ಕೇಂದ್ರ ಸಚಿವ ಎಚ್ಡಿಕೆಗೆ ನಾಗರೀಕ ಸನ್ಮಾನ ಮುಂದೂಡಿಕೆ

| Published : Jun 15 2024, 01:02 AM IST

ಸಾರಾಂಶ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಾನೂನು ಸಂಕಷ್ಟದ ಹಿನ್ನೆಲೆ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರಿಗೆ ಜೂ.16 ರಂದು ನಗರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ, ಮತದಾರರಿಗೆ ಕೃತಜ್ಞತಾ ಸಮಾವೇಶವನ್ನು ಮುಂದೂಡಲಾಗಿದೆ ಎಂದು ಜೆಡಿಎಸ್ ನಾಯಕರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ:

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಾನೂನು ಸಂಕಷ್ಟದ ಹಿನ್ನೆಲೆ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರಿಗೆ ಜೂ.16 ರಂದು ನಗರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ, ಮತದಾರರಿಗೆ ಕೃತಜ್ಞತಾ ಸಮಾವೇಶವನ್ನು ಮುಂದೂಡಲಾಗಿದೆ ಎಂದು ಜೆಡಿಎಸ್ ನಾಯಕರು ತಿಳಿಸಿದರು.ಶುಕ್ರವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು, ಭಾನುವಾರ ಮಂಡ್ಯದ ಸರ್ ಎಂವಿ ಕ್ರೀಡಾಂಗಣದಲ್ಲಿ ಕೇಂದ್ರ ಸಚಿವ ಹೆಚ್ಡಿಕೆಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿತ್ತು. ಮಾಜಿ ಸಿಎಂಗೆ ಕಾನೂನು ಸಂಕಷ್ಟ ಇರುವ ಕಾರಣ ಸಮಾವೇಶವನ್ನು ಮುಂದೂಡಲಾಗಿದೆ ಎಂದರು.

ಬೃಹತ್ ಕೃತಜ್ಞತಾ ಸಮಾವೇಶ ಮುಂದೂಡಿ ಜೂ.15 ರಂದು ಸರಳವಾಗಿ ಕಾರ್ಯಕ್ರಮ ಆಯೋಜಿಸಿ ಮಂಡ್ಯಕ್ಕೆ ಕೇಂದ್ರ ಸಚಿವರಾದ ನಂತರ ಮೊದಲ ಬಾರಿ ಆಗಮಿಸುವ ಎಚ್ .ಡಿ.ಕುಮಾರಸ್ವಾಮಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗುವುದು ಎಂದು ಹೇಳಿದರು.ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೂತನ ಸಂಸದರ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಗಡಿಭಾಗ ಮದ್ದೂರಿನ ನಿಡಘಟ್ಟ ಬಳಿಯಿಂದ ಎಚ್.ಡಿ.ಕುಮಾರಸ್ವಾಮಿಗೆ ಅದ್ಧೂರಿ ಸ್ವಾಗತ ಕೋರಲು ಜೆಡಿಎಸ್ ನಾಯಕರು, ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದರು.

ಮಂಡ್ಯದ ಹನಕೆರೆಯಿಂದ ನೂತನ ಕೇಂದ್ರ ಸಚಿವರನ್ನು ಸ್ವಾಗತಿಸಲಾಗುವುದು. ನಂತರ ಜಯಚಾಮರಾಜ ಒಡೆಯರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ತೆರದ ವಾಹನದಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಗುವುದು. ಬಳಿಕ ಡೀಸಿ ಕಚೇರಿಯಲ್ಲಿ ನೂತನ ಸಂಸದ ಕಚೇರಿ ಉದ್ಘಾಟಿಸಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದು ಹೇಳಿದರು.

ಕೇಂದ್ರ ಸಚಿವರು ಮಂಡ್ಯದಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಸಾರ್ವಜನಿಕರು, ಕಾರ್ಯಕರ್ತರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್ಮುಲ್ ರಾಮಚಂದ್ರು , ನವೀನ್ ಉಪಸ್ಥಿತರಿದ್ದರು.

ಕರ್ನಾಟಕದ ಪೊಲೀಸರು ಇಡೀ ದೇಶಕ್ಕೆ ಮಾದರಿ: ಸಿಎಸ್‌ಪಿಮಂಡ್ಯ: ಕರ್ನಾಟಕದ ಪೊಲೀಸರು ದೇಶಕ್ಕೆ ಮಾದರಿ. ಬಹುತೇಕ ಯಾವುದೇ ಪ್ರಕರಣ ತೆಗೆದುಕೊಂಡರು ನ್ಯಾಯಯುತವಾಗಿ ಜವಾಬ್ದಾರಿ ನಿರ್ವಹಿಸಿದ ಬದ್ಧತೆ ಇಲಾಖೆಗೆ ಇದೆ ಎಂದು ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು ಹೇಳಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧಿಸಿದ್ದು, ದರ್ಶನ್ ಕಾನೂನಾತ್ಮಕವಾಗಿ ನಿಜವಾಗಿಯೂ ಅಪರಾಧ ಮಾಡಿದ್ರೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾನೂನು ಚೌಕಟ್ಟಿನಲ್ಲಿ ಏನು ಆಗಬೇಕೋ ಅದು ಆಗುತ್ತದೆ ಎಂದರು.ನಟ ದರ್ಶನ್ ಪ್ರಕರಣದಲ್ಲಿ ಸಚಿವರ ಹಸ್ತಕ್ಷೇಪ ವಿಚಾರ ನಮಗೆ ಗೊತ್ತಿಲ್ಲ. ಇದರ ಬಗ್ಗೆ ಮಾತನಾಡಲ್ಲ. ಯಾವುದೇ ಒಬ್ಬ ಮನುಷ್ಯ ತಪ್ಪು ಮಾಡಿದ್ದರೆ ಕಾನೂನಾತ್ಮಕ ವ್ಯವಸ್ಥೆಯಲ್ಲಿ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕದ ಪೊಲೀಸರು ದೇಶ ಮೆಚ್ಚುವ ರೀತಿಯಲ್ಲಿ ಅನೇಕ ಪ್ರಕರಣ ಬೇಧಿಸಿದ್ದಾರೆ. ಇದನ್ನು ಅಷ್ಟೇ ಸೂಕ್ಷ್ಮವಾಗಿ ಬೇದಿಸುವ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಮುಗಿದ ಅಧ್ಯಾಯ. ನಟ ದರ್ಶನ್ ಪ್ರಕರಣ ಶುರುವಾದ ಮೇಲೆ ಪ್ರಜ್ವಲ್ ದು ಮುಗಿದಿದೆ ಅನ್ನೋ ಭಾವನೆ ಇದೆ. ಮುಂದೆ ಎಲ್ಲವೂ ಕೋರ್ಟ್ ನಲ್ಲಿ ಇತ್ಯರ್ಥವಾಗುತ್ತದೆ. ನಾನು ಆ ವಿಚಾರಗಳನ್ನು ಪ್ರಸ್ತಾಪ ಮಾಡಲ್ಲ. ಕಾನೂನು ವ್ಯಾಪ್ತಿ ಮೀರಿ ಯಾರು ಏನು ಮಾಡುವುದಕ್ಕೆ ಆಗಲ್ಲ ಎಂದರು.