ಹೆಚ್ಚು ಹೆಚ್ಚು ಸಂವಹನ ಕೌಶಲ ರೂಢಿಸಿಕೊಳ್ಳಿ:ಡಾ. ಶಶಾಂಕ್‌ ಆರ್‌. ಜೋಷಿ

| Published : Mar 24 2024, 01:31 AM IST

ಹೆಚ್ಚು ಹೆಚ್ಚು ಸಂವಹನ ಕೌಶಲ ರೂಢಿಸಿಕೊಳ್ಳಿ:ಡಾ. ಶಶಾಂಕ್‌ ಆರ್‌. ಜೋಷಿ
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯರ ಬಳಿಗೆ ಅನೇಕ ರೀತಿಯ ರೋಗಿಗಳು ಬರುತ್ತಾರೆ. ಅವರಿಗೆ ಆರೋಗ್ಯ ತಪಾಸಣೆಯ ಜತೆಗೆ ಮಾನಸಿಕವಾಗಿ ಧೈರ್ಯ ತುಂಬವ ಕೆಲಸವನ್ನೂ ಮಾಡಬೇಕು. ಈ ಸಂದರ್ಭದಲ್ಲಿ ತಂತ್ರಜ್ಞಾನ ಅಳವಡಿಕೆ ಬಹಳ ಮುಖ್ಯ. ಬೇರೆ ಭಾಷೆಯ ರೋಗಿಗಳಾಗಿದ್ದರೆ ಅವರ ಭಾಷೆಯನ್ನು ಅರ್ಥೈಸಿಕೊಳ್ಳಲು ಮತ್ತು ಚಿಕಿತ್ಸೆ ನೀಡಲು ತಂತ್ರಜ್ಞಾನ ಬಳಸಿಕೊಳ್ಳಬೇಕು ಮತ್ತು ವಿವಿಧ ರೀತಿಯ ಕೌಶಲ್ಯ ಕಲಿಯಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ವೈದ್ಯಕೀಯ ವಿದ್ಯಾರ್ಥಿಗಳು ತಾವು ಓದುತ್ತಿರುವ ಸಮಯದಲ್ಲೇ ಸಂವಹನ ಕೌಶಲ ರೂಢಿಸಿಕೊಳ್ಳಬೇಕು ಎಂದು ಮುಂಬೈನ ಲೀಲಾವತಿ ಆಸ್ಪತ್ರೆಯ ಎಂಡೋಕ್ರಾನೋಲಾಜಿಸ್ಟ್‌ ವಿಭಾಗದ ಹಿರಿಯ ಸಮಾಲೋಚಕ ಪದ್ಮಶ್ರೀ ಡಾ. ಶಶಾಂಕ್ ಆರ್.ಜೋಷಿ ತಿಳಿಸಿದರು.

ನಗರದ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ನಡೆದ ಪದವೀಧರರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ವೈದ್ಯರ ಬಳಿಗೆ ಅನೇಕ ರೀತಿಯ ರೋಗಿಗಳು ಬರುತ್ತಾರೆ. ಅವರಿಗೆ ಆರೋಗ್ಯ ತಪಾಸಣೆಯ ಜತೆಗೆ ಮಾನಸಿಕವಾಗಿ ಧೈರ್ಯ ತುಂಬವ ಕೆಲಸವನ್ನೂ ಮಾಡಬೇಕು. ಈ ಸಂದರ್ಭದಲ್ಲಿ ತಂತ್ರಜ್ಞಾನ ಅಳವಡಿಕೆ ಬಹಳ ಮುಖ್ಯ. ಬೇರೆ ಭಾಷೆಯ ರೋಗಿಗಳಾಗಿದ್ದರೆ ಅವರ ಭಾಷೆಯನ್ನು ಅರ್ಥೈಸಿಕೊಳ್ಳಲು ಮತ್ತು ಚಿಕಿತ್ಸೆ ನೀಡಲು ತಂತ್ರಜ್ಞಾನ ಬಳಸಿಕೊಳ್ಳಬೇಕು ಮತ್ತು ವಿವಿಧ ರೀತಿಯ ಕೌಶಲ್ಯ ಕಲಿಯಬೇಕು ಎಂದರು.

ವೈದ್ಯ ವಿದ್ಯಾರ್ಥಿಗಳು ಬದ್ಧತೆಯಿಂದ ವೃತ್ತಿ ಸಂಹಿತೆ ಅಳವಡಿಸಿಕೊಳ್ಳಬೇಕು. ವಿಶ್ವವೇ ಒಂದು ಹಳ್ಳಿ ಎಂಬ ಈ ಕಾಲಘಟ್ಟದಲ್ಲಿ ವೈದ್ಯರು ಅವಶ್ಯವಾಗಿ ಸಂವಹನ ಕೌಶಲ ಹೊಂದಿರಬೇಕು. ವೈದ್ಯರು ಮೊದಲು ಮಾನವೀಯತೆ ಬೆಳೆಸಿಕೊಳ್ಳಬೇಕು. ಏಕೆಂದರೆ ನಮ್ಮ ಒಡನಾಟವಿರುವುದೆಲ್ಲ ಜೀವಂತ ಮಾನವರೊಂದಿಗೆ. ಆದ್ದರಿಂದ ಅಂತಃಕರಣ, ಸಹೃದಯತನ ಇದ್ದಾಗ ವೃತ್ತಿಯಲ್ಲಿ ಸಂತೃಪ್ತಿ ಕಾಣಬಹುದು ಎಂದು ಅವರು ಹೇಳಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಯನಕ್ಕೆ ಕೊನೆಯೇ ಇಲ್ಲ. ಜೀವನ ಪರ್ಯಂತ ಹೊಸ ಹೊಸ ವಿಚಾರವನ್ನು ಕಲಿಯಬೇಕಾಗುತ್ತದೆ. ಆದ್ದರಿಂದ ಸಣ್ಣ- ಪುಟ್ಟ ವಿಷಯಕ್ಕೆ ಭ್ರಮನಿರಸನವಾಗದೇ ಏಕಾಗ್ರತೆಯಿಂದ ಗುರಿಯತ್ತ ಸಾಗಬೇಕು ಎಂದು ಅವರು ತಿಳಿಸಿದರು.

ಪ್ರಸ್ತುತ ಕಾಲದಲ್ಲಿ ವೈದ್ಯರು ಕೇವಲ ವೈದ್ಯರಾಗಿಯೇ ಇರದೆ ರಾಜಕೀಯ ಪ್ರವೇಶಿಸಿ, ಸಾರ್ವಜನಿಕ ಜೀವನದಲ್ಲಿ ಹೆಸರುವಾಸಿಯಾಗಿದ್ದಾರೆ. ಕೆಲವರು ಮಂತ್ರಿಗಳಾಗಿ, ನಟರಾಗಿ, ಕ್ರೀಡಾಪಟುಗಳಾಗಿ, ಸಾಹಿತಿಗಳಾಗಿಯೂ ಖ್ಯಾತರಾಗಿದ್ದಾರೆ. ಆದ್ದರಿಂದ ವೃತ್ತಿಯ ಜೊತೆಗೆ ಪ್ರವೃತ್ತಿಗೆ ಅವಕಾಶವಿದೆ ಎಂದರು.

ಈ ವೇಳೆ ಡಾ.ಕೆ.ವಿ. ಶ್ರೀಧರ್‌ಅವರು ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ ವಿತರಿಸಲಾಯಿತು. ಉತ್ತಮ ಉಪನ್ಯಾಸಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೋಲ್ಕತಾ ಮೂಲದ ಡಾ. ಸುಬ್ರದೀಪ್‌ಧಾರ್‌ಆರು ಚಿನ್ನದಪದಕ ಪಡೆದಿದದ್ಾರೆ. ಡಾ. ರೋಹಿತ್‌ಆರ್‌. ನಾಯರ್‌ ಮೂರು ಚಿನ್ನ, ಜೆಎಸ್‌ಎಸ್‌ ವಿದ್ಯಾಪೀಠದ ಕಾರ್ಯದರ್ಶಿ ಎಸ್‌.ಪಿ. ಮಂಜುನಾಥ್‌ ಅವರ ಪುತ್ರಿ ಡಾ.ಎಸ್‌.ಎಂ. ತೇಜಶ್ರೀ ಎರಡು ಚಿನ್ನದ ಪದಕ ಪಡೆದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ್ ಅಧ್ಯಕ್ಷತೆ ವಹಿಸಿದ್ದರು. ಸಮಕುಲಾಧಿಪತಿ ಡಾ.ಬಿ. ಸುರೇಶ್, ಕುಲಪತಿ ಡಾ. ಸುರೀಂದರ್ ಸಿಂಗ್, ಜೆಎಸ್‌ಎಸ್ ಎಎಚ್‌ಇಆರ್ ಕುಲಸಚಿವ ಡಾ.ಬಿ. ಮಂಜುನಾಥ್, ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಎಚ್. ಬಸವನಗೌಡಪ್ಪ, ಉಪ ಪ್ರಾಂಶುಪಾಲರಾದ ಡಾ.ಎಂ.ಎನ್. ಸುಮಾ, ಡಾ. ಪ್ರವೀಣ್ ಕುಲಕರ್ಣಿ, ಡಾ. ಮಹಾಂತಪ್ಪ, ಆಡಳಿತಾಧಿಕಾರಿ ಎಸ್.ಆರ್. ಸತೀಶ್‌ ಚಂದ್ರ ಇದ್ದರು.