- ಅವೈಜ್ಞಾನಿಕ ಕಾಮಗಾರಿ । ಕಣ್ಣೆತ್ತಿಯೂ ನೋಡದ ಅಧಿಕಾರಿಗಳು
- - -ನ್ಯಾಮತಿ: ಪಟ್ಟಣದ ಪ್ರಮುಖ ಬೀದಿಗಳ ಸಿ.ಸಿ. ರಸ್ತೆಗಳೆಲ್ಲ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಗುಂಡಿಗಳಿಂದ ತುಂಬಿಹೋಗಿವೆ. ಸ್ಥಳೀಯ ಆಡಳಿತಕ್ಕೆ ಮಾಹಿತಿಯನ್ನೂ ನೀಡದೇ ಜೆಸಿಬಿ ಮುಖಾಂತರ ಅಲ್ಲಲ್ಲಿ ಗುಂಡಿಗಳನ್ನು ಅಗೆದಿದ್ದಾರೆ. ಪರಿಣಾಮ ಪ್ರತಿದಿನ ಈ ರಸ್ತೆಗಳಲ್ಲಿ ವಾಹನಗಳು, ಸಾರ್ವಜನಿಕರು ನಿರಾತಂಕವಾಗಿ ಸಂಚರಿಸಲು ಆಗದಂಗಾಗಿದೆ.
ಪಟ್ಟಣದ ನೆಹರೂ ರಸ್ತೆಯಲ್ಲಿರುವ ಕೆಇಬಿ ಕಚೇರಿಯಿಂದ ಗಾಂಧಿ ರಸ್ತೆಯ ಮಾರ್ಗದಲ್ಲಿ ಖಾಸಗಿ ಏಜೆನ್ಸಿಯವರು ಕಳೆದೆರಡು ತಿಂಗಳಿಂದ ಜೆಸಿಬಿ ಮೂಲಕ ಅಲ್ಲಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳಾಗಲಿ, ತಾಲೂಕು ಆಡಳಿತವಾಗಲಿ ಗಮನಿಸುತ್ತಿಲ್ಲ. ಹೀಗೆ ಅಗೆದ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚುತ್ತಿಲ್ಲ. ಪರಿಣಾಮ ಸಾರ್ವಜನಿಕರು, ವಾಹನ ಸವಾರರು ಗುಂಡಿಗಳಲ್ಲಿ ಬಿದ್ದ ಪ್ರಕರಣಗಳು ನಡೆದಿವೆ. ರಸ್ತೆಯ ಪಕ್ಕದಲ್ಲಿರುವ ಮನೆಗಳ ಮಾಲೀಕರು ಸ್ಥಳೀಯ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.ಸಿಸಿ ರಸ್ತೆಯಲ್ಲಿ ಯಾವ ಕಾಮಗಾರಿ ನಡೆಸುತ್ತಿದ್ದೀರಿ ಎಂದು ಸಾರ್ವಜನಿಕರು ಕೆಲಸಗಾರರನ್ನು ವಿಚಾರಿಸಿದರೆ, ನಾವು ಕೂಲಿ ಕಾರ್ಮಿಕರು, ನಮಗೆ ಈ ಕೆಲಸ ಮಾಡಲು ಹೇಳಿದ್ದಾರೆ. ನಾವು ಕಾಮಗಾರಿ ನಡೆಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಯಾವುದೇ ಅಧಿಕಾರಿಗಳೂ ಇದುವರೆಗೂ ಇಲ್ಲಿಗೆ ಬಂದು ವಿಚಾರಿಸಿಲ್ಲ. ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದರೆ, ಹೇಳೋರು ಕೇಳೋರೇ ಇಲ್ಲದಂತಾಗಿದೆ ಎಂದು ಪಟ್ಟಣದ ಕೆಲ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾಮಗಾರಿ ನಡೆಸುತ್ತಿರುವವರು ಗುಂಡಿ ತೆಗೆದು ಕೆಲಸ ಮುಗಿದ ಬಳಿಕ ಅವುಗಳನ್ನು ಸಮರ್ಪಕವಾಗಿ ಮುಚ್ಚಬೇಕು. ಆದರೆ, ಗುಂಡಿಗಳನ್ನು ಹಾಗೆಯೇ ಬಿಟ್ಟಿರುವುದು ಜನರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆಯ ಬದಿಯಲ್ಲಿ ಓಡಾಡುವ ಪಾದಚಾರಿಗೆ ಗುಂಡಿ ದಾಟುವಾಗ ವಾನವೊಂದು ಗುದ್ದಿ ಬೀಳಿಸಿದ ಘಟನೆಯೂ ನಡೆದಿದೆ. ಈ ಹಿನ್ನೆಲೆ ಆದಷ್ಟೂ ಬೇಗ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿಸಬೇಕಿದೆ. ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಿದೆ.
- - -
-ಚಿತ್ರ: ನ್ಯಾಮತಿ ಪಟ್ಟಣದ ಸಿಸಿ ರಸ್ತೆಗಳಲ್ಲಿ ಗುಂಡಿಗಳನ್ನು ನಿರ್ಮಿಸಿರುವುದು.