ಪ್ರಹ್ಲಾದ ಜೋಶಿ ಘನತೆ ಗೌರವಕ್ಕೆ ಧಕ್ಕೆ ತರಬೇಡಿ: ಶಾಸಕ ಟೆಂಗಿನಕಾಯಿ

| Published : Oct 20 2024, 02:03 AM IST

ಪ್ರಹ್ಲಾದ ಜೋಶಿ ಘನತೆ ಗೌರವಕ್ಕೆ ಧಕ್ಕೆ ತರಬೇಡಿ: ಶಾಸಕ ಟೆಂಗಿನಕಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಗೋಪಾಲ ಜೋಶಿ ಪ್ರಕರಣಕ್ಕೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೂ ಯಾವುದೇ ಸಂಬಂಧವಿಲ್ಲ. ಗೋಪಾಲ ಜೋಶಿ ತಪ್ಪೆಸಗಿದ್ದರೆ ಸರ್ಕಾರ ಸಮರ್ಪಕ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಲಿ.

ಹುಬ್ಬಳ್ಳಿ:

ಗೋಪಾಲ ಜೋಶಿ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದವರು ವಿನಾಕಾರಣ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಘನತೆ, ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದು ಎಂದು ಶಾಸಕ ಮಹೇಶ ತೆಂಗಿನಕಾಯಿ ಆಗ್ರಹಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕೇಂದ್ರ ಸಚಿವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು. ಇದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು.

ಜೋಶಿ ಅವರ ಕುಟುಂಬ ಕಳೆದ 30 ವರ್ಷಗಳಿಂದಲೂ ಪ್ರತ್ಯೇಕವಾಗಿದೆ. ಸಹೋದರರೊಂದಿಗೆ ತಮ್ಮ ಆರ್ಥಿಕ -ಕೌಟುಂಬಿಕ ವ್ಯವಹಾರವೂ ಇಲ್ಲ. ಯಾರಾದರೂ ನನ್ನ ಹೆಸರು ದುರ್ಬಳಕೆಗೆ ಯತ್ನಿಸಿದರೆ ಅದಕ್ಕೂ ತಮಗೂ ಸಂಬಂಧವಿಲ್ಲ. ನಾನು ಬಾಧ್ಯಸ್ತನಲ್ಲ ಎಂಬುದನ್ನು 2012ರಲ್ಲೇ ಸಚಿವರು ಕೋರ್ಟ್ ಅಫಿಡವಿಟ್ ಮೂಲಕ ಪ್ರಕಟಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ತನಿಖೆ ನಡೆಸಿ ಕ್ರಮಕೈಗೊಳ್ಳಲಿ:

ಗೋಪಾಲ ಜೋಶಿ ಪ್ರಕರಣಕ್ಕೂ ಸಚಿವರಿಗೂ ಯಾವುದೇ ಸಂಬಂಧವಿಲ್ಲ. ಗೋಪಾಲ ಜೋಶಿ ತಪ್ಪೆಸಗಿದ್ದರೆ ಸರ್ಕಾರ ಸಮರ್ಪಕ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಲಿ. ಇದರ ಹೊರತು ಅನಗತ್ಯವಾಗಿ ಪ್ರಹ್ಲಾದ ಜೋಶಿ ಹೆಸರು ಕೆಡಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡಬಾರದು ಎಂದು ಆಗ್ರಹಿಸಿದರು

ಗೋಪಾಲ ಜೋಶಿ ಅವರ ಮೇಲಿನ ಆರೋಪದಲ್ಲಿ ಏನಾದರೂ ಸಾಕ್ಷ್ಯಾಧಾರಗಳಿದ್ದರೆ ಕಾನೂನು ತನ್ನ ಕ್ರಮಕೈಗೊಳ್ಳಲಿ. ಇದಕ್ಕೆ ಕೇಂದ್ರ ಸಚಿವರ ವಿರೋಧವೂ ಇಲ್ಲ, ತಮ್ಮದೂ ತಕರಾರಿಲ್ಲ. ಆದರೆ, ಅನಗತ್ಯವಾಗಿ ಜೋಶಿ ಅವರ ಹೆಸರು ಎಳೆದು ತರುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.