ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಇನ್ನೇನು ಆಲೂಗಡ್ಡೆ ಬೆಳೆ ಬಂತು. ಕೈಗೊಂದಿಷ್ಟು ಕಾಸು ಬರುತ್ತದೆ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ರೈತರಿಗೆ ಮರ್ಮಾಘಾತವಾಗಿದೆ. ಆಲೂಗಡ್ಡೆ ಬೆಲೆ ಭಾರೀ ಕುಸಿತ ಕಂಡಿದ್ದರಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಆಲೂಗಡ್ಡೆಯೂ ಒಂದು. ವರ್ಷಕ್ಕೆ ಎರಡು ಬಾರಿ ರೈತರು ಆಲೂಗಡ್ಡೆ ಬೆಳೆದು ಉತ್ತಮ ಲಾಭ ಗಳಿಸುತ್ತಾರೆ. ಅಕ್ಟೋಬರ್ - ಡಿಸೆಂಬರ್ ತಿಂಗಳಿನಲ್ಲಿ ಬಿತ್ತನೆ ಮಾಡಿದ ಬೇಸಿಗೆ ಆಲೂಗಡ್ಡೆ ಬೆಳೆ ಕೊಯ್ಲು ಈಗ ಆರಂಭಗೊಂಡಿದ್ದು, ಮಾರುಕಟ್ಟೆಯಲ್ಲಿ ಆಲೂಗಡ್ಡೆ ಆವಕ ಹೆಚ್ಚಾಗಿ ಬೆಲೆ ಕುಸಿತ ಕಂಡಿದೆ.
ಕಳೆದ ನಾಲ್ಕು ವರ್ಷಗಳಿಂದ ಇದೇ ವೇಳೆಯಲ್ಲಿ ಆಲೂಗಡ್ಡೆ ಬೆಳೆಯುತ್ತಿರುವ ರೈತರಿಗೆ ಬೆಲೆ ಕೈಕೊಡುತ್ತಿದೆ. ಒಂದು ತಿಂಗಳ ಹಿಂದೆ ಸ್ಥಳೀಯ ಮಾರುಕಟ್ಟೆಯಲ್ಲಿ 50 ಕೆ.ಜಿ. ಚೀಲ ಗುಣಮಟ್ಟದ ಆಲೂಗಡ್ಡೆ ಬೆಲೆ 2100 ರಿಂದ 2500 ಇತ್ತು. ಹಿಂದಿನ ವಾರ 700- 800 ರು.ಗೆ ಕುಸಿದಿತ್ತು. ಪ್ರಸ್ತುತ 480-650 ರು.ಗೆ ಮಾರಾಟವಾಗುತ್ತಿದೆ.ಜಿಲ್ಲೆಯ ರೈತರು ಪ್ರತಿ ವರ್ಷ ಸಾವಿರಾರು ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬೆಳೆ ಬೆಳೆಯುತ್ತಿದ್ದು, ಮಾರಾಟಕ್ಕೆ ಬೆಂಗಳೂರಿನ ಮಾರುಕಟ್ಟೆ ಅವಲಂಬಿಸಿದ್ದಾರೆ. ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಿಂದ ಭಾರೀ ಪ್ರಮಾಣದಲ್ಲಿ ಆಲೂಗಡ್ಡೆ ತಂದಿರುವುದರಿಂದ ಬೆಲೆಯಲ್ಲಿ ಭಾರೀ ಕುಸಿತವಾಗಿದೆ ಎನ್ನುತ್ತಾರೆ ಆಲೂಗಡ್ಡೆ ವ್ಯಾಪಾರಿಗಳು.
ಎಲ್ಲಾ ರೈತರು ಆಲೂಗಡ್ಡೆ ಬೆಳೆಗೆ ಮುಗಿಬಿದ್ದಿದ್ದರಿಂದ ಉತ್ಪಾದನೆ ಗಣನೀಯವಾಗಿ ಹೆಚ್ಚಾಗಿದೆ. ಬಹುತೇಕ ಕಡೆ ಆಲೂಗಡ್ಡೆ ಕೊಯ್ಲು ಶುರು ಮಾಡಿರುವ ರೈತರು ನೇರ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಇದರಿಂದ ಏಕಾಏಕಿ ಮಾರುಕಟ್ಟೆಯಲ್ಲಿ ಆಲೂಗಡ್ಡೆ ಆವಕ ಹೆಚ್ಚಾಗುತ್ತಿದ್ದು, ಬೇಡಿಕೆ ಇದೇ ಪ್ರಮಾಣದಲ್ಲಿ ಹೆಚ್ಚಾಗಿಲ್ಲ. ಬೆಲೆ ವ್ಯತ್ಯಾಸಕ್ಕೆ ಇದೇ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.
ಸ್ಥಳೀಯ ಮಾರುಕಟ್ಟೆಯಲ್ಲಿ ಆಲೂಗಡ್ಡೆ ಬೆಲೆ ಕುಸಿದಿದೆ. ಬೆಂಗಳೂರಿಗೆ ಹೋದರೆ ದುಪ್ಪಟ್ಟು ಖರ್ಚು ಮಾಡಬೇಕು. ಬೆಂಗಳೂರಿನಲ್ಲಿ ಮೂರ್ನಾಲ್ಕು ದಿನ ತಂಗಬೇಕು. ವಸತಿ, ಊಟ ಅಲ್ಲದೇ ಇತರ ಖರ್ಚು ನಿಭಾಯಿಸಬೇಕು. ಅದಕ್ಕೂ ಮುನ್ನ ಆಲೂಗಡ್ಡೆ ಮೂಟೆ ತುಂಬಲು ಕೂಲಿ ಕಾರ್ಮಿಕರಿಗೆ ದಿನಕ್ಕೆ ತಲಾ 700-800 ರು. ನೀಡಬೇಕು. ಸಾಗಣೆಗೆ ವಾಹನ ವ್ಯವಸ್ಥೆ ಮಾಡಿಕೊಳ್ಳಬೇಕು. ಬೆಲೆ ಕುಸಿತದಿಂದ ಬೆಂಗಳೂರಿಗೆ ಹೋಗಲೂ ಮನಸ್ಸಾಗುತ್ತಿಲ್ಲ. ಏನು ಮಾಡಬೇಕೆಂದು ದಿಕ್ಕು ತೋಚದಾಗಿದೆ ಎನ್ನುತ್ತಾರೆ ರೈತರು.
ಸಾಲ ಮಾಡಿ ಆಲೂಗಡ್ಡೆ ಬೆಳೆಯಲಾಗಿದೆ. ಉತ್ತಮ ಇಳುವರಿ ಮತ್ತು ಉತ್ತಮ ಬೆಲೆ ಬರುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಕಳೆದ ನವೆಂಬರ್ ತಿಂಗಳ ಅಂತ್ಯದಲ್ಲಿ ಆಲೂಗಡ್ಡೆ ಬೆಳೆ ಬಿತ್ತನೆ ಮಾಡಿದೆ. ಆ ಸಮಯದಲ್ಲಿ 50 ಕೆಜಿ ಒಂದು ಮೂಟೆ ಬಿತ್ತನೆ ಆಲೂಗಡ್ಡೆ ದರ 3600 ರು. ಇತ್ತು. ಈಗ ಬೆಲೆ ಕುಸಿತ ಸಂಕಷ್ಟ ತಂದೊಡ್ಡಿದೆ ಎನ್ನುತ್ತಾರೆ ಅರೂರಿನ ರೈತ ಗೋಪಾಲಕೃಷ್ಣ.ಇದೆಲ್ಲದರ ನಡುಲೆಯೇ ದರ ಬರುವವರೆಗೂ ನಗರ ಹೊರವಲಯದ ಕೋಲ್ಡ್ ಸ್ಟೋರೇಜ್ನಲ್ಲಿ ಆಲೂಗಡ್ಡೆ ದಾಸ್ತಾನು ಮಾಡಲು ರೈತರು ಮುಗಿಬಿದ್ದಿದ್ದು, ವಾರಗಟ್ಟಲೇ ಬಿರು ಬಿಸಲಿನಲ್ಲೇ ಕಾಯುವಂತಾಗಿದೆ. ನಗರ ಹೊರವಲಯದ ಖಾಸಗಿ ನಂದಿ ಕೋಲ್ಡ್ ಸ್ಟೋರೇಜ್ ಕೇಂದ್ರದ ಬಳಿ ಟ್ರ್ಯಾಕ್ಟರ್, ಲಾರಿ ಸೇರಿ ಟೆಂಪೋಗಳಲ್ಲಿ ಆಲೂಗಡ್ಡೆ ಹೊತ್ತು ತಂದು ರೈತರು ಸ್ಟೋರ್ ಮಾಡಲು ಕಾಯುತ್ತಿದ್ದಾರೆ. ಇತ್ತ ಆಲೂಗಡ್ಡೆ ಬಿಸಿಲಿನ ತಾಪಕ್ಕೆ ವಾಹನಗಳಲ್ಲೇ ಕೊಳೆಯಲು ಆರಂಭಿಸುತ್ತಿವೆ. ಮತ್ತೊಂದೆಡೆ ಆಲೂಗಡ್ಡೆ ಹೊತ್ತು ವಾರಗಟ್ಟಲೇ ಬಿಸಿಲಲ್ಲಿ ನಿಂತಲ್ಲೇ ನಿಂತು ವಾಹನಗಳು ಹಾಳಾಗುವಂತಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಹಿಂದೆ ನಗರದ ಎಪಿಎಂಸಿಯಲ್ಲಿ ಸರ್ಕಾರ ಕೋಲ್ಡ್ ಸ್ಟೋರೇಜ್ ನಿರ್ಮಿಸಿತ್ತು. ಅದು ಬಳಕೆಯಾಗದೇ ಮತ್ತು ನಿರ್ವಹಣೆ ಕೊರತೆಯಿಂದ ಹಾಳಾಯಿತು.. ಈಗ ಸರ್ಕಾರ ಎಚ್ಚೆತ್ತು ಕೋಲ್ಡ್ ಸ್ಟೋರೇಜ್ ಆರಂಭಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.