ ಭರ್ತಿ ಮಾಡಿ ಸಂಬಂಧಿಸಿದ ನೋಡೆಲ್ ಅಧಿಕಾರಿಗಳಿಗೆ ಹಾರ್ಡ್ ಮತ್ತು ಸ್ಕ್ಯಾನ್ ಮಾಡಿದ ಸಾಫ್ಟ್ ಕಾಫಿ ಪತ್ರಗಳನ್ನು ಮೇಲ್ ಮೂಲಕ ಸಲ್ಲಿಸಬೇಕು. ಇದರಿಂದ ಆಯಾ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಸಲ್ಲಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ನಿಗದಿತ ಅವಧಿಯೊಳಗೆ ನಮೂನೆ 12-ಡಿ ಸಂಗ್ರಹಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಯಾವುದೇ ಅರ್ಹ ಮತದಾರರು ಈ ಸೌಲಭ್ಯದಿಂದ ವಂಚಿತರಾಗದಂತೆ ಎಚ್ಚರವಹಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಅಂಚೆ ಪತ್ರ ವಿತರಣೆ ನೋಡೆಲ್ ಅಧಿಕಾರಿ ಚಂದ್ರಶೇಖರ್, ಮೌನೇಶ್ ಸೇರಿದಂತೆ ಕೇಂದ್ರ, ರಾಜ್ಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.