ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಚಿಕ್ಕಪೇಟೆಯ ಶ್ರೀ ಕಾಳಿಕಾಂಬ ಪತ್ತಿನ ಸಹಕಾರ ಸಂಘದ 27 ನೇ ವರ್ಷದ ಸರ್ವ ಸದಸ್ಯರ ಸಭೆ ನಡೆಯಿತು. ಇದೇ ವೇಳೆ ಸಹಕಾರರತ್ನ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಗಳೂರು ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಪುರಸ್ಕೃತರಾದ ಡಾ.ಎಸ್.ಆರ್. ಹರೀಶಾಚಾರ್ಯ ಮಾತನಾಡಿ, ಆರ್ಥಿಕ, ಸಾಮಾಜಿಕವಾಗಿ ಶಕ್ತಿ ಇಲ್ಲದವರಿಗೆ ಶಕ್ತಿ ತುಂಬಲು ಸಹಕಾರ ಕ್ಷೇತ್ರ ಸಹಕಾರಿಯಾಗಿದೆ. ಅಗತ್ಯ ಅವಶ್ಯಕತೆಗಳು, ಅನುಕೂಲಗಳನ್ನು ಪಡೆಯಲು ಈ ಕ್ಷೇತ್ರ ಅನುಕೂಲಕರವಾಗಿದೆ ಎಂದು ಹೇಳಿದರು.
ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ ಎಂಬ ಸಹಕಾರಿ ತತ್ವವನ್ನು ಅಳವಡಿಸಿಕೊಂಡು ಸಹಕಾರಿ ಸಂಸ್ಥೆಯನ್ನು ಸದೃಢವಾಗಿ ಬೆಳೆಸಿ ನಮ್ಮಆರ್ಥಿಕ ಅಗತ್ಯತೆಗಳ ನೆರವು ಪಡೆದು ಸಂಸ್ಥೆಯನ್ನೂ ಬೆಳೆಸಬೇಕು. ಸಹಕಾರ ಸಂಸ್ಥೆಗಳು ನಿರಂತರವಾಗಿ ಬೆಳವಣಿಗೆ ಆಗಬೇಕು.ಈಗಿನ ಸದಸ್ಯರ ಜೊತೆಗೆ 20 ವರ್ಷ ವಯೋಮಾನದವರನ್ನೂ ಸದಸ್ಯರನ್ನಾಗಿ ಮಾಡಿಕೊಂಡು ಆವರಲ್ಲೂ ಸಹಕಾರ ಸಂಸ್ಥೆಗಳಲ್ಲಿ ತೊಡಗಿಸಿ ಅವರಲ್ಲೂ ಸಹಕಾರ ಮನೋಭಾವ ಬೆಳೆಸಿ, ಮುಂದಿನ ತಲೆಮಾರು ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಲು ಮಾರ್ಗದರ್ಶನ ನೀಡಬೇಕು. ಸಹಕಾರ ಸಂಸ್ಥೆಗಳಿಗೆ ಹೊಸ ನೀರು ಬಂದಾಗ ಸಂಸ್ಥೆಯ ಬೆಳವಣಿಗೆ ಸಲಭವಾಗುತ್ತದೆ ಎಂದು ಹೇಳಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಪಾಲು ಪಡೆಯಬೇಕು. ನಮಗೆ ಸಿಗಬೇಕಾದ ಔದ್ಯೋಗಿಕ, ಶೈಕ್ಷಣಿಕ, ರಾಜಕೀಯ ಪ್ರಾತಿನಿಧ್ಯತೆ ಪಡೆಯಲು ಪ್ರಯತ್ನಿಸಬೇಕು. ವಿಶ್ವಕರ್ಮ ಸಮಾಜದ ಆಚಾರ, ವಿಚಾರ, ಸಂಸ್ಕೃತಿ, ಸಂಪ್ರದಾಯಗಳನ್ನು ಮಕ್ಕಳಿಗೆ ತಿಳಿಸಿ, ಮುಂದುವರೆಸಲು ಹೇಳಬೇಕು. ವಿಶ್ವಕರ್ಮ ಸಮಾಜದವರು ಒಗ್ಗಟ್ಟಾಗಿರಬೇಕು ಎಂದು ಮನವಿ ಮಾಡಿದರು.
ಮತ್ತೊಬ್ಬರು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಡಾ.ಬಿ.ಎಂ.ಉಮೇಶ್ ಕುಮಾರ್ ಮಾತನಾಡಿ, ಬದಲಾಗುತ್ತಿರುವ ತಂತ್ರಜ್ಞಾನ, ಆಧುನಿಕತೆಯನ್ನು ಸಹಕಾರ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲರೂ ಸಹಕರಿಸಿ ಶಕ್ತಿ ತುಂಬಿದರೆ ಸಂಸ್ಥೆ ಶಕ್ತಿಯುತವಾಗಿ ಬೆಳೆಯುತ್ತದೆ.ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಹೆಚ್ಚು ಜನರಿಗೆ ಸಾಲಸೌಲಭ್ಯ ನೀಡಲು ಸಾಧ್ಯವಿದೆ ಎಂದರು.ಗುರುಕುಲ ವಿವಿಧೋದ್ದೇಶ ಸೌಹಾರ್ದ ಸಹಕಾರದ ಅಧ್ಯಕ್ಷ ಜಿ.ಮಲ್ಲಿಕಾರ್ಜುನಯ್ಯ ಅವರು ಗುರುಕುಲ ಕಾಳಿಕಾಂಬ ಆರೋಗ್ಯ ಸಹಕಾರ ಯೋಜನೆಗೆ ಚಾಲನೆ ನೀಡಿದ ಮಾತನಾಡಿ, ಈ ಪರಿಸ್ಥಿತಿಯಲ್ಲಿ ಸಹಕಾರ ಸಂಸ್ಥೆಗಳು ಆರೋಗ್ಯ ಯೋಜನೆ ಅಳವಡಿಸುವುದು ಉತ್ತಮ ಬೆಳವಣಿಗೆ ಎಂದರು.
ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ವಿ.ಗೋವರ್ಧನಾಚಾರ್ ಮಾತನಾಡಿ, ಕಳೆದ ಸಾಲಿನಲ್ಲಿ ಸಂಘದ 21,94,598ರು.ಗಳ ನಿವ್ವಳ ಲಾಭ ಗಳಿಸಿದೆ ಎಂದರು.ಸಂಘದ ಕಾರ್ಯವ್ಯಾಪ್ತಿಯು ಈ ಮೊದಲು ತುಮಕೂರು ನಗರದ ಕೆಲವೇ ಪ್ರದೇಶ ಒಳಗೊಂಡಿತ್ತು. ಈಗ ನಗರದ ಎಲ್ಲಾ ಬಡಾವಣೆಗಳು ಹಾಗೂ ಸುತ್ತಮುತ್ತಲ ಗ್ರಾಮಗಳನ್ನು ಕಾರ್ಯವ್ಯಾಪ್ತಿಗೆ ಸೇರಿಸಿ ಸದಸ್ಯರ ಸಂಖ್ಯೆ ಹೆಚ್ಚು ಮಾಡಿ ಸಂಘದವನ್ನು ಸದೃಢವಾಗಿ ಬೆಳೆಸಲು ಗುರಿ ಹೊಂದಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಟಿ.ಪಿ.ವೇಣುಗೋಪಾಲಚಾರ್, ನಿರ್ದೇಶಕರಾದ ಟಿ.ಎ.ಸುಧೀರ್, ಟಿ.ಸಿ.ಡಮರುಗೇಶ್, ಸಿ.ರಾಮಲಿಂಗಾಚಾರ್, ವೈ.ಎಸ್.ನಾಗರತ್ನ, ಫೈರೋಜ್, ಜೆ.ಎನ್.ಗೋಪಾಲಕೃಷ್ಣಾಚಾರ್, ವಿ.ಈಶ್ವರಿ, ವ್ಯವಸ್ಥಾಪಕರಾದ ಜಿ.ಲೀಲಾ ಮೊದಲಾದವರು ಭಾಗವಹಿಸಿದ್ದರು.