ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಸಹಕಾರಿ ಬ್ಯಾಂಕ್‌ಗಳಿಂದ ದೇಶದ ಬಡತನ ನಿರ್ಮೂಲನೆ ಮಾಡಬಹುದು. ಸಹಕಾರ ಸಂಘಗಳು ದೇಶದ ಆರ್ಥಿಕತೆ ಬಲಪಡಿಸಿ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ ಎಂದು ಜಿಲ್ಲಾ ಸಹಕಾರ ಯೂನಿಯನ್ ನಿಗಮದ ಅಧ್ಯಕ್ಷ ಬಿ.ಜಿ. ವೆಂಕಟೇಗೌಡ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಇವರ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.45 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳು ನಮ್ಮ ದೇಶದಲ್ಲಿವೆ. ಗ್ರಾಮೀಣ ಭಾಗದ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸುತ್ತಿವೆ. ಜಮೀನು ಇಲ್ಲದವರಿಗೆ ಹಸು ಸಾಕಾಣಿಕೆ, ಹಾಲು ಉತ್ಪನ್ನಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಣಿಜ್ಯ ನಿಕಾಯದ ಡೀನ್ ಪ್ರೊ. ಪಿ. ಪರಮಶಿವಯ್ಯ, ದೇಶದ 60 ಕೋಟಿಯಷ್ಟು ಮಂದಿ ನೇರ ಮತ್ತು ಪರೋಕ್ಷವಾಗಿ ಸಹಕಾರ ಸಂಘಗಳಿಂದ ಲಾಭ ಪಡೆಯುತ್ತಿದ್ದಾರೆ.ಇದರಿಂದ ಮಹಿಳಾ ಸಬಲೀಕರಣ, ಸ್ವಯಂಉದ್ಯೋಗ, ಗ್ರಾಮೀಣಾಭಿವೃದ್ಧಿ ಸಾಧ್ಯವಾಗಿದೆ ಎಂದರು.ಜಿಲ್ಲಾ ಸಹಕಾರ ಯೂನಿಯನ್ ನಿಗಮದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಹಿರೇಮಠ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ 2024 ಸಹಕಾರ ಸಂಘಗಳಿವೆ. ಅದರಲ್ಲಿ 1324 ಹಾಲು ಉತ್ಪಾದಕರ ಸಂಘಗಳು, 236 ಕೃಷಿ ಪತ್ತಿನ ಸಹಕಾರ ಸಂಘಗಳು, 11 ಪಟ್ಟಣ ಪತ್ತಿನ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಒಟ್ಟು 21 ಜಿಲ್ಲಾಕೇಂದ್ರ ಬ್ಯಾಂಕ್‌ಗಳು ಗ್ರಾಮೀಣ ಭಾಗದ ರೈತರಿಗೆ ಆರ್ಥಿಕ ಸಹಾಯ ಮಾಡುತ್ತಿವೆ ಎಂದು ತಿಳಿಸಿದರು.ವಿಭಾಗ ಮಟ್ಟದ ಚರ್ಚಾ ವಿಷಯವಾಗಿ ಸ್ನಾತಕ ವಿದ್ಯಾರ್ಥಿಗಳಿಗೆ ‘ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಬಲೀಕರಣ, ಬಡತನ ನಿವಾರಣೆ, ಉದ್ಯೋಗ ಸೃಷ್ಟಿ ಸಹಕಾರ ಚಳುವಳಿಯಿಂದ ಮಾತ್ರ ಸಾಧ್ಯ’, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ‘ರಾಷ್ಟ್ರದಲ್ಲಿ ಖಾಸಗೀಕರಣಕ್ಕಿಂತ ಸಹಕಾರೀಕರಣ ಮಾಡುವುದರಿಂದ ಅರ್ಥ ವ್ಯವಸ್ಥೆ ಬಲಗೊಳ್ಳಬಲ್ಲದು’ ವಿಷಯದ ಕುರಿತು ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪರ-ವಿರೋಧದ ಚರ್ಚೆ ಮಂಡಿಸಿದರು. ಸ್ನಾತಕ ವಿಭಾಗದಲ್ಲಿ ಕಲ್ಪತರು ಪ್ರಥಮ ದರ್ಜೆ ಕಾಲೇಜಿನ ಸಹ್ಯಾದ್ರಿ ಜಂಗಮ್ ಪ್ರಥಮ ಸ್ಥಾನ, ಶೇಷಾದ್ರಿಪುರಂ ಕಾಲೇಜಿನ ಋಷಿಕಾ ಎ. ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಗೆ ಆಯ್ಕೆಯಾದರು.ಸಿದ್ಧಗಂಗಾ ಕಾಲೇಜಿನ ಗೀತಾ ಎಂ.ತೃತೀಯ ಸ್ಥಾನಕ್ಕೆ ಭಾಜನರಾದರು.ಸ್ನಾತಕೋತ್ತರ ವಿಭಾಗದಲ್ಲಿ ವಿವಿಯ ಪತ್ರಿಕೋದ್ಯಮಮತ್ತು ಸಮೂಹ ಸಂವಹನ ವಿಭಾಗದಎಸ್. ಕೆ.ಸುಪ್ರೀತ ಪ್ರಥಮ ಸ್ಥಾನ, ರಾಜ್ಯಶಾಸ್ತ್ರ ವಿಭಾಗದ ಚೈತ್ರ ಎಂ.ಎಸ್. ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಗೆ ಆಯ್ಕೆಯಾದರು.ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಶರಣಪ್ಪತೃತೀಯ ಸ್ಥಾನಕ್ಕೆ ಭಾಜನರಾದರು.ವಿವಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ.ಜಿ. ಬಸವರಾಜ, ವಾಣಿಜ್ಯ ನಿಕಾಯದಡೀನ್ ಪ್ರೊ. ಪಿ. ಪರಮಶಿವಯ್ಯ, ಸಹ ಪ್ರಾಧ್ಯಾಪಕರಾದ ಡಾ.ಕಿರಣ್‌ಎಸ್. ಎನ್.,ಡಾ. ಅಶ್ವಿನಿ ಬಿ.ಜಾನೆ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸಿಂಡಿಕೇಡ್ ಸದಸ್ಯ ಎಂ.ಜೆ. ಶಿವಣ್ಣ ಉಪಸ್ಥಿತರಿದ್ದರು.