ದೀಪಾರಾಧನೆಯಿಂದ ದಾರಿದ್ರ್ಯ ದೂರ: ನಿಶ್ಚಿತಾ

| Published : Nov 14 2025, 02:00 AM IST

ದೀಪಾರಾಧನೆಯಿಂದ ದಾರಿದ್ರ್ಯ ದೂರ: ನಿಶ್ಚಿತಾ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರುದೀಪಾರಾಧನೆಯಿಂದ ಬೆಳಕಿನಡೆಗೆ ಸಾಗುತ್ತಾ ದಾರಿದ್ರ್ಯವನ್ನು ದೂರ ಮಾಡಬಹುದೆಂದು ಯೂನಿಯನ್‌ ಬ್ಯಾಂಕ್ ಆಫ್ ಇಂಡಿಯ ಕಲ್ಯಾಣನಗರ ಶಾಖೆ ಅಧಿಕಾರಿ ನಿಶ್ಚಿತಾ ಚೇತನ್ ಹೇಳಿದರು.

- ಶ್ರೀಪಾರ್ವತಿ ಮಂಡಳಿ ’ಕಾರ್ತೀಕ ಸಂಭ್ರಮ’

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೀಪಾರಾಧನೆಯಿಂದ ಬೆಳಕಿನಡೆಗೆ ಸಾಗುತ್ತಾ ದಾರಿದ್ರ್ಯವನ್ನು ದೂರ ಮಾಡಬಹುದೆಂದು ಯೂನಿಯನ್‌ ಬ್ಯಾಂಕ್ ಆಫ್ ಇಂಡಿಯ ಕಲ್ಯಾಣನಗರ ಶಾಖೆ ಅಧಿಕಾರಿ ನಿಶ್ಚಿತಾ ಚೇತನ್ ಹೇಳಿದರು. ಶ್ರೀ ಪಾರ್ವತಿ ಮಹಿಳಾ ಮಂಡಳಿಯಿಂದ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಬುಧವಾರ ನಡೆದ ’ಕಾರ್ತೀಕ ಸಂಭ್ರಮ’ ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ನಮ್ಮ ಪೂರ್ವಿಕರು ವೈಜ್ಞಾನಿಕವಾಗಿ ಆಲೋಚಿಸಿ ಹಬ್ಬ ಹರಿದಿನಗಳನ್ನು ಕಾಲ ಕಾಲಕ್ಕೆ ಆಚರಿಸಿಕೊಂಡು ಬಂದಿದ್ದಾರೆ. ಕಾರ್ತೀಕ ಮಾಸದಲ್ಲಿ ದೀಪಾರಾಧನೆ ಪ್ರಮುಖವಾಗಿರುತ್ತದೆ. ದೀಪ ಕತ್ತಲೆಯನ್ನು ದೂರ ಮಾಡಿ ಬೆಳಕನ್ನು ನೀಡುತ್ತದೆ. ನಮ್ಮ ಕಷ್ಟಕಾರ್ಪಣ್ಯ, ದಾರಿದ್ರ್ಯ ದೂರ ಮಾಡಿ ಸಮೃದ್ಧಿಯ ಕಡೆಗೆ ಕರೆದೊಯ್ಯುತ್ತದೆ. ಬೆಳಕು ಪ್ರಗತಿ, ಅಭಿವೃದ್ಧಿ ಕಲ್ಯಾಣದ ಸಂಕೇತ ಎಂದರು.

ಕಾರ್ತೀಕ ಮಾಸಕ್ಕಿಂತ ಶ್ರೇಷ್ಠ ಮಾಸವಿಲ್ಲ. ಯುಗಗಳಲ್ಲಿ ಕೃತಯುಗ ಶ್ರೇಷ್ಠ. ವೇದಗಳಿಗಿಂತ ಶಾಸ್ತ್ರ ಪುರಾಣಗಳಿಲ್ಲ. ಗಂಗಾ ನದಿಗಿಂತ ಶ್ರೇಷ್ಠ ತೀರ್ಥವಿಲ್ಲ ಎಂದು ಸ್ಕಂದ ಪುರಾಣ ಹೇಳಿದೆ. ಶಿವ ಮತ್ತು ವಿಷ್ಣು ಇಬ್ಬರಿಗೂ ಕಾರ್ತೀಕ ಮಾಸ ಪ್ರಿಯ. ಜನರಿಗಷ್ಟೇ ಅಲ್ಲ ದೇವಾನುದೇವತೆಗಳಿಗೂ ಕಂಟಕರಾದ ರಾಕ್ಷಸರ ಸಂಹರಿಸಿದ ಮಾಸವೆಂಬ ಪ್ರತೀತಿ ಇದೆ ಎಂದರು.ಕಾರ್ತೀಕ ಮಾಸದಲ್ಲಿ ದೀಪಾರಾಧನೆ ಜೊತೆಗೆ ಪವಿತ್ರ ಸ್ನಾನ, ಪೂಜೆ, ವ್ರತ, ಉಪವಾಸಗಳಂತಹ ಅನೇಕ ಆಚರಣ ಗಳಿವೆ. ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಉಪವಾಸ ವ್ರತ ಆಚರಿಸುತ್ತಾರೆ. ಕಲ್ಯಾಣದ ಶಕ್ತಿಯುತ ಸಂದೇಶ ಇಲ್ಲಿದೆ. ಶ್ರದ್ಧಾಭಕ್ತಿ ಆಚರಣೆಗಳಿಂದ ಕುಟುಂಬ, ಸಮಾಜದ ಸುಭೀಕ್ಷೆ ಸಾಧ್ಯವೆಂಬ ನಂಬಿಕೆ ಇದೆ. ಮನೆಗಳಲ್ಲಿ ಎಲ್ಲ ಆಚರಣೆ ನಡೆಸಿಕೊಂಡು ಬರುವವರು ಹೆಣ್ಣು ಮಕ್ಕಳಾದ್ದರಿಂದ ಹೆಣ್ಣು ಸಂಸಾರದ ಕಣ್ಣು ಎಂಬ ಮಾತಿದೆ ಎಂದರು. ಆಚರಣೆಗಳ ಅರ್ಥ ಅರಿತು ಮುನ್ನಡೆಯುವುದರಲ್ಲಿ ನಿಜವಾದ ಸಾರ್ಥಕತೆ ಇದೆ. ಪಾರ್ವತಿ ಮಹಿಳಾಮಂಡಳಿ ಆ ನಿಟ್ಟಿನಲ್ಲಿ ಮುಂದಡಿ ಇಟ್ಟು ಧಾರ್ಮಿಕ ಹಬ್ಬಗಳ ಚಿಂತನ ಕಾರ್‍ಯಕ್ರಮ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದ ನಿಶ್ಚಿತಾ, ವಿದ್ಯೆಗೆ ಅಪಾರವಾದ ಶಕ್ತಿ ಇದೆ. ಹೆಣ್ಣು ಮಕ್ಕಳನ್ನು ವಿದ್ಯಾವಂತರನ್ನಾಗಿಸಿದರೆ ಸಬಲೀಕರಣ ಸಾಧ್ಯ. ಕರ್ತೃತ್ವ, ನೇತೃತ್ವ ಮತ್ತು ಮಾತೃತ್ವ ಮೂರು ಪ್ರಮುಖ ಲಕ್ಷಣಗಳನ್ನು ಸ್ವಾಮಿ ವಿವೇಕಾನಂದರು ಸ್ತ್ರೀಯರಲ್ಲಿ ಇರಬೇಕೆಂದು ಹೇಳಿರುವುದನ್ನು ಉಲ್ಲೇಖಿಸಿದರು.ಸಮಾರಂಭ ಉದ್ಘಾಟಿಸಿದ ಸುಮಾ ಬಸವರಾಜು ಮಾತನಾಡಿ, ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನಡೆಗೆ ಕರೆದೊಯ್ಯುವುದೇ ಈ ಕಾರ್ತೀಕ ಮಾಸದ ವಿಶೇಷತೆ ಎಂದರು.

ಶ್ರೀ ಪಾರ್ವತಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಮಿತ್ರಾ ಶಾಸ್ತ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೀಪ ತ್ಯಾಗದ ಸಂಕೇತ. ಹಣತೆ ಎಂದೂ ಮಾತನಾಡುವುದಿಲ್ಲ ಬೆಳಕಿನ ಮೂಲಕ ತನ್ನ ಪರಿಚಯಿಸುತ್ತದೆ. ಮನೆಯ ಮುಂದೆ ಸಂಜೆ ದೀಪ ಹಚ್ಚುವ ವೈಜ್ಞಾನಿಕ ಕಾರಣ ಕ್ರಿಮಿ ಕೀಟಗಳ ಹಾವಳಿ ನಿಯಂತ್ರಿಸಲು ದವಸ ಧಾನ್ಯಗಳನ್ನು ಸಂರಕ್ಷಿಸುವುದು ಆಗಿರುತ್ತದೆ ಎಂದು ಹೇಳಿದರು.

ಕಾರ್‍ಯದರ್ಶಿ ಭವಾನಿ ವಿಜಯಾನಂದ, ಉಪಾಧ್ಯಕ್ಷೆ ಮಂಜುಳಾ ಮಹೇಶ್ ಮತ್ತು ಖಜಾಂಚಿ ಸೌಭಾಗ್ಯ ಜಯಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಮೂಹಿಕ ರೇಣುಕಾ ಗೀತೆಗಳನ್ನು ಶೈಲಾ ಬಸವರಾಜು ನೇತೃತ್ವದಲ್ಲಿ ಹಾಡಲಾಯಿತು. ಉಪಾಧ್ಯಕ್ಷೆ ಶೈಲಾ ಪ್ರಾಸ್ತಾವಿಸಿದ್ದು, ಸಹ ಕಾರ್‍ಯದರ್ಶಿ ಪಾರ್ವತಿ ಬಸವರಾಜು ಕಾರ್‍ಯಕ್ರಮ ನಿರೂಪಿಸಿದರು. ಸದಸ್ಯರಾದ ಶಿಲ್ಪಾ ರಘು ಸ್ವಾಗತಿಸಿ, ಗೀತಾಬಾಲಿ ವಂದಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಆಟೋಟ ಸ್ಪರ್ಧಾಗಳನ್ನು ನಡೆಸಿದ್ದು ವಿಜೇತರಿಗೆ ಆಯೋಜಕರಾದ ಸುಮಾ ಮತ್ತು ರೂಪಾ ಬಹುಮಾನ ವಿತರಿಸಿದರು.ಪೋಟೋ ಫೈಲ್‌ ನೇಮ್‌ 12 ಕೆಸಿಕೆಎಂ 2ಚಿಕ್ಕಮಗಳೂರಿನ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಬುಧವಾರ ನಡೆದ ’ಕಾರ್ತೀಕ ಸಂಭ್ರಮ’ ಕಾರ್‍ಯಕ್ರಮವನ್ನು ಸುಮಾ ಬಸವರಾಜು ಅವರು ಉದ್ಘಾಟಿಸಿದರು.

-----------------------------