ಸಾರಾಂಶ
ರಾಮನಗರ: ಬಿಡದಿ ಟೌನ್ ಶಿಪ್ ನಿರ್ಮಾಣಕ್ಕಾಗಿ ನಡೆಯುತ್ತಿರುವ ಭೂ ಸ್ವಾಧೀನ ಪ್ರಕ್ರಿಯೆ ವಿರುದ್ಧ ಹೋರಾಟದ ಹಾದಿ ಹಿಡಿದಿರುವ ರೈತರು ಭಾನುವಾರ ಕಲ್ಪವೃಕ್ಷ (ತೆಂಗಿನ ಮರ)ಕ್ಕೆ ಹಾಲು ತುಪ್ಪು ಎರೆದು ಪ್ರಾಣ ಕೊಟ್ಟರು, ಭೂಮಿ ಕೊಡುವುದಿಲ್ಲ ಎಂದು ಶಪಥ ಮಾಡಿದರು.
ಬಿಡದಿ ಹೋಬಳಿ ಹೊಸೂರಿನ ಮದ್ದೂರಮ್ಮ ದೇವಾಲಯದ ಆವರಣದಲ್ಲಿ ಕಂಚುಗಾರನಹಳ್ಳಿ ಮತ್ತು ಬೈರಮಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ 26 ಹಳ್ಳಿಗಳಿಂದ ಆಗಮಿಸಿದ್ದ ನೂರಾರು ರೈತರು ಮತ್ತು ರೈತ ಮಹಿಳೆಯರು ತೆಂಗಿನ ಮರಕ್ಕೆ ಹಾಲು ತುಪ್ಪು ಎರೆದು ಪೂಜೆ ಸಲ್ಲಿಸಿ ಚಳವಳಿ ತೀವ್ರಗೊಳಿಸಿ ಭೂಮಿ ಉಳಿಸಿಕೊಳ್ಳುವುದಾಗಿ ಒಕ್ಕೊರಳಿನಿಂದ ಘೋಷಿಸಿದರು.ಈ ಹೋರಾಟವನ್ನು ವಿವಿಧ ಹಂತಗಳಲ್ಲಿ ನಡೆಸಲು ತೀರ್ಮಾನಿಸಿರುವ ರೈತ ಮುಖಂಡರು, ಭೂ ಮಾಲೀಕರಾದ ರೈತರು, ಪರಿಸರವಾದಿಗಳು, ವಿವಿಧ ರಾಜಕೀಯ ಪಕ್ಷಗಳ ನಾಯಕರನ್ನು ಜೊತೆಗೂಡಿಸಿಕೊಂಡು ಚಳವಳಿ ನಡೆಸುವುದು, ಆಕ್ಷೇಪಣಾ ಅರ್ಜಿ ಸಲ್ಲಿಸಿರುವ 2700 ರೈತರು ಪ್ರತ್ಯೇಕವಾಗಿ ನ್ಯಾಯಾಲಯ ಮೆಟ್ಟಿಲು ಹತ್ತುತ್ತೇವೆ. ಹಸಿರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತರಲು ತೀರ್ಮಾನಿಸಿದರು.
ಆನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್, ಬಿಡದಿ ಟೌನ್‌ಶಿಪ್ ಗಾಗಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ರೈತರು ಬಲವಂತದ ಭೂ ಸ್ವಾಧೀನದ ದೌರ್ಜನ್ಯದ ವಿರುದ್ಧ ಮನವಿ ಸಲ್ಲಿಸಲು ತೆರಳಿದಾಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಾನೊಬ್ಬ ಸರ್ಕಾರದ ಪ್ರತಿನಿಧಿ ಎಂಬುದನ್ನು ಮರೆತು ರೌಡಿಯಂತೆ ವರ್ತಿಸಿದ್ದಾರೆ. ಇದನ್ನು ಇಡೀ ರೈತ ಸಮೂಹ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.ಡಿ.ಕೆ.ಶಿವಕುಮಾರ್ ಅವರಿಗೆ ರಾಜಕೀಯ ಸ್ಥಾನಮಾನ ಸಿಕ್ಕಿರುವುದು ಜನರು ಕೊಟ್ಟ ಮತದಾನದ ಭಿಕ್ಷೆಯಿಂದ ಎಂಬುದನ್ನು ಮರೆತಂತಿದೆ. ನಾವೆಲ್ಲರು ಪ್ರಜಾಪ್ರಭುತ್ವ ವ್ಯವಸ್ಥೆಯಲಿದ್ದು, ಡಿ.ಕೆ.ಶಿವಕುಮಾರ್ ಪಾಳೆಗಾರರಂತೆ ವರ್ತಿಸುವ ಅಗತ್ಯವಿಲ್ಲ. ಈ ರೀತಿ ನಾನು ದೊಡ್ಡವನೆಂದು ಮೆರೆದವರೆಲ್ಲರು ಇತಿಹಾಸ ಪುಟ ಸೇರಿರುವುದನ್ನು ನೋಡಿದ್ದೇವೆ. ಇಂತಹ ವರ್ತನೆ ಪ್ರಜಾಪ್ರಭುತ್ವ ಅವಮಾನ ಹಾಗೂ ಸರ್ಕಾರಕ್ಕೆ ಕಳಂಕ ತರುವ ವರ್ತನೆಯಾಗಿದೆ. ಕೂಡಲೇ ಡಿ.ಕೆ.ಶಿವಕುಮಾರ್ ಬಹಿರಂಗವಾಗಿ ರೈತ ಸಮುದಾಯದಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಈ ಭಾಗದ ಶೇಕಡ 70ಕ್ಕಿಂತ ಹೆಚ್ಚಿನ ರೈತರು ಯೋಜನೆಗೆ ಒಪ್ಪಿಗೆ ನೀಡಿದ್ದಾರೆಂದು ಹಾಗೂ ಹೋರಾಟಗಾರರು ಯಾವುದೊ ರಾಜಕೀಯ ಪಕ್ಷಕ್ಕೆ ಸೇರಿದವರೆಂದು ಸುಳ್ಳು ಹೇಳುತ್ತಿದ್ದಾರೆ. ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಯನ್ನು ಉಳಿಸಿಕೊಳ್ಳಲು ರೈತರು ನ್ಯಾಯಬದ್ಧವಾದ ಹೋರಾಟ ನಡೆಸುತ್ತಿದ್ದಾರೆ. ಆದರೆ, ಭೂಮಿಯನ್ನು ದರೋಡೆ ಮಾಡುವ ಉದ್ದೇಶದಿಂದ ಚಳವಳಿಯನ್ನು ಪಕ್ಷ ರಾಜಕಾರಣದ ಹೆಸರಿನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.ರೈತರಿಂದ ಕೇವಲ ಧಿಕ್ಕಾರವಷ್ಟೇ ಕೂಗಲು ಸಾಧ್ಯವೆಂದು ಡಿ.ಕೆ.ಶಿವಕುಮಾರ್ ದುರಂಹಕಾರದಿಂದ ಸವಾಲು ಹಾಕಿದ್ದಾರೆ. ದೇವನಹಳ್ಳಿಯಲ್ಲಿ 1198 ದಿನಗಳ ಕಾಲ ನಡೆದ ಹೋರಾಟ ನಡೆದಾಗ ಆ ಭಾಗದ ನಾಯಕರು ಡಿ.ಕೆ.ಶಿವಕುಮಾರ್ ರೀತಿಯ ವರ್ತನೆಯನ್ನೇ ತೋರಿಸಿದ್ದರು. ಅದಕ್ಕೆ ಭೂ ಸ್ವಾಧೀನ ರದ್ದು ಪಡಿಸುವ ಮೂಲಕ ರೈತರು ಸರಿಯಾದ ಉತ್ತರವನ್ನೇ ನೀಡಿದ್ದಾರೆ. ಇಲ್ಲಿಯೂ ಅದೇ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.
ದೇಶದ 2ನೇ ಅತಿ ದೊಡ್ಡ ಶ್ರೀಮಂತ ರಾಜಕಾರಣಿಯಾದ ಡಿ.ಕೆ.ಶಿವಕುಮಾರ್ ವಿರುದ್ಧ ಒಂದೆರೆಡು ಹಳ್ಳಿಯ ರೈತರು ಹೋರಾಟ ಮಾಡಿ ಗೆಲ್ಲಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಕೇವಲ ಬೈರಮಂಗಲ - ಕಂಚುಗಾರನಹಳ್ಳಿ ಭಾಗದ ರೈತರ ಸಮಸ್ಯೆ ಎಂದಷ್ಟೇ ಭಾವಿಸುವುದಿಲ್ಲ. ಇದನ್ನು ಇಡೀ ರಾಜ್ಯದ ರೈತರ, ದಲಿತರ, ಯುವಕರ ಸಮಸ್ಯೆ ಎಂದು ಭಾವಿಸಿ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡುತ್ತೇವೆ. ರೈತ ಸಮುದಾಯದ ಒಪ್ಪಿಗೆ ಇಲ್ಲದೆ ಯಾವ ಭೂಮಿ ಪಡೆದುಕೊಳ್ಳುತ್ತೀರಾ ನೋಡುತ್ತೇವೆ ಎಂದು ಟಿ.ಯಶವಂತ್ ಸವಾಲು ಹಾಕಿದರು.ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಭೂ ರಕ್ಷಣಾ ಸಮಿತಿ ಅಧ್ಯಕ್ಷ ರಾಮಣ್ಣ, ಮುಖಂಡರಾದ ಬೈರೇಗೌಡ, ರಾಧಾಕೃಷ್ಣ, ಶ್ರೀಧರ್ , ರವಿ, ನಾಗರಾಜು, ಶ್ರೀನಿವಾಸ್ ಶೆಟ್ಟಿ, ಬೈರಮಂಗಲ ರಾಜಣ್ಣ, ಕೃಷ್ಣಪ್ಪ, ಅಶ್ವತ್ಥ , ಸುಜಾತಾ ಮತ್ತಿತರರು ಹಾಜರಿದ್ದರು.ಬಾಕ್ಸ್...............
2700 ಆಕ್ಷೇಪಣ ಅರ್ಜಿಗಳು ಸಲ್ಲಿಕೆ:ತಾಪಂ ಮಾಜಿ ಸದಸ್ಯ ಪ್ರಕಾಶ್ ಮಾತನಾಡಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊರಡಿಸಿರುವ 6 ಸಾವಿರ ನೋಟಿಫಿಕೇಷನ್ ನಲ್ಲಿ ಒಬ್ಬ ರೈತನ ಹೆಸರಿನಲ್ಲಿ 1ರಿಂದ 10 ಪಹಣಿಗಳಿವೆ. ಒಂದು ಪೋಡಿ, ಹಿಸ್ಸಾಗೂ ಒಂದೊಂದು ನೋಟಿಫಿಕೇಷನ್ ಮಾಡಿದ್ದಾರೆ. ರೈತರು ಆಕ್ಷೇಪಣೆ ಸಲ್ಲಿಸುವಾಗ 10 ಪಹಣಿಗೆ 10 ಅರ್ಜಿ ಸಲ್ಲಿಸದೆ 1 ಆಕ್ಷೇಪಣಾ ಪತ್ರ ಮಾತ್ರ ಕೊಟ್ಟಿದ್ದಾರೆ. ಹೀಗಾಗಿ ನೋಟಿಫಿಕೇಷನ್ ಸಂಖ್ಯೆ ಹೆಚ್ಚಾದರೆ, ಆಕ್ಷೇಪಣ ಪತ್ರಗಳ ಸಂಖ್ಯೆ ಕಡಿಮೆಯಾಯಿತು. ಒಟ್ಟಾರೆ 2700 ಆಕ್ಷೇಪಣ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಹೇಳಿದರು.
ಆರ್ಥಿಕವಾಗಿ ಸಬಲರಾಗಿರುವ ರೈತರಿಗೆ ಭೂ ಪರಿಹಾರ ಬೇಕಾಗಿಲ್ಲ. ಅವರೆಲ್ಲರು 20 - 30 ಎಕರೆ ಜಮೀನುದಾರರು ಆಗಿರುವುದರಿಂದ ಅಭಿವೃದ್ಧಿ ಹೊಂದಿದ ಭೂಮಿಯಲ್ಲಿ ಶೇಕಡ 50-50 ಅನುಪಾತದಂತೆ ಪಾಲು, ರಸ್ತೆ ಪಕ್ಕದಲ್ಲಿ ವಾಣಿಜ್ಯ ಕಟ್ಟಡಗಳು ಬೇಕಾಗಿವೆ. ಈ ರೈತ ನಾಯಕರೇ ಚಳವಳಿಯನ್ನು ಕುಂದಿಸಲು ಹೋರಾಟಗಾರರಿಗೆ ಆಮಿಷವೊಡ್ಡುತ್ತಿದ್ದಾರೆ ಎಂದು ಟೀಕಿಸಿದರು.ಈಗ ಚಳವಳಿಯಲ್ಲಿ ತೊಡಗಿರುವ ರೈತರು ಅರ್ಧ, ಮುಕ್ಕಾಲು ಎಕರೆ ಭೂಮಿ ಉಳ್ಳವರು. ಎಕರೆಗೆ ವರ್ಷಕ್ಕೆ 30 ಸಾವಿರ ಪರಿಹಾರ ಕೊಡುವುದಾಗಿ ಹೇಳಿದ್ದಾರೆ. ಈ ಹಣದಿಂದ ರೈತನ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಿಲ್ಲ. 50 ಎಕರೆ ಭೂ ಮಾಲೀಕರಾದ ಅವರೆಲ್ಲರು ಶಾಲೆಗಳು, ಬಾರ್ ಗಳನ್ನು ಹೊಂದಿದ್ದಾರೆ. ಪರಿಹಾರ ಹಣ ಇಲ್ಲದಿದ್ದರು ಅವರ ಜೀವನ ಸಾಗುತ್ತದೆ ಎಂದು ಪ್ರಕಾಶ್ ಹೇಳಿದರು.
ಕೋಟ್ .............ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 5 ಟೌನ್ ಶಿಪ್‌ಗಳನ್ನು ಘೋಷಿಸಿದ್ದರು. ಸದಾನಂದಗೌಡರು 4 ಟೌನ್ ಶಿಪ್‌ಗಳನ್ನು ರದ್ದು ಪಡಿಸಿದರು. ದೇವನಹಳ್ಳಿ ಭೂಮಿಯನ್ನು ಸಿದ್ದರಾಮಯ್ಯ ಡಿ ನೋಟಿ ಫೈ ಮಾಡಿದ್ದಾರೆ. ಹಾಗಾದರೆ ಅವರೆಲ್ಲರು ಜೈಲಿಗೆ ಏಕೆ ಹೋಗಲಿಲ್ಲ. ಬಿಡದಿ ಟೌನ್ ಶಿಪ್ ಯೋಜನೆ ಭೂಮಿ ಡಿ ನೋಟಿ ಫೈ ಮಾಡಿದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಲು ಸಾಧ್ಯ.
-ಪ್ರಕಾಶ್ , ಮಾಜಿ ಸದಸ್ಯರು, ತಾಪಂ, ರಾಮನಗರ(ಎರಡೂ ಫೋಟೊ ಬಳಸಿ)
7ಕೆಆರ್ ಎಂಎನ್ 1,2.ಜೆಪಿಜಿ1.ಹೊಸೂರು ಗ್ರಾಮದ ಮದ್ದೂರಮ್ಮ ದೇವಾಲಯದ ಆವರಣದಲ್ಲಿ ರೈತರು ತೆಂಗಿನ ಮರಕ್ಕೆ ಹಾಲು ತುಪ್ಪು ಎರೆದು ಪೂಜೆ ಸಲ್ಲಿಸುತ್ತಿರುವುದು.
2.ಹೊಸೂರು ಗ್ರಾಮದ ಮದ್ದೂರಮ್ಮ ದೇವಾಲಯದ ಆವರಣದಲ್ಲಿ ಟಿ.ಯಶವಂತ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.