ಸಾರಾಂಶ
-ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಕರೆ -ಜೆಡಿಎಸ್ ಪದಾಧಿಕಾರಿಗಳು ಮತ್ತು ಪ್ರಮುಖ ಮುಖಂಡರ ಸಭೆಕನ್ನಡಪ್ರಭ ವಾರ್ತೆ ರಾಮನಗರ
ಹಗರಣಗಳಲ್ಲಿ ಮುಳುಗಿರುವ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಜನ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ದ ಜೆಡಿಎಸ್ - ಬಿಜೆಪಿ ಜಂಟಿಯಾಗಿ ನಡೆಸುತ್ತಿರುವ ಹೋರಾಟವನ್ನು ಯಶಸ್ವಿಗೊಳಿಸಲು ಪಕ್ಷದ ಕಾರ್ಯಕರ್ತರು ಹೆಚ್ಚಿನ ಶ್ರಮ ವಹಿಸಬೇಕು ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕರೆನೀಡಿದರು.ನಗರದಲ್ಲಿ ಜೆಡಿಎಸ್ ಪದಾಧಿಕಾರಿಗಳು ಮತ್ತು ಪ್ರಮುಖ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಗರಣಗಳಲ್ಲೇ ಮುಳುಗಿ ಹೋಗಿದೆ. ಮೂಡಾ, ವಾಲ್ಮಿಕಿ ನಿಗಮ ಹಗರಣ, ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟಿದ್ದ ಹಣವನ್ನು ಬೇರೆ ಯೋಜನೆಗೆ ಬಳಕೆ ಮಾಡಿಕೊಂಡಿರುವ ಹಗರಣ ಹೀಗೆ ಹತ್ತು ಹಲವು ಹಗರಣಗಳಲ್ಲಿ ಮುಳುಗಿದೆ. ವಾಲ್ಮಿಕಿ ನಿಗಮದಲ್ಲಿ ದುರ್ಬಳಕೆಯಾಗಿರುವುದು 189 ಕೋಟಿ ರು. ಅಲ್ಲ 89 ಕೋಟಿ ರು. ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಹೀಗಾಗಿ ಇಂತಹ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ತಿಳಿಸಿದರು.
ರಾಜ್ಯದ ರೈತರಿಗೆ ನೀಡಬೇಕಿದ್ದ 1200 ಕೋಟಿ ರು. ಹಾಲಿನ ಪ್ರೋತ್ಸಾಹ ಧನವನ್ನು ಇನ್ನೂ ನೀಡಿಲ್ಲ. ಹಿಂದಿನ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಪಡೆದಿದೆ ಎಂದು ಹೇಳಿಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಅಲ್ಪದಿನದಲ್ಲೇ ಹತ್ತಾರು ಹಗರಣಗಳಲ್ಲಿ ಮುಳುಗಿದೆ. ಇಂತಹ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಮೈತ್ರಿ ಪಕ್ಷದ ನಾಯಕರು ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕೆ ಪ್ರತಿಯೊಬ್ಬ ಕಾರ್ಯಕರ್ತನೂ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಹೋರಾಟಕ್ಕೆ ಹೆಚ್ಚಿನ ಶಕ್ತಿ ತುಂಬಿ :
ಸದ್ಯದಲ್ಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ರಾಜ್ಯ ಬಿಜೆಪಿ ನಾಯಕರು ಸಭೆ ನಡೆಸಿ ಹೋರಾಟವನ್ನು ರೂಪಿಸಲಾಗುವುದು. ಮೈಸೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಈ ಪಾದಯಾತ್ರೆಯ ರೂಪುರೇಷೆಯನ್ನು ಸದ್ಯದಲ್ಲೇ ರೂಪಿಸಲಾಗುವುದು. ಈ ಹೋರಾಟಕ್ಕೆ ಜಿಲ್ಲೆಯ ನಾಲ್ಕು ತಾಲೂಕಿನಿಂದ ನಮ್ಮ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ರಾಮನಗರ ಜಿಲ್ಲೆಯಿಂದ ಹೆಚ್ಚು ಬೆಂಬಲ ಸಿಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.ಹಳೇ ಮೈಸೂರು ಭಾಗದಲ್ಲಿ ಮೈತ್ರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ ನಮ್ಮ ಪಕ್ಷ ಸಂಘಟನೆಗೆ ಉತ್ತಮ ಅವಕಾಶ ಸಿಕ್ಕಿದೆ. ಕಾರ್ಯಕರ್ತರಲ್ಲಿ ಸಹ ಹೊಸ ಹುರುಪು ಮೂಡಿದೆ. ಕೋರ್ಕಮಿಟಿಯಲ್ಲಿ ಸಹ ಈ ಬಗ್ಗೆ ಚರ್ಚೆ ನಡೆಸಿದ್ದು, ಮಾಜಿ ಪ್ರಧಾನಿ ದೇವೇಗೌಡರು ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಗ್ರಾಪಂ ಮಟ್ಟದಿಂದ ಪಕ್ಷವನ್ನು ಬಲಗೊಳಿಸಲಾಗುವುದು. ಮುಂದೆ ಬರಲಿರುವ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷ ಹೆಚ್ಚಿನ ಸ್ಥಾನ ಪಡೆಯುವಂತೆ ನಾವೆಲ್ಲರೂ ಸಂಘಟನೆ ಮಾಡೋಣ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಮೂಡಾ ಮತ್ತು ವಾಲ್ಮೀಕಿ ನಿಗಮ ಹಗರಣ ವಿರುದ್ಧ ಹೋರಾಟ ನಡೆಸುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂಬ ಚಿಂತನೆ ಜೆಡಿಎಸ್ ಮತ್ತು ಬಿಜೆಪಿ ನಾಯಕರಲ್ಲಿ ಬಂದಿದೆ. ಹೀಗಾಗಿ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಿರುವ ಕಾರಣ ಪಾದಯಾತ್ರೆಗೆ ಶಕ್ತಿ ತುಂಬುವ ಮೂಲಕ ಯಶಸ್ವಿಗೊಳಿಸಬೇಕಿದೆ ಎಂದರು.ಅಧಿಕಾರಕ್ಕೆ ಬಂದ ದಿನದಿಂದಲೂ ಕಾಂಗ್ರೆಸ್ ಸರ್ಕಾರ ಹಗರಣಗಳಲ್ಲಿಯೇ ಮುಳುಗಿದ್ದು, ವಿಪಕ್ಷಗಳಿಗೆ ಹೋರಾಟ ಮಾಡಲು ಕೆಲಸ ನೀಡಿದೆ. ಈಗಾಗಲೇ ಜೆಡಿಎಸ್ - ಬಿಜೆಪಿ ಮೈತ್ರಿ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಸಾಧಿಸಿದೆ. ಮಿತ್ರ ಪಕ್ಷಗಳು ಪರ್ಯಾಯವಾಗಿ ಸಭೆ, ಹೋರಾಟ ನಡೆಸುವುದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಆದ್ದರಿಂದ ಉಭಯ ಪಕ್ಷಗಳ ಮುಖಂಡರನ್ನು ಒಳಗೊಂಡ ಕೋರ್ ಕಮಿಟಿ ರಚನೆ ಮಾಡಬೇಕಿದೆ. ಈ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿದರು.
ಸಭೆಯಲ್ಲಿ ಜೆಡಿಎಸ್ ಶಾಸಕಾಂಗ ನಾಯಕರ ಸುರೇಶ್ ಬಾಬು, ಚನ್ನಪಟ್ಟಣ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ಮುಖಂಡರಾದ ಕೆ.ಎಸ್.ಶಂಕರಯ್ಯ, ನರಸಿಂಹಮೂರ್ತಿ, ಎಂ.ಆರ್.ಶಿವಕುಮಾರ್ ಸ್ವಾಮಿ, ಮಂಜುನಾಥ್, ಉಮೇಶ್, ಶೋಭಾ, ಸರಸ್ವತಿ,ಗ್ಯಾಬ್ರಿಯಲ್, ಗೂಳಿಗೌಡ ಮತ್ತಿತರರು ಉಪಸ್ಥಿತರಿದ್ದರು.ಹಗರಣಗಳ ವಿರುದ್ಧ ಬೀದಿಗಿಳಿದು ಹೋರಾಟ
ರಾಮನಗರ: ಮೂಡಾ, ವಾಲ್ಮಿಕಿ ನಿಗಮ ಸೇರಿದಂತೆ ವಿವಿಧ ಹಗರಣಗಳ ಕುರಿತು ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಗ್ಗೂಡಿ ಹೋರಾಟ ನಡೆಸಿದ್ದೇವೆ. ಆದರೆ, ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೆ ಅವಕಾಶ ಸಿಗದ ಕಾರಣ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ತಿಳಿಸಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪಾದಯಾತ್ರೆಯ ಪೂರ್ವಭಾವಿ ಸಿದ್ದತೆ ಬಗ್ಗೆ ಸಭೆ ಮಾಡುತ್ತಿದ್ದೇವೆ. ರಾಮನಗರ, ಮಂಡ್ಯ, ಮೈಸೂರು ಭಾಗಗಳಲ್ಲಿ ಪ್ರತ್ಯೇಕ ಸಭೆ ನಡೆಸುತ್ತಿದ್ದೇವೆ. ಹಳೆ ಮೈಸೂರು ಭಾಗ ಜೆಡಿಎಸ್ ಭದ್ರಕೋಟೆ. ಜೆಡಿಎಸ್, ಬಿಜೆಪಿ ಕಾರ್ಯಕರ್ತರೆಲ್ಲರೂ ಒಟ್ಟಾಗಿ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.ಪಾದಯಾತ್ರೆ ಹತ್ತಿಕ್ಕಲು ಆಗಲ್ಲ :
ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ. ಯಾವುದೇ ಕಾರಣಕ್ಕೂ ನಮ್ಮ ಪಾದಯಾತ್ರೆಯನ್ನು ಹತ್ತಿಕ್ಕುವ ಕೆಲಸ ಆಗಲ್ಲ. ಸರ್ಕಾರ ಏನೇ ಮಾಡಿದರೂ ನಾವು ಪಾದಯಾತ್ರೆ ಮಾಡಿಯೇ ತೀರುತ್ತೇವೆ. ಸರ್ಕಾರದ ಹಗರಣಗಳ ವಿರುದ್ಧ ಹೋರಾಟದ ಮೂಲಕ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಸುರೇಶ್ ಬಾಬು ಹೇಳಿದರು.