ತೆಕ್ಕಲಕೋಟೆ: ಇಲ್ಲಿನ ಪಪಂ ಕಾರ್ಯಾಲಯ ಭೂಮಿಪೂಜೆ ವೇಳೆ ಸೋಮವಾರ ಹಾಲಿ, ಮಾಜಿ ಶಾಸಕರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು.

ಬಡವರನ್ನು ಒಕ್ಕಲೆಬ್ಬಿಸಿ ಪಟ್ಟಣ ಪಂಚಾಯಿತಿ ಕಾರ್ಯಾಲಯ ಕಟ್ಟಡ ಕಾಮಗಾರಿಗೆ ಚಾಲನೆ ನೀಡುತ್ತಿದ್ದು, ಯಾರನ್ನು ಮೆಚ್ಚಿಸಲು ಈ ಕೆಲಸ ಮಾಡುತ್ತಿದ್ದೀರಿ ಎಂದು ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರು ಹಾಲಿ ಶಾಸಕ ಬಿ.ಎಂ. ನಾಗರಾಜ ಅವರನ್ನು ಪ್ರಶ್ನಿಸಿದಾಗ ಪರಸ್ಪರ ಏರು ದನಿಯಲ್ಲಿ ಮಾತನಾಡಿದರು.

ಪಟ್ಟಣದ 2ನೇ ವಾರ್ಡಿನ ನಿಟ್ಟೂರು ರಸ್ತೆಯಲ್ಲಿ ಬರುವ ಪೌರಕಾರ್ಮಿಕ ವಸತಿ ಗೃಹದ ಜಾಗದಲ್ಲಿ ಅನಧಿಕೃತ ಗುಡಿಸಲುಗಳ ತೆರವು ಕಾರ್ಯಾಚರಣೆ ಸ್ಥಳಕ್ಕೆ ಶಾಸಕ ಬಿ.ಎಂ. ನಾಗರಾಜ ಭೇಟಿ ನೀಡಿದ್ದರು. ಈ ವೇಳೆ ಸೋಮಲಿಂಗಪ್ಪ ಎರಡು ಎಕರೆ ಜಾಗದಲ್ಲಿ ಈಗಾಗಲೇ ಪೊಲೀಸ್ ವಸತಿ ಗೃಹ, ನೀರಾವರಿ ವಸತಿ ಗೃಹ, ಪಶು ಇಲಾಖೆ ಆಸ್ಪತ್ರೆ ಮತ್ತು ಇಂದಿರಾ ಕ್ಯಾಂಟಿನ್ ಗೆ ಬಹುತೇಕ ಜಾಗ ಬಳಕೆಯಾಗಿದ್ದು. ಪೌರ ಕಾರ್ಮಿಕರ ವಸತಿ ಗೃಹಕ್ಕೆ ನಿಗದಿ ಪಡಿಸಲಾದ ಜಾಗದಲ್ಲಿ ಪಟ್ಟಣ ಪಂಚಾಯಿತಿ ಕಾರ್ಯಾಲಯ ನಿರ್ಮಾಣ ಮಾಡುತ್ತಿರುವುದು ಅವೈಜ್ಞಾನಿಕ. ಇದನ್ನು ರಾಷ್ಟ್ರೀಯ ಹೆದ್ದಾರಿ ಬಳಿ ಕೆ.ಇ.ಬಿ. ಹಿಂಭಾಗದಲ್ಲಿ ಇರುವ ಎರಡು ಎಕರೆ ಮೂವತ್ತೇಳು ಸೇಂಟ್ಸ್ ಜಾಗದಲ್ಲಿ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಶಾಸಕ ಬಿ.ಎಂ. ನಾಗರಾಜ ಅಧಿಕಾರಿಗಳು ಈಗಾಗಲೇ ನೋಟಿಸ್‌ ನೀಡಿಯೇ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದರು.

ಬಳಿಕ ಧರಣಿ ನಿರತರಾಗಿದ್ದ ಕುಟುಂಬಗಳನ್ನು ಭೇಟಿ ಮಾಡಿದ ಶಾಸಕ ಬಿ.ಎಂ. ನಾಗರಾಜ ಸರ್ಕಾರದ ವತಿಯಿಂದ ಪರಿಹಾರ ಹಾಗೂ ನಿವೇಶನ ನೀಡಲು ಪ್ರಯತ್ನಿಸಲಾಗುವುದು ಎಂದು ಹೇಳಿ ಕಾಮಗಾರಿಗೆ ಚಾಲನೆ ನೀಡದೇ ಅಲ್ಲಿಂದ ತೆರಳಿದರು.


ಈ ಕುರಿತು ಧರಣಿ ಕುಳಿತ ಮಲ್ಲಮ್ಮ ಮಾತನಾಡಿ, ನಮಗೆ ಪರಿಹಾರ ನೀಡುವ ವರೆಗೂ ಈ ಜಾಗ ಖಾಲಿ ಮಾಡುವುದಿಲ್ಲ. ಪರಿಹಾರ ಸಿಗುವ ವರೆಗೂ ಧರಣಿ ಮುಂದುವರಿಸುತ್ತೇವೆ ಎಂದು ಒತ್ತಾಯಿಸಿದರು.

ಸಿಪಿಐಗಳಾದ ಚಂದನ್ ಗೋಪಾಲ, ಹನುಮಂತಪ್ಪ, ಪಿಎಸ್ಐಗಳಾದ ಸದ್ದಾಂ ಹುಸೇನ್‌, ಪರಶುರಾಮ, ಶಶಿಧರ ನಾಯಕ ಸೇರಿದಂತೆ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ, ನಾಗಪ್ಪ, ನರೇಂದ್ರ ಸಿಂಹ, ಶ್ಯಾಮ ಸುಂದರ, ಖಾದರಭಾಷಾ ಹಾಗೂ ಬಿಜೆಪಿ ಮುಖಂಡರಾದ ಬಿಜೆಪಿ ತಾಲೂಕು ಅಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನ ಸ್ವಾಮಿ, ಮಂಜುನಾಥ, ರಾಘವೇಂದ್ರ ಸೇರಿದಂತೆ ಇನ್ನಿತರರು ಇದ್ದರು.