ಸಾಧಿಸಬೇಕೆಂಬ ಛಲ ದೃಢವಾಗಿದ್ದರೆ ಬಡತನ ಅಡ್ಡಿಯಾಗುವುದಿಲ್ಲ

| Published : Mar 05 2025, 12:33 AM IST

ಸಾರಾಂಶ

ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ನಗರದ ಎಸ್.ಜೆ.ಪಿ. ರಸ್ತೆಯಲ್ಲಿರುವ ವಿಗ್ಯಾನ್ ಗ್ಲೋಬಲ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯಿತು. ಮಕ್ಕಳಿಗೆ ಪಾಠ ವಿಷಯ ಜ್ಞಾನದ ಜೊತೆಗೆ ದೈಹಿಕ ಚಟುವಟಿಕೆಗಳು ಅತ್ಯಗತ್ಯವಾಗಿದ್ದು, ಮಕ್ಕಳು ನಿಯಮಿತವಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು. ಕಾರ್ಯಕ್ರಮದ ಕೊನೆಯಲ್ಲಿ ಉತ್ತಮ ವಿಜ್ಞಾನದ ಮಾದರಿಗಳಿಗೆ ಬಹುಮಾನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ನಗರದ ಎಸ್.ಜೆ.ಪಿ. ರಸ್ತೆಯಲ್ಲಿರುವ ವಿಗ್ಯಾನ್ ಗ್ಲೋಬಲ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯಿತು.

ಇದೇ ವೇಳೆ ಶಾಲಾ ಪ್ರಾಂಶುಪಾಲರಾದ ಗೋಪಾಲವರು ಮಾಧ್ಯಮದೊಂದಿಗೆ ಮಾತನಾಡಿ, ಈ ಬಾರಿ ನಮ್ಮ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮಕ್ಕಳು ಅತ್ಯುತ್ತಮ ಮಾದರಿಗಳನ್ನು ತಯಾರಿಸುವುದರ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಇನ್ನು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದೆಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಂ.ಸಿ.ಎಫ್. ನ ವಿಜ್ಞಾನಿ ರಾಕೇಶ್ ಚೌದ್ರಿಯವರು (ಜಿಯೋ ಸ್ಟೇಷನರಿ ಸ್ಯಾಟಲೈಟ್ ಕಾರ್ಯನಿರ್ವಾಹಣಾಧಿಕಾರಿ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳು ತಯಾರಿಸಿದ್ದಂತಹ ವಿವಿಧ ವಿಜ್ಞಾನದ ಮಾದರಿಗಳನ್ನು ವೀಕ್ಷಿಸಿದ ನಂತರ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳಿಗೆ ಪಾಠ ವಿಷಯ ಜ್ಞಾನದ ಜೊತೆಗೆ ದೈಹಿಕ ಚಟುವಟಿಕೆಗಳು ಅತ್ಯಗತ್ಯವಾಗಿದ್ದು, ಮಕ್ಕಳು ನಿಯಮಿತವಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.. ಅಲ್ಲದೆ ಭವಿಷ್ಯದಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಉತ್ತಮ ಕೊಡುಗೆಗಳನ್ನು ನೀಡುವುದರ ಮೂಲಕ ಒಳ್ಳೆಯ ವಿಜ್ಞಾನಿಗಳಾಗುವಂತೆ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದಂತಹ ಆಡಳಿತ ಮಂಡಳಿಯ ಅಧ್ಯಕ್ಷರಾದಂತಹ ಗೌಡೇಗೌಡರವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಜೀವನದಲ್ಲಿ ಸಾಧಿಸಬೇಕೆಂಬ ಛಲ ದೃಢವಾಗಿದ್ದರೆ ಬಡತನ ಅದಕ್ಕೆ ಅಡ್ಡಿಯಾಗುವುದಿಲ್ಲವೆಂದು ಎಂದರು.

ಮುಖ್ಯ ಅತಿಥಿಗಳಾಗಿ ಶಾರದ ಗೋಪಾಲ್, ಶಾಲಾ ಆಡಳಿತಾಧಿಕಾರಿ ಸುಹಾಸ್ ಗೋಪಾಲ್‌ರವರು ಹಾಜರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಉತ್ತಮ ವಿಜ್ಞಾನದ ಮಾದರಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಮಯದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಸುಧಾ ಎಚ್.ಎಸ್. ಬೋಧಕ ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.