ದೈಹಿಕ ಶಿಕ್ಷಣ ಮತ್ತು ಕ್ರೀಡೆ ವಿಭಾಗದ ಪ್ರಶಿಕ್ಷಣಾರ್ಥಿಗಳು ಪರಿಪೂರ್ಣವಾಗಬೇಕಾದರೆ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಾಯೋಗಿಕ ಅನುಭವ ಹೊಂದಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ತಿಪ್ಪೇರುದ್ರಪ್ಪ ಜೆ. ಹೇಳಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ದೈಹಿಕ ಶಿಕ್ಷಣ ಮತ್ತು ಕ್ರೀಡೆ ವಿಭಾಗದ ಪ್ರಶಿಕ್ಷಣಾರ್ಥಿಗಳು ಪರಿಪೂರ್ಣವಾಗಬೇಕಾದರೆ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಾಯೋಗಿಕ ಅನುಭವ ಹೊಂದಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ತಿಪ್ಪೇರುದ್ರಪ್ಪ ಜೆ. ಹೇಳಿದರು.

ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಗುಡ್ಡಗಾಡು ಓಟದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ವಿಶ್ವವಿದ್ಯಾಲಯದಲ್ಲಿ ಇಂಥ ಕ್ರೀಡಾ ಚಟುವಟಿಕೆ ಸಂಘಟಿಸುವುದರಿಂದ ಪ್ರಶಿಕ್ಷಣಾರ್ಥಿಗಳಿಗೆ ಪ್ರಾಯೋಗಿಕ ಅನುಭವವಾಗಿ ಮುಂದಿನ ವೃತ್ತಿಯಲ್ಲಿ ಅವರು ಸಮರ್ಥರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿವಿಯ ದೈಹಿಕ ಶಿಕ್ಷಣ ಮತ್ತು ಕ್ರೀಡೆ ವಿಭಾಗದ ಮುಖ್ಯಸ್ಥ ಡಾ. ಶಶಿಧರ ಕೆಲ್ಲೂರ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಮೊದಲು ಯೋಜನೆ ರೂಪಿಸಬೇಕು. ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಂಡು ಕಾರ್ಯಪ್ರವೃತ್ತರಾಗಬೇಕು. ಆಗ ಮಾತ್ರ ಕ್ರೀಡಾಕೂಟದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.

ಫಲಿತಾಂಶ:

ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ-ಮಲ್ಲಿಕಾರ್ಜುನ (ನೀರಜ್ ಚೋಪ್ರಾ ತಂಡ), ದ್ವಿತೀಯ ಸ್ಥಾನ-ಚಂದ್ರಯ್ಯ (ಮೇಜರ್ ಧ್ಯಾನ್ ಚಂದ್ ತಂಡ), ತೃತಿಯ ಸ್ಥಾನ-ಸಂತೋಷ್ ಕುಮಾರ (ಅಭಿನವ್ ಬಿಂದ್ರಾ ತಂಡ).

ಮಹಿಳೆಯರ ವಿಭಾಗ:

ಪ್ರಥಮ ಸ್ಥಾನ-ಪೂಜಾ (ನೀರಜ್ ಚೋಪ್ರಾ ತಂಡ), ದ್ವಿತೀಯ ಸ್ಥಾನ-ಮಹಾದೇವಿ (ಪಿ.ವಿ.ಸಿಂಧು ತಂಡ), ತೃತಿಯ ಸ್ಥಾನ-ಸುನಿತಾ (ಅಭಿನವ್ ಬಿಂದ್ರಾ ತಂಡ) ಹಾಗೂ ಮೇಜರ್ ಧ್ಯಾನ್ ಚಂದ್ ತಂಡದವರು ವೀರಾಗ್ರಣಿ ಪ್ರಶಸ್ತಿಯನ್ನು ಪಡೆದರು.

ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಹಾಯಕ ಪ್ರಾಧ್ಯಾಪಕ ಡಾ. ಸಂಪತ್ ಕುಮಾರ್, ಶಾಲಾಂತರ್ಗತ ಕ್ರೀಡಾಕೂಟದ ನಿರ್ದೇಶಕ ರಾಜೇಶ್, ಅತಿಥಿ ಉಪನ್ಯಾಸಕ ಕೆ.ಮಹೇಶ್ ಬಾಬು, ವಿದ್ಯಾರ್ಥಿ ಕಾರ್ಯದರ್ಶಿ ಅರುಣಕುಮಾರ ಸೇರಿದಂತೆ ಸಂಶೋಧನಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.