ಸಾರಾಂಶ
ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ಅಳವಡಿಕೆಯ ಕಾರ್ಯ ಪ್ರಗತಿಯಲ್ಲಿದೆ ಎಂದು ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಶಿವಮೂರ್ತಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ಅಳವಡಿಕೆಯ ಕಾರ್ಯ ಪ್ರಗತಿಯಲ್ಲಿದೆ ಎಂದು ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಶಿವಮೂರ್ತಿ ತಿಳಿಸಿದ್ದಾರೆ.ಹಿಪ್ಪರಗಿ ಬ್ಯಾರೇಜ್‌ನ ನೀರು ಸಂಗ್ರಹಣಾ ಸಾಮರ್ಥ್ಯ 6 ಟಿಎಂಸಿ ಇದೆ. ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಗ್ರಾಮಗಳ ಜಮೀನುಗಳಿಗೆ ನೀರು ಒದಗಿಸಲು ಹಾಗೂ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಬ್ಯಾರೇಜ್ ನಿರ್ಮಿಸಲಾಗಿದೆ. ಒಟ್ಟು 22 ಗೇಟ್‌ಗಳಿದ್ದು ಹೈಡ್ರೋಲಿಕ್ ವ್ಯವಸ್ಥೆ ಇದೆ. 22 ಗೇಟ್‌ಗಳ ಪೈಕಿ 7ನೇ ನಂಬರಿನ ಗೇಟ್ ಅಳವಡಿಕೆಯಲ್ಲಿ ತೊಂದರೆ ಕಾಣಿಸಿಕೊಂಡಿದೆ. ಆಲಮಟ್ಟಿ ಹಾಗೂ ನಾರಾಯಣಪುರದಿಂದ ಪರಿಣಿತರ ತಂಡ ಹಿಪ್ಪರಗಿಗೆ ಆಗಮಿಸಿದ್ದು ಒಂದು ಸ್ಟಾಪ್‌ಲಾಗ್ ಅನ್ನು ಕೆಳಗಿಳಿಸಲಾಗಿದೆ. ಇನ್ನೂ 5 ಸ್ಟಾಪ್‌ಲಾಗ್‌ಗಳನ್ನು ಇಳಿಸಬೇಕಿದೆ. ಆದರೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ವಾಗಿದ್ದರಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಅವರು ತಿಳಿಸಿದರು.ಡಿಸೆಂಬರ್‌ವರೆಗೆ ಜಲಾಶಯಕ್ಕೆ ನೀರಿನ ಒಳ ಹರಿವು ಇರುತ್ತದೆ. ಹೀಗಾಗಿ ನೀರು ಸಂಗ್ರಹಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಸದ್ಯ ನೀರನ್ನು ಹರಿಬಿಡಲೇ ಬೇಕಾಗಿದೆ. ಇಲ್ಲವಾದರೆ ಗೇಟ್ ಅಳವಡಿಸುವುದು ಸಾಧ್ಯವಾಗುವುದಿಲ್ಲ, ಒಳ ಹರಿವಿನ ಪ್ರಮಾಣದಷ್ಟು ನೀರನ್ನು ಹರಿಬಿಡಲಾಗುತ್ತಿದೆ ಆದ್ದರಿಂದ ಊಹಾ ಪೋಹಗಳಿಗೆ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಎಇಇ ಶಿವಮೂರ್ತಿ ಹೇಳಿದರು.ಏಳನೇ ನಂಬರಿನ ಗೇಟ್ ಪೂರ್ಣಪ್ರಮಾಣದಲ್ಲಿ ಲಾಕ್ ಆಗದೇ 3 ಅಡಿಗಳಷ್ಟು ಅಂತರದಲ್ಲಿ ನಿಂತಿರುವುದರಿಂದ ಅಧಿಕಾರಿಗಳು ಮತ್ತು ಪರಿಣಿತರ ತಂಡ ಸ್ಟಾಪ್‌ಲಾಗ್‌ಗಳನ್ನು ಅಳವಡಿಸುವ ಕಾರ್ಯ ನಡೆಸುತ್ತಿದ್ದಾರೆ, ತುಂಗಭದ್ರಾ ಡ್ಯಾಮ್‌ಗೂ ಹಿಪ್ಪರಗಿ ಬ್ಯಾರೇಜ್‌ಗೂ ಸಂಬಂಧ ಕಲ್ಪಿಸುವುದು ಬೇಡ ಎಂದಿರುವ ಅವರು, ಡಿಸೆಂಬರ್‌ವರೆಗೆ ನೀರು ಹರಿದು ಬರುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.