ಫಕೃದ್ದೀನ ಎಂ.ಎನ್.

ನವಲಗುಂದ:

ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ವಿದ್ಯುತ್‌ ಸಮಸ್ಯೆ ಪರಿಹಾರವಾಗುವ ಲಕ್ಷಣಗಳು ಕಾಣುತ್ತಿಲ್ಲ. ಪದೇ ಪದೇ ವಿದ್ಯುತ್‌ ಸ್ಥಗಿತದಿಂದಾಗಿ ರೋಗಿಗಳು ಇನ್ನಿಲ್ಲದ ನರಕಯಾತನೆ ಅನುಭವಿಸುತ್ತಿದ್ದಾರೆ. ಭಾನುವಾರವೂ ರಾತ್ರಿಯಿಡೀ ವಿದ್ಯುತ್‌ ಸ್ಥಗಿತಗೊಂಡು ರೋಗಿಗಳು ಪರದಾಡಿದರು.

ತಾಲೂಕು ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ವೈದ್ಯರು ಕತ್ತಲಿನಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಿದರು. ತುರ್ತು ಚಿಕಿತ್ಸಾ ಘಟಕದಲ್ಲಿ ಆಮ್ಲಜನಕ ಸಾಂದ್ರಕ, ಲೈಫ್ ಸಪೋರ್ಟ್ ಸಿಸ್ಟಮ್‌ಗಳು ಮತ್ತು ಇತರ ವೈದ್ಯಕೀಯ ಉಪಕರಣಗಳು ವಿದ್ಯುತ್ ಇಲ್ಲದೆ ಸ್ಥಗಿತಗೊಂಡವು.

ಇದ್ದೂ ಇಲ್ಲದಂತಾದ ಜನರೇಟರ್‌:


ವಿದ್ಯುತ್‌ ಸಮಸ್ಯೆಯಾದಾಗ ಪರ‍್ಯಾಯವಾಗಿ ಇರಲಿ ಎಂದು ಆಸ್ಪತ್ರೆಗೆ ಜನರೇಟರ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಅದರ ನಿರ್ವಹಣೆ ಇಲ್ಲದೆ ಬಂದಾಗಿ ಎಷ್ಟೋ ತಿಂಗಳು ಕಳೆದಿದರೂ ದುರಸ್ತಿಗೆ ಅಧಿಕಾರಿಗಳು ಕ್ರಮಕೈಗೊಳ್ಳದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಈ ಆಸ್ಪತ್ರೆಯಲ್ಲಿ ಹಲವು ವರ್ಷಗಳ ಹಿಂದೆ ವೈರಿಂಗ್‌ ಮಾಡಲಾಗಿದೆ. ಇದೀಗ ಆಸ್ಪತ್ರೆಗೆ ಹೆಚ್ಚಿನ ಸಾಮರ್ಥ್ಯವುಳ್ಳ ಉಪಕರಣಗಳು ಬಂದಿದ್ದು ಹಳೆಯ ವೈರ್‌ಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಇದನ್ನು ತಡೆದುಕೊಳ್ಳುವ ಸಾರ್ಮರ್ಥ್ಯ ಅವುಗಳಿಗೆ ಇಲ್ಲದೆ ಪದೇ ಪದೇ ವಿದ್ಯುತ್‌ ಕಡಿತವಾಗುತ್ತಿದೆ. ಇದನ್ನು ದುರಸ್ತಿ ಮಾಡಿಸುವ ವರೆಗೆ ರೋಗಿಗಳು ಕತ್ತಲಲ್ಲಿಯೇ ಕಾಲ ಕಳೆಯಬೇಕಿದೆ. ಇನ್ನಾದರೂ ಹಳೆಯ ವೈಯರ್‌ ಬದಲಾಯಿಸುವ ಜತೆಗೆ ದುಸ್ಥಿತಿಯಲ್ಲಿರುವ ಜನರೇಟರ್‌ ದುರಸ್ತಿಗೆ ಅಧಿಕಾರಿಗಳು ಚಿತ್ತ ಹರಿಸಬೇಕಿದೆ.ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟಿದ್ದು ನಿಜ, ವೈದ್ಯಕೀಯ ಉಪಕರಣಗಳು ಹೆಚ್ಚಿದ್ದು, ಅಷ್ಟೊಂದು ಪ್ರಮಾಣದ ಲೋಡ್ ವೈಯರ್‌ಗಳು ತೆಗೆದುಕೊಳ್ಳುತ್ತಿಲ್ಲ. ಇದರಿಂದಾಗಿ ಪದೇ ಪದೇ ವಿದ್ಯುತ್ ವ್ಯತ್ಯಯವಾಗುತ್ತಿದೆ. ಹೊಸ ವೈರಿಂಗ್ ಮಾಡುವ ವರೆಗೆ ಈ ರೀತಿಯ ಸಮಸ್ಯೆಯಾಗಲಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.ಡಾ. ರೂಪಾ ಕಿಣಗಿ, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ

ನವಲಗುಂದ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿರುವುದು ಸ್ಥಳೀಯ ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಆಸ್ಪತ್ರೆಗೆ ಮೂಲಭೂತ ಸೌಲಭ್ಯ ಒದಗಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ.

ಮೌಲಾಸಾಬ್‌ ವೈದ್ಯ, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷತಾಲೂಕು ಆಸ್ಪತ್ರೆಗೆ ಬರುವ ಅನುದಾನ ಮತ್ತು ಜನರೇಟರ್ ನಿರ್ವಹಣೆಗೆ ಮೀಸಲಿಟ್ಟ ಹಣ ದುರುಪಯೋಗವಾಗುತ್ತಿರುವ ಸಂಶಯವಿದೆ. ರೋಗಿಗಳಿಗೆ ಕತ್ತಲೆಯಲ್ಲಿ ಚಿಕಿತ್ಸೆ ನೀಡುವ ಅನಿವಾರ್ಯತೆ ನಿರ್ಮಾಣವಾಗಿದ್ದು, ಆಸ್ಪತ್ರೆಯ ಸಿಬ್ಬಂದಿ ತಮ್ಮ ಕರ್ತವ್ಯದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.

ಮಾಬುಸಾಬ ಯರಗುಪ್ಪಿ, ಸಾಮಾಜಿಕ ಕಾರ್ಯಕರ್ತ