ಚಿಕ್ಕಮಗಳೂರುಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಪತ್ರಗಳ ಮರು ಎಣಿಕೆ ಕಾರ್ಯ ಗೊಂದಲದ ಗೂಡಾಗಿತ್ತು. ಬೆಳಗ್ಗೆ ಒಂಬತ್ತು ಗಂಟೆಗೆ ಆರಂಭವಾದ 1,822 ಮತಗಳ ಎಣಿಕೆ ಕಾರ್ಯ ತಡ ರಾತ್ರಿಯಾದರೂ ಪೂರ್ಣಗೊಳ್ಳಲಿಲ್ಲ.
ತಡರಾತ್ರಿ ವರೆಗೂ ನಡೆದ 1822 ಅಂಚೆ ಮತಎಣಿಕೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಪತ್ರಗಳ ಮರು ಎಣಿಕೆ ಕಾರ್ಯ ಗೊಂದಲದ ಗೂಡಾಗಿತ್ತು. ಬೆಳಗ್ಗೆ ಒಂಬತ್ತು ಗಂಟೆಗೆ ಆರಂಭವಾದ 1,822 ಮತಗಳ ಎಣಿಕೆ ಕಾರ್ಯ ತಡ ರಾತ್ರಿಯಾದರೂ ಪೂರ್ಣಗೊಳ್ಳಲಿಲ್ಲ.
ಸಂಜೆ ವೇಳೆಗೆ ತಾವೇ ವಿಜೇತರು ಎಂದು ಘೋಷಿಸಿಕೊಂಡು ವಿಜಯೋತ್ಸವ ಆಚರಿಸಿದ್ದ ಶಾಸಕ ಟಿ.ಡಿ.ರಾಜೇಗೌಡ ಅವರೇ ರಾತ್ರಿ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ಮತಪತ್ರಗಳ ಟ್ಯಾಂಪರಿಂಗ್ ನಡೆದಿದೆ ಎಂದು ಆರೋಪಿಸಿದ್ದಲ್ಲದೆ ಮತ ಎಣಿಕೆ ಸ್ಥಗಿತಗೊಳಿಸುವಂತೆ ಚುನಾವಣಾಧಿಕಾರಿಗಳ ಬಳಿ ಆಕ್ಷೇಪಣೆ ಸಲ್ಲಿಸಿದ ಕುತೂಹಲಕಾರಿ ಘಟನೆಯೂ ನಡೆದಿದೆ.ನ್ಯಾಯಾಲಯದ ಆದೇಶದಂತೆ ನಗರದ ಐಡಿಎಸ್ ಜಿ ಕಾಲೇಜಿನಲ್ಲಿ ಶನಿವಾರ ಅಂಚೆ ಮತಪತ್ರಗಳ ಮರುಎಣಿಕೆ ಆರಂಭವಾಗಿ ಬೆಳಗ್ಗೆ 7.30ರ ಸುಮಾರಿಗೆ ಸಗನಿಪುರದ ಸ್ಟ್ರಾಂಗ್ ರೂಂನಿಂದ ಮತಪೆಟ್ಟಿಗೆ ಬಾಕ್ಸ್ ತೆರೆದಿದ್ದವು ಎನ್ನುವ ಮೂಲಕ ಆರಂಭಗೊಂಡ ಗೊಂದಲ, ಆರೋಪ ಪ್ರತ್ಯಾರೋಪಗಳು ತಡ ರಾತ್ರಿವರೆಗೆ ಮುಗಿಯಲೇ ಇಲ್ಲ.
ಮತಪತ್ರಗಳನ್ನು ಸಂಗ್ರಗಿಸಿಟ್ಟಿದ್ದ ಮತ ಪೆಟ್ಟಿಗೆಗಳು ಹಾನಿ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಬೆಳಗ್ಗಿನಿಂದಲೂ ಮತಗಳು ಟ್ಯಾಂಪರಿಂಗ್ ಆರೋಪ ಮಾಡಲಾರಂಭಿಸಿದರು.ಕಳೆದ ಚುನಾವಣೆ ಮತ ಎಣಿಕೆ ವೇಳೆ ತಿರಸ್ಕೃತಗೊಂಡಿದ್ದ ಮತಪತ್ರಗಳಲ್ಲಿ ಕೆಲವು ಬೇಗನೆ ಸಿಗದ ಕಾರಣದಿಂದ ಮತ ಎಣಿಕೆ ಸಿಬ್ಬಂದಿ ಅವುಗಳಿಗಾಗಿ ಹುಡುಕಾಟ ಆರಂಭಿಸಿದ್ದರು ಹಾಗಾಗಿ ಮತ ಎಣಿಕೆ ಆರಂಭ ವಿಳಂಭವಾಯಿತು.
ಮಧ್ಯಾಹ್ನದ ವೇಳೆಗೆ ಮತ ಎಣಿಕೆ ಆರಂಭಗೊಂಡಿತು ಎನ್ನಲಾಗುತ್ತಿದೆ. ಈ ವೇಳೆಗಾಗಲೇ ಕಳೆದ ಮತ ಎಣಿಕೆಯಲ್ಲಿ ಅರ್ಹ ವಾಗಿದ್ದ ಮತ ಪತ್ರಗಳಲ್ಲಿ ಕೆಲವು ಈ ಬಾರಿ ಮತ ಎಣಿಕೆಯಲ್ಲಿ ಅನರ್ಹವಾಗಿರುವುದು ಮತ್ತೆ ಗೊಂದಲಕ್ಕೆ ಕಾರಣವಾಯಿತು.ಇಬ್ಬರಿಗೆ ಮತ: ಎಣಿಕೆ ಸ್ಥಗಿತ:-
ಎರಡು ಬಂಡಲ್‌ನಲ್ಲಿನ ತಲಾ 25 ರಂತೆ 50 ಮತ ಪತ್ರಗಳಲ್ಲಿ ಮತದಾರರು ಇಬ್ಬರಿಗೆ ಮತ ಹಾಕಿದ್ದಾರೆ. ಹೀಗಾಗಿ, ಮತ ಪತ್ರ ಅನರ್ಹ ಆಗಿವೆ ಎನ್ನುವುದು ತಿಳಿಯುತ್ತಿದ್ದಂತೆ ಕಳೆದ ಬಾರಿ ಮತ ಎಣಿಕೆಯಲ್ಲಿ ಅರ್ಹವಾಗಿದ್ದ ಮತಗಳು ಈಗ ಹೇಗೆ ಅನರ್ಹವಾಗಿವೆ. ಮತ ಎಣಿಕೆ ಮಾಡಬೇಡಿ ಸ್ಥಗಿತಗೊಳಿಸಿ ಎಂದು ಪಟ್ಟುಹಿಡಿದು ಕುಳಿತರು. ಈ ವೇಳೆ ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಲಾಯಿತು. ಹೀಗಾಗಿ ಸುಮಾರು ಎರಡು ಗಂಟೆ ಎಣಿಕೆ ಸ್ಥಗಿತವಾಗಿತ್ತು.ಮತ್ತೆ ಎಣಿಕೆ ಆರಂಭ:
ಮತ ಪತ್ರದ ಗೊಂದಲದ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು. ಅಭ್ಯರ್ಥಿಗಳ ಆಕ್ಷೇಪಣೆ ದಾಖಲಿಸಲಾ ಗುವುದು ಎಂದು ಶಾಸಕ ರಾಜೇಗೌಡರ ಮನವೊಲಿಸಿ ಆಕ್ಷೇಪಣೆ ದಾಖಲಿಸಿಕೊಂಡ ಅಧಿಕಾರಿಗಳು ಮತ ಎಣಿಕೆ ಪುನರ್ ಆರಂಭಿಸಿದರು. .... ಬಾಕ್ಸ್....ವಿಜಯೋತ್ಸವ ಆಚರಿಸಿದ ರಾಜೇಗೌಡ
ಚುನಾವಣಾಧಿಕಾರಿಗಳು ಮರು ಮತ ಎಣಿಕೆ ಫಲಿತಾಂಶ ಘೋಷಿಸುವ ಮುನ್ನವೇ ಶಾಸಕ ಎಚ್.ಡಿ.ರಾಜೇಗೌಡ ಕಾರ್ಯಕರ್ತರೊಂದಿಗೆ ಸೇರಿ ವಿಜಯೋತ್ಸವ ಆಚರಿಸಿದ್ದು ವಿಶೇಷವಾಗಿತ್ತು.ಸಂಜೆ ವೇಳೆಗೆ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಟಿ.ಡಿ.ರಾಜೇಗೌಡ ಸ್ವಲ್ಪ ಸಮಯದಲ್ಲಿಯೇ ಮತ ಎಣಿಕೆ ಕೇಂದ್ರದಿಂದ ಹೊರಬಂದು ತಾವು ಮರು ಮತ ಎಣಿಕೆಯಲ್ಲೂ ಗೆದ್ದಿರುವುದಾಗಿ ಘೋಷಿಸಿಕೊಂಡರು. ಅಲ್ಲದೆ ಕಳೆದ ಬಾರಿಗಿಂತ ಈ ಬಾರಿ ಎರಡು ಮತ ಹೆಚ್ಚು ಪಡೆದಿರುವುದಾಗಿ ತಿಳಿಸಿದರು. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ಚಿಕ್ಕಮಗಳೂರು ಮಾತ್ರವಲ್ಲ ಶೃಂಗೇರಿ ಕ್ಷೇತ್ರದಾದ್ಯಂತ ಸಂಭ್ರಮಾಚರಣೆ ನಡೆಸಿದರು.
ಚಿಕ್ಕಮಗಳೂರು ಐಡಿಎಸ್ ಜಿ ಕಾಲೇಜು ಎದುರು ಕಾಂಗ್ರೆಸ್ ಕಾರ್ಯಕರ್ತರು ಶಾಸಕರಿಗೆ ಹಾರ ಹಾಕಿ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಬಳಿಕ ರಾಜೇಗೌಡರು ರೋಡ್ ಶೋ ಸಹ ನಡೆಸಿದರು. ಆದರೆ ರಾತ್ರಿ ವೇಳೆಗಾಗಲೇ ರಾಜೇಗೌಡ ಅವರು ಮತ ಎಣಿಕೆ ಸ್ಥಗಿತಕ್ಕೆ ಕೋರಿರುವುದು ಕುತೂಹಲಕ್ಕೆ ಕಾರಣವಾಗಿದೆ...... ಬಾಕ್ಸ್....ಒಂದೆಡೆ ವಿಜಯೋತ್ಸವ, ಇನ್ನೊಂದೆಡೆ ಪ್ರತಿಭಟನೆ:ಮತ ಮರು ಎಣಿಕೆ ನಿಲ್ಲಿಸಲಾಗಿದೆ ಎಂದು ಆರೋಪಿಸಿ ಒಂದೆಡೆ ಬಿಜೆಪಿ ಪ್ರತಿಭಟನೆ ನಡೆಸಿದರೆ ಈ ವಿಷಯ ತಿಳಿದು ಸ್ಥಳಕ್ಕೆ ಬಂದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ನಡೆಸಲಾರಂಭಿಸಿದರು.
ಈ ವೇಳೆಯಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರೆ ವಿಜಯೋತ್ಸವ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ಜಯಕಾರದ ಜತೆಗೆ ರಾಜೇಗೌಡರ ಪರ ಘೋಷಣೆ ಕೂಗಿದರು.ಪರಿಸ್ಥಿತಿ ಗಂಭೀರತೆ ಅರಿತು ಎಎಸ್ ಪಿ ಜಯಕುಮಾರ್ ನೇತೃತ್ವದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಗೇಟ್ ಎದುರಿನಿಂದ ಪಕ್ಕಕ್ಕೆ ಸರಿಯದೇ ಇದ್ದಲ್ಲಿ ಬಂಧಿಸಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ ಬಳಿಕ ಬಿಜೆಪಿ ಪ್ರತಿಭಟನಕಾರರು ಮುಖ್ಯ ದ್ವಾರದಿಂದ ಸರಿದರು.
ಬಳಿಕ ಪೊಲೀಸರು ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಡೆಗೋಡೆಯಂತೆ ಕಾರ್ಯನಿರ್ವಹಿಸುವ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ಪಡೆದರು...... ಬಾಕ್ಸ್.....ಮತ ಎಣಿಕೆ ವಿಳಂಬಕ್ಕೆ ಬಿಜೆಪಿ ಪ್ರತಿಭಟನೆ:
ರಾಜ್ಯ ಸರ್ಕಾರ ತಮ್ಮ ಶಾಸಕನ ಸೋಲಿನ ಭಯದಲ್ಲಿ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಸ್ಥಗಿತ ಗೊಳಿಸಿರುವ ಅನುಮಾನವಿದೆ. ಇದೇ ಕಾರಣದಿಂದಲೇ 1,822 ಮತಗಳ ಎಣಿಕೆಗೆ 12 ತಾಸು ಆದರೂ ಮುಗಿದಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಐಡಿಎಸ್ ಜಿ ಕಾಲೇಜು ಎದುರು ರಾತ್ರಿ 7 ಗಂಟೆ ಸುಮಾರಿಗೆ ಜಮಾಯಿಸಿ ಪ್ರತಿಭಟಿಸಿದರು.ನೂರಾರು ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಮತ ಎಣಿಕೆ ಪೂರ್ಣಗೊಳಿಸಲು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಬೆಳಗ್ಗೆ ಏಳು ಗಂಟೆಗೆ ಆರಂಭಗೊಂಡ ಕೇವಲ 1822 ಮತಗಳ ಎಣಿಕೆ ರಾತ್ರಿ 8 ಗಂಟೆಯಾದರೂ ಮುಗಿದಿಲ್ಲ. ದೇಶದ ಇತಿಹಾಸದಲ್ಲಿ ಈ ರೀತಿ ಆಗಿರಲಿಲ್ಲ. ಕಳೆದ ವಿಧಾನ ಪರಿಷತ್ ಚುನಾವಣೆ ಮರು ಮತ ಎಣಿಕೆ ಇದೆ ಕೇಂದ್ರದಲ್ಲಿ ನಡೆದಿತ್ತು. ಆಗ 3000ಕ್ಕೂ ಹೆಚ್ಚು ಮತಗಳನ್ನು ಮಧ್ಯಾಹ್ನ ಮೂರು ಗಂಟೆ ಒಳಗೆ ಎಣಿಕೆ ಮಾಡಲಾಗಿತ್ತು.ಚುನಾವಣಾ ಅಧಿಕಾರಿಗಳು ಯಾವುದೋ ಒತ್ತಡಕ್ಕೆ ಮಣಿದಿರುವ ಅನುಮಾನವಿದೆ. ಒತ್ತಡಕ್ಕೆ ಮಣಿಯದೆ ಅಧಿಕಾರಿಗಳು ಕೋರ್ಟ್ ಆದೇಶ ಪಾಲಿಸಬೇಕು. ಮರುಮತ ಎಣಿಕೆ ಫಲಿತಾಂಶ ಹೊರಬರುವವರೆಗೂ ನಾವು ಪ್ರತಿಭಟನೆ ನಡೆಸುತ್ತಲೇ ಇರುತ್ತೇವೆ ಎಂದು ಪಟ್ಟು ಹಿಡಿದರು.ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ತಳ್ಳಾಟ ನೂಕಾಟ:
ಕೆಲಕಾಲ ಸುಮ್ಮನಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮತ್ತೆ ವಾಗ್ವಾದ ಶುರುವಾಯಿತು. ಬಲ ಭಾಗದಿಂದ ಬಿಜೆಪಿ ಕಾರ್ಯಕರ್ತರು ನುಗ್ಗಲು ಯತ್ನಿಸಿದರೆ, ಎಡ ಭಾಗದಿಂದ ಕಾಂಗ್ರೆಸ್ ಕಾರ್ಯಕರ್ತರು ನುಗ್ಗಿದರು. ಸಮಯಕ್ಕೆ ಸರಿಯಾಗಿ ಪೊಲೀಸರು ನಡುವಿನ ಗೋಡೆಯಂತೆ ನಿಂತು ನಡೆದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಆರೋಪ ಪ್ರತ್ಯಾರೋಪಮಾಡಿದರು.ವಿಜಯೋತ್ಸವಕ್ಕೆ ಸಿದ್ಧತೆ: ಆತಂಕಬಾಳೆಹೊನ್ನೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಪಟ್ಟಣದ ಜೇಸಿ ವೃತ್ತದ ಬಳಿಯಲ್ಲಿ ವೇದಿಕೆ ಸಿದ್ಧಪಡಿಸಿ ಸಭಾ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಕಾರ್ಯಕ್ರಮ ಆಯೋಜನೆ ಮಾಡಿರುವ ಸ್ಥಳಕ್ಕೆ ಶಾಸಕ ರಾಜೇಗೌಡ ಅವರ ಆಗಮನಕ್ಕೆ ಕಾಯ್ದಿದಿದ್ದಾರೆ. ಆದರೆ ಫಲಿತಾಂಶದ ಗೊಂದಲದಿಂದ ಕಾರ್ಯಕರ್ತರಲ್ಲಿ ಆತಂಕ ಎದುರಾಗಿದೆ.
ತಿರಸ್ಕರಿಸಿದ 12 ಅಂಚೆ ಮತಪತ್ರ ನಾಪತ್ತೆತಿರಸ್ಕೃತಗೊಂಡಿದ್ದ 279 ಮತಗಳನ್ನು ಇರಿಸಿದ್ದ ಪೆಟ್ಟಿಗೆಯಲ್ಲಿ 267 ಮತಪತ್ರಗಳು ಮಾತ್ರ ಲಭ್ಯವಾಗಿವೆ. ಉಳಿದ ಮತ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಒಟ್ಟು ತಿರಸ್ಕರಿಸಿದ ಅಂಚೆ ಮತ ಪೈಕಿ 8 ಮತಗಳು ಮಾನ್ಯವಾದವು. ಅವುಗಳನ್ನು 2023ರ ಫಲಿತಾಂಶದ ವೇಳೆಯೇ ಮಾನ್ಯವಾಗಿದ್ದ 1540 ಮತಗಳ ಜೊತೆಗೆ ಸೇರಿ ಎಣಿಕೆ ಮಾಡುವ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ