ದೇವರಹಿಪ್ಪರಗಿ ಶ್ರೀ ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ತನ್ನ ಅತ್ಯುತ್ತಮ ಕಾರ್ಯನಿರ್ವಹಣೆ, ಶಿಸ್ತುಬದ್ಧ ಹಣಕಾಸು ಹಾಗೂ ಗ್ರಾಹಕರ ವಿಶ್ವಾಸಾರ್ಹ ಸೇವೆಗಾಗಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ (ವಿಡಿಸಿಸಿ) ಬ್ಯಾಂಕ್ ಕೊಡಮಾಡುವ ಪಟ್ಟಣ ಸಹಕಾರಿ ಬ್ಯಾಂಕುಗಳ ವಿಭಾಗದಲ್ಲಿ 2024-25ನೇ ಸಾಲಿನಲ್ಲಿ ಜಿಲ್ಲೆಯ ಪ್ರಥಮ ಉತ್ತಮ ಸಹಕಾರಿ ಬ್ಯಾಂಕ್ ಪ್ರಶಸ್ತಿಗೆ ಭಾಜನವಾಗಿದೆ.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಸ್ಥಳಿಯ ಶ್ರೀ ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ತನ್ನ ಅತ್ಯುತ್ತಮ ಕಾರ್ಯನಿರ್ವಹಣೆ, ಶಿಸ್ತುಬದ್ಧ ಹಣಕಾಸು ಹಾಗೂ ಗ್ರಾಹಕರ ವಿಶ್ವಾಸಾರ್ಹ ಸೇವೆಗಾಗಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ (ವಿಡಿಸಿಸಿ) ಬ್ಯಾಂಕ್ ಕೊಡಮಾಡುವ ಪಟ್ಟಣ ಸಹಕಾರಿ ಬ್ಯಾಂಕುಗಳ ವಿಭಾಗದಲ್ಲಿ 2024-25ನೇ ಸಾಲಿನಲ್ಲಿ ಜಿಲ್ಲೆಯ ಪ್ರಥಮ ಉತ್ತಮ ಸಹಕಾರಿ ಬ್ಯಾಂಕ್ ಪ್ರಶಸ್ತಿಗೆ ಭಾಜನವಾಗಿದೆ.ಈಚೆಗೆ ನಡೆದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 107ನೇ ವಾರ್ಷಿಕ ಮಹಾಸಭೆಯಲ್ಲಿ ವಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವಾನಂದ ಪಾಟೀಲ ಅವರು, ಪ್ರಗತಿ ಪಟ್ಟಣ ಬ್ಯಾಂಕಿನ ಅಧ್ಯಕ್ಷ ಡಾ.ವೈ.ಬಿ. ಪಾಟೀಲ ಹಾಗೂ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಪಾಟೀಲ್ ಅವರಿಗೆ ಪ್ರಶಸ್ತಿ ಫಲಕ ಮತ್ತು ನಗದು ಬಹುಮಾನ ನೀಡಿ ಗೌರವಿಸಿದರು.ಸನ್ಮಾನ ಸ್ವೀಕರಿಸಿ ಪ್ರಗತಿ ಬ್ಯಾಂಕಿನ ಅಧ್ಯಕ್ಷ ಡಾ.ವೈ.ಬಿ. ಪಾಟೀಲ ಮಾತನಾಡಿ, 13ನೇ ಬಾರಿ ಈ ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತಿದ್ದು, ಇದಕ್ಕೆನಮ್ಮ ಬ್ಯಾಂಕಿನ ಆಡಳಿತ ಮಂಡಳಿಯ ಸಹಕಾರ, ಸಿಬ್ಬಂದಿಯ ಶ್ರಮ ಹಾಗೂ ಗ್ರಾಹಕರು ನಮ್ಮ ಮೇಲಿಟ್ಟಿರುವ ಅಪಾರ ವಿಶ್ವಾಸಕ್ಕೆ ಸಂದ ಗೌರವವಾಗಿದೆ. ಬ್ಯಾಂಕಿನ ಪ್ರತಿಯೊಂದು ಹಂತದಲ್ಲೂ ಪಾರದರ್ಶಕತೆ ಮತ್ತು ಆರ್ಥಿಕ ಶಿಸ್ತು ಕಾಯ್ದುಕೊಂಡು ಬಂದಿದ್ದರಿಂದಲೇ ಇಂದು ನಮಗೆ ಈ ಸಾಧನೆ ಸಾಧ್ಯವಾಗಿದೆ ಎಂದು ಸಂತಸ ಹಂಚಿಕೊಂಡರು.
ಬ್ಯಾಂಕಿನ ನಿರ್ದೇಶಕ ಬಿ.ಎಂ. ಪಾಟೀಲ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಇನ್ನಷ್ಟು ಅತ್ಯಾಧುನಿಕ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವುದರ ಜತೆಗೆ ಸ್ಥಳೀಯ ವ್ಯಾಪಾರಿಗಳು, ಸಣ್ಣ ಉದ್ಯಮಿಗಳು ಹಾಗೂ ಸಾಮಾನ್ಯಜನರ ಆರ್ಥಿಕ ಅಭಿವೃದ್ಧಿಗೆ ಬ್ಯಾಂಕ್ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.ನಿರ್ದೆಶಕರಾದ ಬಿ.ಜಿ. ಪಾಟೀಲ, ಎಸ್‌ಎಸ್. ಉತ್ನಾಳ, ಡಿ.ಡಿ. ಲಾಮಾಣಿ, ಎಸ್.ಕೆ. ಸಜ್ಜನ, ಐ.ಸಿ. ಕುದರಿ, ವಿ.ಜಿ. ಪಾಟೀಲ, ವಿನೋದಗೌಡ ಪಾಟೀಲ, ಮುರುಗೇಶ ಅಂಗಡಿ, ಬ್ಯಾಂಕ ಸಿಬ್ಬಂದಿ ಹಾಗೂ ವಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರು, ವಿವಿಧ ಸಹಕಾರಿ ಸಂಘಗಳ ಪದಾಧಿಕಾರಿಗಳು ಇದ್ದರು.