ಅಪರೂಪದ ಪೂಜೆ ಎಂದು ಕರೆಯಲ್ಪಡುವ ದೀಪಬೆಳಗಿದ ನಂತರ ಈಶ್ವರನಿಗೆ ನಡೆಯುವ ಸಾಮವೇದ ಪೂರ್ವಕ ಪ್ರದೋಷ ಸಪ್ತರ್ಷಿ ಪೂಜೆ ಪಟ್ಟಣದ ಚಂದ್ರಮೌಳೇಶ್ವರ ಸನ್ನಿಧಾನದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಶಿರಾಳಕೊಪ್ಪ: ಅಪರೂಪದ ಪೂಜೆ ಎಂದು ಕರೆಯಲ್ಪಡುವ ದೀಪಬೆಳಗಿದ ನಂತರ ಈಶ್ವರನಿಗೆ ನಡೆಯುವ ಸಾಮವೇದ ಪೂರ್ವಕ ಪ್ರದೋಷ ಸಪ್ತರ್ಷಿ ಪೂಜೆ ಪಟ್ಟಣದ ಚಂದ್ರಮೌಳೇಶ್ವರ ಸನ್ನಿಧಾನದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಪಟ್ಟಣದ ಕೆಳಗಿನಕೇರಿಯಲ್ಲಿ ಇರುವ ಚಂದ್ರಮೌಳೇಶ್ವರ ದೇವಾಲಯದಲ್ಲಿ ಬುಧವಾರ ಸಂಜೆ ನಾಲ್ಕು ಗಂಟೆಯಿಂದ ರಾತ್ರಿ ೧೦ ಗಂಟೆವರೆಗೂ ಪೂಜಾ ಕಾರ್ಯಕ್ರಮ ನಡೆದವು.ಪ್ರಾರಂಭದಲ್ಲಿ ಅಗಡಿ ಆನಂದ ವನದ ಗುರುದತ್ತ ಚಕ್ರವರ್ತಿ, ವಿರಕ್ತಮಠದ ಸಿದ್ದೇಶ್ವರ ಸ್ವಾಮಿ, ಹಾಗೂ ವಿರಕ್ತ ಮಠದ ನೂತನ ಕಿರಿಯ ಸ್ವಾಮಿಗಳಾದ ವೀರ ಬಸವ ದೇವರು ಅವರನ್ನು ಪೂರ್ಣ ಕುಂಭದೊಂದಿಗೆ ನೂರಾರು ಮಹಿಳೆಯರು ಹೊಂಡದ ಕಾಳಿಕಾದೇವಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಕರೆತಂದರು.
ಆರಂಭದಲ್ಲಿ ಸ್ವಾಮಿಗಳನ್ನು ಸ್ವಾಗತಿಸಿ ನಂತರ ಗೋಪೂಜೆ ನಡೆಸಲಾಯಿತು. ನಂತರ ಬೆಂಗಳೂರಿನಿಂದ ಆಗಮಿಸಿದ ಸಪ್ತರ್ಷಿಗಳ ಹೆಸರಿನ ಏಳು ರುತ್ವಿಜರನ್ನು ಬರಮಾಡಿಕೊಳ್ಳಲಾಯಿತು.ನಂತರ ಚಂದ್ರಮೌಳೇಶ್ವರನಿಗೆ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ನಡೆಯುವಂತೆ ಸಾಮವೇದ ಪೂರ್ವಕ ಸಪ್ತರ್ಷಿ ರುದ್ರಾಭಿಷೇಕ ಪೂಜೆ, ಅರತಿ ಸೇವೆ, ಮಹಾಮಂಗಳಾರತಿ, ಅಷ್ಟಾವಧಾನ ಸೇವೆ ನೆರವೇರಿಸಲಾಯಿತು.ರಾತ್ರಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಆನಂದ ವನದ ಗುರು ದತ್ತ ಚಕ್ರವರ್ತಿ, ವಿರಕ್ತಮಠದ ವೀರಬಸವ ದೇವರು ಆಶೀರ್ವಚನ ನೀಡಿದರು.ವೇದಿಕೆ ಮೇಲೆ ವಿರಕ್ತಮಠದ ಹಿರಿಯ ಸ್ವಾಮಿಗಳಾದ ಸಿದ್ದೇಶ್ವರ ದೇವರು, ದೇವಸ್ಥಾನ ಸಮಿತಿ ಅಧ್ಯಕ್ಷ ನಾಗಭೂಷಣ ಶೆಟ್ಟಿ ಇದ್ದರು.
ಬಿಎಸ್‌ವೈ ಭಾಗಿ:ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಾಗಿ ಹಮ್ಮಿಕೊಂಡಿದ್ದ ಮಹಾ ಪ್ರದೋಷ ಪೂಜೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿ ೧ ಗಂಟೆ ಸಮಯ ಪೂಜೆ ವೀಕ್ಷಿಸಿದರು. ಭಕ್ತರೊಂದಿಗೆ ಕುಳಿತು ಪೂಜೆ ವೀಕ್ಷಿಸಿದ ಅವರು ನಂತರ ಚಂದ್ರಮೌಳೇಶ್ವರನಿಗೆ ಆರತಿ ಮಾಡಿ ಅಭಿನಂದನೆ ಸ್ವೀಕರಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು.
ಇದೇ ವೇಳೆ ಪಟ್ಟಣದ ಹೆಸರಾಂತ ವೈದ್ಯ ದಂಪತಿಗಳಾದ ಡಾ.ಮುರಘರಾಜ್ ಹಾಗೂ ಅವರ ಪತ್ನಿ ಡಾ.ಶರಾವತಿ ಅವರನ್ನು ಅವರ ಅವಿರತ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ರಾತ್ರಿ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.