ಶಿವಮೊಗ್ಗ: ಶಿವಮೊಗ್ಗದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಸಂಭ್ರಮಕ್ಕೆ ಅಧಿಕೃತ ಚಾಲನೆ ಸಿಕ್ಕಿದ್ದು, ಫೆ.24ರಿಂದ 28ರವರೆಗೆ ನಡೆಯಲಿರುವ ಈ ಅದ್ಧೂರಿ ಉತ್ಸವದ ಪೋಸ್ಟರ್ ಅನ್ನು ಮಂಗಳವಾರ ದೇವಾಲಯದ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು.

ಸಮಿತಿಯ ಅಧ್ಯಕ್ಷ ಎಸ್. ಕೆ. ಮರಿಯಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಸೇರಿದಂತೆ ಹಲವು ಪದಾಧಿಕಾರಿಗಳು ಪೋಸ್ಟರ್‌ಗಳನ್ನು ಅನಾವರಣಗೊಳಿಸಿದರು.

ಸಂಪ್ರದಾಯದಂತೆ ಶಿವಮೊಗ್ಗ ನಗರದ ಆಟೋ ರಿಕ್ಷಾಗಳ ಹಿಂಭಾಗದಲ್ಲಿ ಜಾತ್ರೆಯ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಸಾರ್ವಜನಿಕ ಪ್ರಚಾರಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಎಸ್. ಕೆ. ಮರಿಯಪ್ಪ ಮಾತನಾಡಿ, ಜಾತ್ರೆಯ ಅಂಗವಾಗಿ ಈ ಬಾರಿ ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ರಿಕೆಟ್ ಟೂರ್ನಮೆಂಟ್ ಹಾಗೂ ರಾಜ್ಯ ಮಟ್ಟದ ಟಗರು ಕಾಳಗದ ಪೋಸ್ಟರ್‌ಗಳನ್ನೂ ಸಹ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಫೆ.14ರಂದು ಮಂಡಳಿ ಯುವಕರ ತಂಡದ ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆಯಾಗಿದ್ದರೆ, ಫೆ.21 ಮತ್ತು 22 ರಂದು ನಗರದ ಸೈನ್ಸ್ ಮೈದಾನದಲ್ಲಿ ರಾಜ್ಯ ಮಟ್ಟದ ಟಗರು ಕಾಳಗ ನಡೆಯಲಿದೆ ಎಂದರು.

ನಂತರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಮಾತನಾಡಿ, ಈ ಬಾರಿಯೂ ಸಹ ಆಟೋಗಳ ಹಿಂಬದಿಯಲ್ಲಿ ಪೋಸ್ಟರ್ ಅಂಟಿಸುವ ಸಂಪ್ರದಾಯದಂತೆ ಚಾಲನೆ ನೀಡಲಾಯಿತು. ಈ ಬಾರಿಯ ಟಗರು ಕಾಳಗಕ್ಕೆ ಉತ್ತರ ಕರ್ನಾಟಕ ಭಾಗದಿಂದ ಅತಿ ಹೆಚ್ಚು ಟಗರುಗಳು ಆಗಮಿಸುತ್ತಿರುವುದು ವಿಶೇಷವಾಗಿದೆ. ಈ ರೋಚಕ ಸ್ಪರ್ಧೆಗೆ ವರ್ತೂರು ಸಂತೋಷ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರೆಯ ಮೆರಗನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದರು.