ಸಾರಾಂಶ
ಬೂದಿಹಾಳ ಗ್ರಾಮದಲ್ಲಿ ಹಿರಿಯ ನಾಗರಿಕರಿಂದ ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆಯ ಅಂಚೆ ಮತದಾನದಲ್ಲಿ ಗ್ರಾಮದ ಚಂದಮ್ಮ ಬಿರಾದಾರ ತಮ್ಮ ಮತ ಚಲಾಯಿಸಿದರು.
ಕೊಡೇಕಲ್:ವಲಯದ ಬೂದಿಹಾಳ, ಹಗರಟಗಿ, ಹೊರಟ್ಟಿ ಬಪ್ಪರಗಿ ಸೇರಿದಂತೆ ಇತರೆ ಗ್ರಾಮಗಳಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಂದ ಗುರುವಾರ ಅಂಚೆ ಮತದಾನ ಮಾಡಲಾಯಿತು. ರಾಯಚೂರು ಲೋಕಸಭಾ ಹಾಗೂ ಸುರಪುರ ವಿಧಾನಸಭಾ ಉಪಚುನಾವಣೆಯ ಚುನಾವಣಾ ಫಾರ್ಮ್ 12 ತುಂಬಿದ ಹಿರಿಯ ನಾಗರಿಕರು, ಅಂಗವಿಕಲರಿಗೆ ಜಿಪಿಎಸ್ ಮುಖಾಂತರ ಪ್ರಪ್ರಥಮ ಬಾರಿಗೆ ಮನೆಯಿಂದಲೇ ಮತ ಚಲಾಯಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅಧಿಕಾರಿಗಳು ವಯಸ್ಕರ ಮತದಾರರ ಮನೆಗಳಿಗೆ ತೆರಳಿ ಮತದಾನ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು. ಕುಳಿತಲ್ಲಿಯೇ ಹಿರಿಯರು ಉತ್ಸಾಹದಿಂದ ಬ್ಯಾಲೆಟ್ ಪೇಪರ್ ಮುಖಾಂತರ ಮತ ಚಲಾಯಿಸಿ ಅಂಚೆ ಮತದಾನ ಮಾಡಿದರು. ಈ ವೇಳೆ ಚುನಾವಣಾ ಅಧಿಕಾರಿಗಳಾದ ಜೋಗಪ್ಪ, ಸಾಹೇಬರೆಡ್ಡಿ, ಮಲ್ಲಪ್ಪ ಹಾಗೂ ಗ್ರಾಮ ಆಡಳಿತಾಧಿಕಾರಿಗಳಾದ ಸುರೇಶ, ಬಸವರಾಜ ಪೀರಾಪುರ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆ ಗದ್ದೆಮ್ಮ ಇದ್ದರು.