ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ವಿದ್ಯುತ್ ದರವನ್ನು ಮಾರ್ಚ್ 1 ರಿಂದಲೇ ಅನ್ವಯವಾಗುವಂತೆ ಏರಿಕೆ ಮಾಡಿ ರಾಜ್ಯ ಸರ್ಕಾರ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಪಾಲಹಳ್ಳಿಯಲ್ಲಿ ತಿರುಮಲ ವೆಂಕಟರಮಣಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮುದಾಯ ಭವನ ಉದ್ಘಾಟನೆ ಹಾಗೂ ವೇದಿಕೆಯಲ್ಲಿ ದೀಪ ಬೆಳಗಿಸಿ ಮಾತನಾಡಿದರು.

ಜನ ಸಾಮಾನ್ಯರ ಅಗತ್ಯ ಸೇವೆಗಳ ಮೇಲೆ ರಾಜ್ಯ ಸರ್ಕಾರ ವಿಪರೀತ ತೆರಿಗೆ ವಸೂಲಿ ಮಾಡಿ, ಮಹಿಳೆಯರಿಗೆ ಕೇವಲ 2 ಸಾವಿರ ರು. ನೀಡುತ್ತಿದ್ದಾರೆ. ಒಂದು ವೇಳೆ ನಾನು ಇಷ್ಟೊಂದು ತೆರಿಗೆ ವಸೂಲಿ ಮಾಡಿದ್ದರೆ ಪ್ರತಿಯೊಬ್ಬರಿಗೂ ತಲಾ 5 ಸಾವಿರ ರು. ನೀಡುತ್ತಿದ್ದೆ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ ಹಿತರಕ್ಷಣೆಗೆ ನೀಡಿದ್ದ ಆದ್ಯತೆ ಸ್ಮರಿಸಿದ ಅವರು, ನಾನು ಮುಖ್ಯಮಂತ್ರಿ ಆದ ಸಮಯದಲ್ಲಿ ಸುಮಾರು 25 ಸಾವಿರ ಕೋಟಿ ರು. ರೈತರ ಸಾಲಮನ್ನಾ ಮಾಡುವ ಮೂಲಕ ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸಿದ್ದೆ ಎಂದರು.


ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ರೈತರ ಮನೆಗಳಿಗೆ ಖುದ್ದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದೆವು. ಆದರೆ, ಇಂದಿನ ಸರ್ಕಾರದ ನೀತಿಗಳು ಜನಸಾಮಾನ್ಯರಿಗೆ ಹೊರೆಯಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತದಾರರು ಮುಂದಿನ ಬಾರಿ ಪೂರ್ಣ ಪ್ರಮಾಣದ ಸರ್ಕಾರ ರಚಿಸಲು ತಮಗೆ ಅವಕಾಶ ನೀಡಿದರೆ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುಸುತ್ತೇವೆ ಎಂದು ಭರವಸೆ ನೀಡಿದರು.

ಈಗಾಗಲೇ ಗ್ರಾಮದ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ 10 ಲಕ್ಷ ರು. ಧನಸಹಾಯ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಮತ್ತೆ 10 ಲಕ್ಷ ರು. ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಸಚಿವರು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ದೇವಾಲಯದ ಸಮಿತಿ ಅಧ್ಯಕ್ಷ ಪಿ.ಎಚ್ ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಚ್.ಟಿ.ಮಂಜು, ಎಂಎಲ್‌ಸಿ ವಿವೇಕಾನಂದ, ಜಿಪಂ ಮಾಜಿ ಅಧ್ಯಕ್ಷ ಎಸ್.ಲಿಂಗಣ್ಣ, ರಾಜ್ಯ ಕೃಷಿ ಸಮಾಜದ ಮಾಜಿ ಅಧ್ಯಕ್ಷ ಪಿ.ಗಿರಿಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್‌, ಪಾಲಹಳ್ಳಿ ಮುಕುಂದ ಸೇರಿದಂತೆ ದೇವಸ್ಥಾನದ ಭಕ್ತರು, ಯಜಮಾನರು ಹಾಗೂ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಶಾಸಕ ಎಲ್.ನಾಗೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ಇಂಡವಾಳು ಸಚ್ಚಿದಾನಂದ ದೇವಸ್ಥಾನಕ್ಕೆ ಭೇಟಿ ನೀಡಿ ವೆಂಕಟರಮಣಸ್ವಾಮಿ ದೇವರ ದರ್ಶನ ಪಡೆದದರು.