ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಯ ಕೀ ಉತ್ತರದಲ್ಲೇ ತಪ್ಪು!
2 Min read
KannadaprabhaNewsNetwork
Published : Oct 09 2023, 12:46 AM IST
Share this Article
FB
TW
Linkdin
Whatsapp
ಕೆಇಎ ಲೋಗೋ | Kannada Prabha
Image Credit: KP
ಪದವಿ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪ್ರವೇಶಕ್ಕೆ ಕೆಇಎ ನಡೆಸುವ ಪ್ರವೇಶ ಪರೀಕ್ಷೆ(ಪಿಜಿ ಸಿಇಟಿ)ಗೆ ಹಾಜರಾಗಿದ್ದರು. ಎಂಬಿಎ ಹಾಗೂ ಎಂಸಿಎ ಆಕಾಂಕ್ಷಿಗಳು ಸೆ.24ರಂದು ಪ್ರವೇಶ ಪರೀಕ್ಷೆ ಬರೆದಿದ್ದರು. ಇದರ ಕೀ ಉತ್ತರಗಳನ್ನು ಒಂದು ವಾರದ ಬಳಿಕ ಕೆಇಎ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಆಗ ಅದರಲ್ಲಿ ತಪ್ಪು ಉತ್ತರ ಗೋಚರಿಸಿದೆ.
ಆತ್ಮಭೂಷಣ್ ಕನ್ನಡಪ್ರಭ ವಾರ್ತೆ ಮಂಗಳೂರು ಕರ್ನಾಟಕ ಪ್ರವೇಶ ಪರೀಕ್ಷಾ ಪ್ರಾಧಿಕಾರ(ಕೆಇಎ) ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ನಡೆಸಿದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಮಾತ್ರವಲ್ಲ ಕೀ ಉತ್ತರಗಳಲ್ಲೂ ತಪ್ಪು ಉತ್ತರ ನೀಡಿ ಎಡವಟ್ಟು ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಪದವಿ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪ್ರವೇಶಕ್ಕೆ ಕೆಇಎ ನಡೆಸುವ ಪ್ರವೇಶ ಪರೀಕ್ಷೆ(ಪಿಜಿ ಸಿಇಟಿ)ಗೆ ಹಾಜರಾಗಿದ್ದರು. ಎಂಬಿಎ ಹಾಗೂ ಎಂಸಿಎ ಆಕಾಂಕ್ಷಿಗಳು ಸೆ.24ರಂದು ಪ್ರವೇಶ ಪರೀಕ್ಷೆ ಬರೆದಿದ್ದರು. ಇದರ ಕೀ ಉತ್ತರಗಳನ್ನು ಒಂದು ವಾರದ ಬಳಿಕ ಕೆಇಎ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಆಗ ಅದರಲ್ಲಿ ತಪ್ಪು ಉತ್ತರ ಗೋಚರಿಸಿದೆ. ಏನಿದು ಎಡವಟ್ಟು?: ಎಂಸಿಎ ಆಕಾಂಕ್ಷಿಗಳಿಗೆ ನೀಡಿದ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಐದು ಅಂಕದ ಪ್ರಶ್ನೆಗಳಿಗೆ ಸರಿಯಾದ ಆಪ್ಶನ್ ಇರಲಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಈ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನ ಮಾಡುತ್ತಿದ್ದು, ಯಾವ ಪ್ರಶ್ನೆಗೆ ಯಾವುದು ಸರಿ ಉತ್ತರ ಇರಬೇಕು ಎಂಬ ಬಗ್ಗೆ ಯಾರಲ್ಲೂ ಖಚಿತತೆ ಇಲ್ಲ. ಹೀಗಾಗಿ ಈ ಪ್ರಶ್ನೆಗೆ ಐದು ಅಂಕಗಳನ್ನು ಗ್ರೇಸ್ ಅಂಕ ಎಂದು ಪರಿಗಣಿಸುವ ಸಾಧ್ಯತೆ ಹೇಳಲಾಗುತ್ತಿದೆ. ಆದರೆ ಕೀ ಉತ್ತರದಲ್ಲಿ ಈ ಕುರಿತು ಸ್ಪಷ್ಟ ಮಾಹಿತಿ ಇಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು. ಕೀ ಉತ್ತರದಲ್ಲೂ ತಪ್ಪು: ಎಂಬಿಎ ಮತ್ತು ಎಂಸಿಎ ವಿಷಯದ ಪರೀಕ್ಷೆಯ ಕೀ ಉತ್ತರಗಳಲ್ಲೂ ಸಾಕಷ್ಟು ತಪ್ಪು ನುಸುಳಿಗೊಂಡಿದೆ ಎನ್ನುವುದು ವಿದ್ಯಾರ್ಥಿಗಳ ಆರೋಪ. ಸುಮಾರು 7 ಅಂಕಗಳ ವರೆಗಿನ ಪ್ರಶ್ನೆಗಳಿಗೆ ಕೀ ಉತ್ತರ ಸರಿಯಾದ್ದನ್ನು ನೀಡಿಲ್ಲ. ಇದು ಗೊಂದಲಕ್ಕೆ ಕಾರಣವಾಗಿದೆ. ಕೀ ಉತ್ತರವನ್ನು ಸರಿಪಡಿಸಿ ನೀಡದೇ ಇದ್ದರೆ, ಅಂತಿಮ ಮೌಲ್ಯಮಾಪನ ವೇಳೆ ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿಗಳು ಬಲಿಪಶು ಆಗಬೇಕಾಗುತ್ತದೆ. ಪ್ರವೇಶ ಪರೀಕ್ಷೆಯಲ್ಲಿ ಒಂದೊಂದು ಅಂಕವೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಕೀ ಉತ್ತರಗಳನ್ನು ಕೂಡಲೇ ಸರಿಪಡಿಸಿ ಪ್ರಕಟಿಸುವಂತೆ ವಿದ್ಯಾರ್ಥಿಗಳು ಕೆಇಎ ಅನ್ನು ಒತ್ತಾಯಿಸಿದ್ದಾರೆ. ಐದು ವರ್ಷಗಳ ಹಿಂದೆ ಹೀಗೆಯೇ ಕೀ ಉತ್ತರದಲ್ಲಿ 40 ಅಂಕಗಳು ತಪ್ಪಾಗಿದ್ದು, ಬಳಿಕ ಸರಿಪಡಿಸಲಾಗಿತ್ತು. ಆಕ್ಷೇಪಣೆಗೆ ಸಮಯ ನೀಡದೆ ಗೊಂದಲ: ಕೀ ಉತ್ತರಕ್ಕೆ ಆಕ್ಷೇಪಣೆಯನ್ನು ಸರಿಯಾದ ದಾಖಲೆಯೊಂದಿಗೆ ಸಲ್ಲಿಸಲು ಅಗತ್ಯ ಸಮಯವನ್ನು ಕೂಡ ಆರಂಭದಲ್ಲಿ ಕೆಇಎ ನೀಡಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಾರೆ. ಕೀ ಉತ್ತರವನ್ನು ಕಳೆದ ಶುಕ್ರವಾರ ಸಂಜೆ 4 ಗಂಟೆಗೆ ಪ್ರಕಟಿಸಿದರೆ, ಭಾನುವಾರ ಬೆಳಗ್ಗೆ 10 ಗಂಟೆ ಬಳಿಕ ಆಕ್ಷೇಪಣೆ ಸಲ್ಲಿಕೆಗೆ ಲಿಂಕ್ ತೆರೆದುಕೊಳ್ಳುತ್ತಿರಲಿಲ್ಲ. ಹೀಗಾಗಿ ಸರಿ ಉತ್ತರಕ್ಕೆ ಸಂಬಿಧಿಸಿದ ಎಲ್ಲ ದಾಖಲೆಗಳನ್ನು ಕ್ರೊಢೀಕರಿಸಿಕೊಂಡು ತರಾತುರಿಯಲ್ಲಿ ಆಕ್ಷೇಪಣೆ ಸಲ್ಲಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಿಲ್ಲ. ಆಕ್ಷೇಪಣೆ ಸಲ್ಲಿಸಬೇಕಾದರೆ ವಿದ್ಯಾರ್ಥಿಗಳು ತಪ್ಪು ಕೀ ಉತ್ತರಕ್ಕೆ ಸರಿಯಾದ ಉತ್ತರದ ದಾಖಲೆಯನ್ನು ಕೂಡ ಹಾಜರುಪಡಿಸಬೇಕು. ಈ ಬಗ್ಗೆ ವಿದ್ಯಾರ್ಥಿಗಳು ಕೆಇಎಯನ್ನು ಸಾಕಷ್ಟು ಬಾರಿ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡ ಬಳಿಕ ಬುಧವಾರದಿಂದ ಲಿಂಕ್ ಮತ್ತೆ ತೆರೆದುಕೊಂಡಿದೆ. ಎಷ್ಟು ಅವಧಿಯೊಳಗೆ ಸರಿಯಾದ ಕೀ ಉತ್ತರ ಸಲ್ಲಿಸಬೇಕು ಎಂಬ ಬಗ್ಗೆ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿಲ್ಲ. ಆಕ್ಷೇಪಣೆ ಸಲ್ಲಿಕೆಗೆ ಸದ್ಯಕ್ಕೆ ಕಾಲಾವಕಾಶ ನೀಡಲಾಗಿದೆ ಎನ್ನುವುದಷ್ಟೆ ಸಮಾಧಾನದ ಸಂಗತಿ. ಕರೆ ಸ್ವೀಕರಿಸದೆ ಉದ್ಧಟತನ: ಕೀ ಉತ್ತರ ಸೇರಿದಂತೆ ಅಗತ್ಯ ಮಾಹಿತಿಗೆ ಕರೆ ಮಾಡಿದರೆ ಕೆಇಎ ಬಳಿ ಸರಿಯಾಗಿ ಸ್ಪಂದಿಸುವವರು ಇಲ್ಲ ಎಂಬುದು ಬಹುತೇಕ ವಿದ್ಯಾರ್ಥಿಗಳ ಆರೋಪ. ವೆಬ್‌ಸೈಟ್‌ನಲ್ಲಿ ನಮೂದಿಸಿರುವ ಸ್ಥಿರ ದೂರವಾಣಿಗೆ(080-23460460,23564583) ಕರೆ ಮಾಡಿದರೆ ಯಾವಾಗಲೂ, ಎಷ್ಟು ಹೊತ್ತಿಗೂ ಬ್ಯೂಸಿ ಎಂದೇ ಬರುತ್ತದೆ. ಲೈನ್ ಸಿಕ್ಕಿದರೂ ‘ಕರೆ ಕನೆಕ್ಟ್ ಮಾಡುತ್ತೇವೆ’ ಎಂದು ಅರ್ಧದಲ್ಲೇ ಕರೆ ಕಡಿತಗೊಳ್ಳುತ್ತದೆ. ಮತ್ತೆ ಪ್ರಯತ್ನಿಸುವುದು ಎಂದರೆ ಅಷ್ಟೂ ಸಮಯ ವ್ಯರ್ಥವಾಗಿಯೇ ಕಳೆಯಬೇಕು. ಕೊನೆಗೂ ಸಂಪರ್ಕ ಸಿಕ್ಕಿ ಸಮಸ್ಯೆ ಹೇಳಿಕೊಂಡರೆ, ಅದನ್ನು ಸರಿಪಡಿಸುವುದು ಬಿಟ್ಟು ಕರೆಯನ್ನೇ ಕಟ್ ಮಾಡುವ ಉಡಾಫೆ ವರ್ತನೆಯನ್ನು ಕೆಇಎ ಸಿಬ್ಬಂದಿ ತೋರ್ಪಡಿಸುತ್ತಿದ್ದಾರೆ ಎನ್ನುವುದು ನೊಂದ ವಿದ್ಯಾರ್ಥಿಗಳ ಅಳಲು. ------------ ಕೀ ಉತ್ತರದಲ್ಲಿ ತಪ್ಪಾಗಿದೆ, ಸರಿಪಡಿಸಲು ಆಕ್ಷೇಪಣೆಗೆ ಲಿಂಕ್‌ನ್ನು ತೆರೆಯುವಂತೆ ಹೇಳಲು ಕೆಇಎ ಕಚೇರಿಗೆ ನೂರಿನ್ನೂರು ಬಾರಿ ಕರೆ ಮಾಡಿದ್ದೇನೆ. ಪ್ರತಿ ಬಾರಿಯೂ ಬ್ಯೂಸಿ, ಕರೆ ಸ್ವೀಕರಿಸಿದರೆ, ಸಂಬಂಧಪಟ್ಟವರಿಗೆ ಕೊಡುತ್ತೇವೆ ಎಂದು ಕರೆ ಕಡಿತ ಮಾಡುತ್ತಾರೆ. ಕೊನೆಗೂ ಶತಾಯಗತಾಯ ಪ್ರಯತ್ನಿಸಿ ತರಾಟೆಗೆ ತೆಗೆದುಕೊಂಡಾಗ ಆಕ್ಷೇಪಣೆ ಲಿಂಕ್‌ನ್ನು ತೆರೆದಿದ್ದಾರೆ. ವಿದ್ಯಾರ್ಥಿಗಳನ್ನು ಕೆಇಎ ಈ ರೀತಿ ಸತಾಯಿಸುವುದು ಸರಿಯಲ್ಲ. । ನೊಂದ ವಿದ್ಯಾರ್ಥಿನಿ, ಎಂಸಿಎ ಆಕಾಂಕ್ಷಿ, ಮಂಗಳೂರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.