ವಿದ್ಯುತ್‌ ಇಲಾಖೆ ರಾಷ್ಟ್ರ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು: ಶಾಸಕ ಆರ್.ವಿ. ದೇಶಪಾಂಡೆ

| Published : Feb 02 2025, 11:49 PM IST

ವಿದ್ಯುತ್‌ ಇಲಾಖೆ ರಾಷ್ಟ್ರ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು: ಶಾಸಕ ಆರ್.ವಿ. ದೇಶಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯುತ್‌ ವಿತರಣೆಯಲ್ಲಿ ಯಾವುದೇ ಅಡಚಣೆಯಾಗದ ರೀತಿಯಲ್ಲಿ ಲೈನ್‌ಮೆನ್ ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ಜನರ ವಿದ್ಯುತ್‌ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದರಿಂದ ಈ ಹಿಂದೆ ಇಲಾಖೆಯ ಕುರಿತು ಕೇಳಿಬರುತ್ತಿದ್ದ ಆಪಾದನೆಗಳು ಈಗ ಇಲ್ಲ.

ದಾಂಡೇಲಿ: ನಗರದ ಚೆನ್ನಮ್ಮ ವೃತ್ತದ ಹತ್ತಿರ ಹೆಸ್ಕಾಂ ಆವರಣದಲ್ಲಿ ಇಂಧನ ಇಲಾಖೆ ಮತ್ತು ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ಸಹಯೋಗದಲ್ಲಿ ಸುಮಾರು ₹೭.೫೦ ಕೋಟಿಗಳಲ್ಲಿ ನಿರ್ಮಾಣಗೊಂಡಿರುವ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಯ ಸುಸಜ್ಜಿತ ಕಟ್ಟಡ ಉದ್ಘಾಟನೆಗೊಂಡಿತು.

ರಾಜ್ಯ ಆಡಳಿತ ಸುಧಾರಣಾ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯುತ್‌ ಇಲಾಖೆ ರಾಷ್ಟ್ರ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ವಿದ್ಯುತ್‌ ಅವಶ್ಯಕತೆ ಹೆಚ್ಚಾಗಿದೆ. ನಮ್ಮ ಜಿಲ್ಲೆ ವಿದ್ಯುತ್‌ಶಕ್ತಿ ನಿರ್ಮಾಣ ಮಾಡುವ ಭಾಗ, ಕಾಳಿ ನದಿಯಿಂದ ಅತಿ ಕಡಿಮೆ ಬೆಲೆಗೆ ವಿದ್ಯುತ್‌ನ್ನು ನಾವು ಉತ್ಪಾದಿಸಿ ಕೊಡುತ್ತಿದ್ದೇವೆ ಎಂದರು.

ವಿದ್ಯುತ್‌ ವಿತರಣೆಯಲ್ಲಿ ಯಾವುದೇ ಅಡಚಣೆಯಾಗದ ರೀತಿಯಲ್ಲಿ ಲೈನ್‌ಮೆನ್ ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ಜನರ ವಿದ್ಯುತ್‌ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದರಿಂದ ಈ ಹಿಂದೆ ಇಲಾಖೆಯ ಕುರಿತು ಕೇಳಿಬರುತ್ತಿದ್ದ ಆಪಾದನೆಗಳು ಈಗ ಇಲ್ಲ ಎಂದರು.

ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ಅಧ್ಯಕ್ಷ ಸೈಯದ್‌ ಅಜೀಂಪೀರ್‌ ಖಾದ್ರಿ, ಉದ್ಘಾಟಿಸಿದರು. ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್., ವ್ಯವಸ್ಥಾಪಕ ನಿರ್ದೇಶಕ (ತಾಂತ್ರಿಕ) ಎಸ್. ಜಗದೀಶ, ಹಣಕಾಸು ವಿಭಾಗದ ಪ್ರಕಾಶ ಪಾಟೀಲ, ಮುಖ್ಯ ಎಂಜಿನಿಯರ್‌ (ವಿ) ನಾಗಪ್ಪ ಬೆಳಕೇರಿ ಮಾತನಾಡಿದರು.

ದಾಂಡೇಲಿ ನಗರಸಭಾ ಅಧ್ಯಕ್ಷ ಅಷ್ಪಾಕ್‌ ಶೇಖ, ಉಪಾಧ್ಯಕ್ಷೆ ಶಿಲ್ಪಾ ಕೊಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ಜಾಧವ, ದಾಂಡೇಲಿ ತಹಸೀಲ್ದಾರ್‌ ಶೈಲೇಶ ಪರಮಾನಂದ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಟಿ.ಸಿ. ಹಾದಿಮನಿ, ಡಿವೈಎಸ್‌ಪಿ ಶಿವಾನಂದ ಮದರಖಂಡಿ, ದಾಂಡೇಲಿ ಕಾಂಗ್ರೆಸ್ ಬ್ಲಾಕ್‌ ಅಧ್ಯಕ್ಷ ಮೋಹನ ಹಲವಾಯಿ, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ರೋಟರಿ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಪುರುಷೋತ್ತಮ ಮಲ್ಯ ಸ್ವಾಗತಿಸಿದರು. ಕುಮಾರ ಕರಗಯ್ಯ ವಂದಿಸಿದರು. ರವೀಂದ್ರ ಮೆಟಗುಡ್ ಕಾರ್ಯಕ್ರಮ ನಿರೂಪಿಸಿದರು.ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ

ಮುಂಡಗೋಡ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ತಗುಲಿ ₹೫ ಲಕ್ಷ ನಗದು, ಬಂಗಾರದ ಆಭರಣ ಸೇರಿದಂತೆ ಪ್ರಮುಖ ದಾಖಲೆಸಹಿತ ಅಗತ್ಯ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಹುನಗುಂದ ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.ಹುನಗುಂದ ಗ್ರಾಮದ ಜಯತುನಬಿ ಬಾಬುಸಾಬ ಗಾಡಿವಾಲೆ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ರಾತ್ರಿ ಇದ್ದಕ್ಕಿದ್ದಂತೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಏಕಾಏಕಿ ಬೆಂಕಿ ತಗುಲಿ ನೋಡ ನೋಡುತ್ತಲೇ ಸಂಪೂರ್ಣ ಮನೆಗೆ ಆವರಿಸಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಮುಂಡಗೋಡ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಆಗಬಹುದಾದ ಮತ್ತಷ್ಟು ಅನಾಹುತವನ್ನು ತಪ್ಪಿಸಿದ್ದಾರೆ. ಅಷ್ಟರಲ್ಲಿ ಭಾಗಶಃ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮನೆಯಲ್ಲಿದ್ದ ಸುಮಾರು ₹೫ ಲಕ್ಷ ನಗದು, ನಾಲ್ಕು ತೊಲೆ ಬಂಗಾರದ ಆಭರಣಗಳು, ಪ್ರಮುಖ ದಾಖಲಾತಿಗಳು, ಎರಡು ಸಾಗವಾನಿ ಪಲ್ಲಂಗ, ಟಿವಿ, ಫ್ರಿಡ್ಜ್, ಬಟ್ಟೆ, ದವಸ- ಧಾನ್ಯಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಸುಮಾರು ₹೧೦ ಲಕ್ಷಕ್ಕೂ ಅಧಿಕ ಹಾನಿಯಾಗಿದೆ.ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಪ್ಪ ಪೂಜಾರ, ಅಮರ ಕಾಂಬಳೆ, ಬಸವರಾಜ ನಾನಾಪುರ್, ಅರುಣ್ ಕುಮಾರ್ ಮುಲಗೆ, ಚಂದ್ರಪ್ಪ ಲಮಾಣಿ, ಸೋಮಶೇಖರ್ ಜೀವಣ್ಣವರ್ ಹಾಗೂ ವಿಜಯ ಅಮ್ಮನಿಗಿ ಅಗ್ನಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.