ರಾಜ್ಯದ 4 ವಿವಿ ವ್ಯಾಪ್ತಿಗೆ ಪ್ರಾಯೋಗಿಕ ಕೌಶಲ್ಯ ತರಬೇತಿ

| Published : May 17 2024, 12:33 AM IST

ರಾಜ್ಯದ 4 ವಿವಿ ವ್ಯಾಪ್ತಿಗೆ ಪ್ರಾಯೋಗಿಕ ಕೌಶಲ್ಯ ತರಬೇತಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ವಿಶ್ವವಿದ್ಯಾನಿಲಯ ಸೇರಿದಂತೆ ರಾಜ್ಯದ 4 ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಬರುವ ಶೈಕ್ಷಣಿಕ ವರ್ಷದಿಂದ 3 ವರ್ಷದ ಪದವಿಯೊಂದಿಗೆ ಕೌಶಲ್ಯ ತರಬೇತಿ ನೀಡುವ ಯೋಜನೆಯೂ ಆರಂಭವಾಗಲಿದೆ ಎಂದು ರಾಜ್ಯ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಜಿ.ಜಗದೀಶ ಹೇಳಿದ್ದಾರೆ.

- ಪದವಿ ಕಾಲೇಜು ಪ್ರಾಚಾರ್ಯರು, ಸಂಯೋಜಕರ ಕಾರ್ಯಾಗಾರದಲ್ಲಿ ಜಿ.ಜಗದೀಶ್‌- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ವಿಶ್ವವಿದ್ಯಾನಿಲಯ ಸೇರಿದಂತೆ ರಾಜ್ಯದ 4 ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಬರುವ ಶೈಕ್ಷಣಿಕ ವರ್ಷದಿಂದ 3 ವರ್ಷದ ಪದವಿಯೊಂದಿಗೆ ಕೌಶಲ್ಯ ತರಬೇತಿ ನೀಡುವ ಯೋಜನೆಯೂ ಆರಂಭವಾಗಲಿದೆ ಎಂದು ರಾಜ್ಯ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಜಿ.ಜಗದೀಶ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ಶಿವಮೊಗ್ಗ, ದಾವಿವಿ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಹಮ್ಮಿಕೊಂಡಿದ್ದ ಕಲಿಕೆ ಜೊತೆಗೆ ಕೌಶಲ್ಯ ಯೋಜನೆ ಕುರಿತಂತೆ ದಾವಿವಿ ವ್ಯಾಪ್ತಿಯ ಪದವಿ ಕಾಲೇಜು ಪ್ರಾಚಾರ್ಯರು, ಸಂಯೋಜಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ತುಮಕೂರು ವಿವಿ, ದಾವಣಗೆರೆ ವಿವಿ, ರಾಯಚೂರು ವಿವಿ, ಗುಲ್ಬರ್ಗಾ ಜಿಲ್ಲೆಗಳನ್ನು ಕೌಶಲ್ಯ ತರಬೇತಿಗಾಗಿ ಪ್ರಾಯೋಗಿಕ ಯೋಜನೆಗೆ ಆಯ್ಕೆ ಮಾಡಲಾಗಿದೆ. 3 ವರ್ಷದ ಪದವಿಯಲ್ಲಿ 2 ವರ್ಷದ ಶಿಕ್ಷಣ ಮತ್ತು 3ನೇ ವರ್ಷ ಕಲಿಕೆ ಜೊತೆಗೆ ಗಳಿಕೆಯು ಯೋಜನೆ ಮೂಲ ಉದ್ದೇಶವಾಗಿದೆ. ಒಡಂಬಡಿಕೆ ಮಾಡಿಕೊಂಡ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮಾಸಿಕ ₹12 ಸಾವಿರ ಶಿಷ್ಯವೇತನ ಸಹ ನೀಡಲಾಗಿದೆ. ಈಗಾಗಲೇ 11 ಸಂಸ್ಥೆಗಳೊಂದಿಗೆ ಒಪ್ಪಂದವಾಗಿದೆ. ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ಯೋಜನೆ ಕಾರ್ಯಾರಂಭವಾಗಲಿದೆ. ಯೋಜನೆ ಸಾದಕ-ಬಾಧಕ ಗಮನಿಸಿ, ಮುಂದಿನ ವರ್ಷದಿಂದ ರಾಜ್ಯ ಎಲ್ಲಾ ವಿವಿಗಳು, ಎಲ್ಲಾ ಜಿಲ್ಲೆಗೂ ಕೌಶಲ್ಯ ತರಬೇತಿ ವಿಸ್ತರಿಸಲಾಗುವುದು ಎಂದರು.

ಕೌಶಲ್ಯಾಭಿವೃದ್ಧಿ ಮತ್ತು ಉನ್ನತ ಶಿಕ್ಷಣ ಸಚಿವರು ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಆಸಕ್ತಿ ವಹಿಸಿದ್ದಾರೆ. ಸಾಫ್ಟ್‌ವೇರ್ ದಿಗ್ಗಜ ನಾರಾಯಣಮೂರ್ತಿ ಅವರ ಜೊತೆಗೆ ಉಭಯ ಸಚಿವರು, ತಾವು ಸೇರಿದಂತೆ ಸಾಕಷ್ಟು ಚರ್ಚೆ ನಡೆಸಿದ್ದರಿಂದ 4 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೆ ಬರಲಿದೆ. 3 ವರ್ಷದ ಪದವಿ ನಂತರ ನಾನು ಏನಾದರೂ ಕೆಲಸ ಮಾಡಬಹುದೆಂಬ ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ಬರಬೇಕೆಂಬುದೇ ಯೋಜನೆ ಉದ್ದೇಶ ಎಂದು ತಿಳಿಸಿದರು.

ದಾವಿವಿ ಉಪ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಮಾತನಾಡಿ, ಸೌಲಭ್ಯಗಳೇ ಇಲ್ಲದ 2 ದಶಕಗಳ ಹಿಂದಿನ ದಿನಗಳಿಗೆ ಹೋಲಿಸಿದರೆ ಶಿಕ್ಷಣದ ಗುಣಮಟ್ಟ ಎಲ್ಲ ಸೌಲಭ್ಯವಿದ್ದರೂ ಈಗ ಕುಸಿಯುತ್ತಿದೆ. ಮಕ್ಕಳಲ್ಲಿರುವ ಕೊರತೆ ಕಂಡುಹಿಡಿದು, ಅದನ್ನು ತುಂಬುವ ಪ್ರಯತ್ನ ಬೋಧಕರು ಮಾಡಬೇಕು. ರಾಜ್ಯ, ಕೇಂದ್ರದಲ್ಲಿ ಲಕ್ಷಾಂತರ ಹುದ್ದೆ ಖಾಲಿ ಇವೆ. ಅವುಗಳನ್ನು ತುಂಬಲು ಅಗತ್ಯ ಕೌಶಲ್ಯ ಪಡೆದವರು ಇಲ್ಲದಂತಹ ಸ್ಥಿತಿ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ 21ನೇ ಶತಮಾನದಲ್ಲಿ ಉನ್ನತ ಶಿಕ್ಷಣ ಕೆಳಮಟ್ಟಕ್ಕೆ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ.ಕೆ.ಎ.ವಿಷ್ಣುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಪ್ರದ ಕಾಲೇಜು ಪ್ರಾಚಾರ್ಯ ಪ್ರೊ.ಬಿ.ಸಿ.ದಾದಾಪೀರ್ಬಿ, ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಸಿ.ಕೆ.ಕೊಟ್ರಪ್ಪ, ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಎಂ.ಜಿತೇಂದ್ರ, ಪ್ರಾಚಾರ್ಯರು, ಸಂಯೋಜಕರು, ಸಿಬ್ಬಂದಿ ಇದ್ದರು.

- - - ನಿಮ್ಮ ಅಸಹಕಾರದಿಂದ ಯೋಜನೆ ಮೊಟಕುಗೊಂಡರೆ ಭವಿಷ್ಯದ ಪೀಳಿಗೆಗೆ ನೀವೇ ಮೋಸ ಮಾಡಿದಂತಾಗುತ್ತದೆ. ಯೋಜನೆ ಯಶಸ್ವಿಯಾದರೆ ಭವಿಷ್ಯದ ಸಮಾಜದಲ್ಲಿ ಸಾಕಷ್ಟು ಬದಲಾವಣೆ ನಿರೀಕ್ಷೆ ಮಾಡಬಹುದು. ಯಾವುದೇ ಸರ್ಕಾರಿ ಯೋಜನೆಗಳಲ್ಲಿ ಆರಂಭಶೂರತ್ವ ಹೆಚ್ಚು. ಆದರೆ, ಈ ಯೋಜನೆ ಆರಂಭದಲ್ಲಿ ಸದ್ದು ಮಾಡದೇ, ಮುಕ್ತಾಯದ ಹಂತದಲ್ಲಿ ಸದ್ದು ಮಾಡಬೇಕು

- ಜಿ.ಜಗದೀಶ, ಆಯುಕ್ತ, ರಾಜ್ಯ ಸರ್ಕಾರದ ಕಾಲೇಜು-ತಾಂತ್ರಿಕ ಶಿಕ್ಷಣ ಇಲಾಖೆ

- - - -16ಕೆಡಿವಿಜಿ17, 18:

ರಾಜ್ಯ ಸರ್ಕಾರದ ಕಾಲೇಜು-ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಜಿ.ಜಗದೀಶ ತರಬೇತಿ ಕಾರ್ಯಾಗಾರ ಉದ್ಘಾಟಿಸಿದರು.