ಪ್ರಹ್ಲಾದ ಜೋಶಿ ಬದಲಾವಣೆಗೆ ಲಿಂಗಾಯತ ಮಠಾಧೀಶರ ಪಟ್ಟು

| Published : Mar 28 2024, 12:48 AM IST / Updated: Mar 28 2024, 12:26 PM IST

ಪ್ರಹ್ಲಾದ ಜೋಶಿ ಬದಲಾವಣೆಗೆ ಲಿಂಗಾಯತ ಮಠಾಧೀಶರ ಪಟ್ಟು
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲಿಂಗಾಯತ ಮತ್ತು ಉಳಿದ ಸಮಾಜವನ್ನು ತುಳಿಯುತ್ತಿದ್ದಾರೆ. ಧಾರವಾಡ ಲೋಕಸಭಾ ಮತಕ್ಷೇತ್ರದಿಂದ ಅವರಿಗೆ ನೀಡಿರುವ ಟಿಕೆಟ್ನ್ನು ಬಿಜೆಪಿ ವರಿಷ್ಠರು ಮಾ. 31ರೊಳಗೆ ಬದಲಾಯಿಸಬೇಕು.

ಹುಬ್ಬಳ್ಳಿ:

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲಿಂಗಾಯತ ಮತ್ತು ಉಳಿದ ಸಮಾಜವನ್ನು ತುಳಿಯುತ್ತಿದ್ದಾರೆ. ಧಾರವಾಡ ಲೋಕಸಭಾ ಮತಕ್ಷೇತ್ರದಿಂದ ಅವರಿಗೆ ನೀಡಿರುವ ಟಿಕೆಟ್‌ನ್ನು ಬಿಜೆಪಿ ವರಿಷ್ಠರು ಮಾ. 31ರೊಳಗೆ ಬದಲಾಯಿಸಬೇಕು. ಇಲ್ಲದಿದ್ದಲ್ಲಿ ಏ. 2ರಂದು ನಮ್ಮ ನಿರ್ಧಾರ ಪ್ರಕಟಿಸಬೇಕಾಗುತ್ತದೆ ಎಂದು ಶಿರಹಟ್ಟಿಮಠದ ಫಕೀರ ದಿಂಗಾಲೇಶ್ವರ ಶ್ರೀ ಎಚ್ಚರಿಕೆ ನೀಡಿದ್ದಾರೆ.

ಅವರು ಬುಧವಾರ ಇಲ್ಲಿನ ಮೂರುಸಾವಿರಮಠದ ಆವರಣದಲ್ಲಿ ವಿವಿಧ ಮಠಾಧೀಶರೊಂದಿಗೆ ಚಿಂತನ ಮಂಥನ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದರು. ಚಿಂತನ ಮಂಥನ ಸಭೆಯಲ್ಲಿ ಬರೋಬ್ಬರಿ ವಿವಿಧ ಜಿಲ್ಲೆಗಳ 40ಕ್ಕೂ ಹೆಚ್ಚು ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ಕಳೆದ ಕೆಲ ದಿನಗಳಿಂದ ದಿಂಗಾಲೇಶ್ವರ ಶ್ರೀಗಳು ಧಾರವಾಡ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಗುಸು ಗುಸು ಶುರುವಾಗಿತ್ತು. ಭಕ್ತರು ಒತ್ತಡ ಹಾಕುತ್ತಿದ್ದಾರೆ ಎಂದು ಶ್ರೀಗಳು ಹೇಳಿದ್ದರು. 

ಈ ಹಿನ್ನೆಲೆಯಲ್ಲಿ ವಿವಿಧ ಮಠಾಧೀಶರ ಚಿಂತನ ಮಂಥನ ಸಭೆಯನ್ನು ದಿಂಗಾಲೇಶ್ವರ ಶ್ರೀಗಳು ಕರೆದಿದ್ದರು. ಸಭೆಯಲ್ಲಿ ಸಾಮಾಜಿಕ, ರಾಜಕೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದರು. ಆದರೆ ಸಭೆಯಲ್ಲಿ ಬರೀ ರಾಜಕೀಯವಾಗಿ ಮಾತ್ರ ಚರ್ಚೆ ನಡೆದಿದೆ ಎಂಬುದು ಸ್ಪಷ್ಟ.

ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಸ್ವಾಮೀಜಿಗಳನ್ನು ಅವಮಾನಿಸಿದ್ದಾರೆ. ನಮ್ಮ ವಿರೋಧ ಅವರ ವ್ಯಕ್ತಿತ್ವಕ್ಕೆ ಹೊರತು ಪಕ್ಷ ಅಥವಾ ಸಮಾಜಕ್ಕೆ ಅಲ್ಲ. ಶ್ರೀಮಠದಲ್ಲಿ ನಡೆದ ಚಿಂಥನ ಮಂತನ ಸಭೆಯಲ್ಲಿ ಮಠಾಧಿಪತಿಗಳು ಸೇರಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಬಿಜೆಪಿ ಹೈಕಮಾಂಡ್‌ ಪ್ರಹ್ಲಾದ ಜೋಶಿ ಅವರನ್ನು ಮಾ. 31ರೊಳಗೆ ಬದಲಿಸಿ ಬೇರೊಬ್ಬರಿಗೆ ಟಿಕೆಟ್‌ ಘೋಷಿಸಬೇಕು. ಇಲ್ಲದಿದ್ದಲ್ಲಿ ಏ. 2ರಂದು ಮತ್ತೊಮ್ಮೆ ಲಿಂಗಾಯತ ಸ್ವಾಮೀಜಿಗಳ ಸಭೆ ಕರೆದು ನಮ್ಮ ಮುಂದಿನ ನಡೆ ಏನು ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಸಭೆಯಲ್ಲಿ ಮೂರುಸಾವಿರಮಠದ ಡಾ. ಗುರುಸಿದ್ದರಾಜಯೋಗಿಂದ್ರ ಶ್ರೀ, ಮುರುಘಾಮಠದ ಮಲ್ಲಿಕಾರ್ಜುನ ಶ್ರೀ, ರುದ್ರಾಕ್ಷಿಮಠದ ಬಸವಲಿಂಗ ಶ್ರೀ, ವಿಜಯಪುರ ಚೌಕಿಮಠದ ಕಾಶಿಲಿಂಗ ಶ್ರೀ, ನಂದಿಮಠದ ವೀರಸಿದ್ಧ ಶ್ರೀ, ಸಿದ್ಧಲಿಂಗ ಶಿವಾಚಾರ್ಯರು, ಕುಕನೂರಿನ ಡಾ. ಮಹಾದೇವ ಶ್ರೀ, ಯಲಬುರ್ಗಾದ ಬಸವಲಿಂಗ ಶಿವಾಚಾರ್ಯರು

ಬಾಗಲಕೋಟೆ ಕಸ್ತೂರಿಮಠದ ಓಹಿಲೇಶ್ವರ ಶ್ರೀ, ಹಾವೇರಿ ಹೊಸಮಠದ ಶಾಂತಲಿಂಗ ಶ್ರೀ, ಕುಂದಗೋಳ ಕಲ್ಯಾಣಪುರ ಮಠದ ಬಸವಣ್ಣ ಅಜ್ಜನವರು, ಬ್ಯಾಹಟ್ಟಿಯ ಮರುಳಸಿದ್ಧ ಶಿವಾಚಾರ್ಯರು, ಗಂಗಾವತಿ ಕಲ್ಮಠದ ಕೊಟ್ಟೂರೇಶ್ವರ ಶ್ರೀಗಳು ಸೇರಿದಂತೆ 40ಕ್ಕೂ ಹೆಚ್ಚು ಶ್ರೀಗಳು ಪಾಲ್ಗೊಂಡಿದ್ದರು.

ಬಿಎಸ್‌ವೈರನ್ನು ಕೆಳಗಿಳಿಸಿದ್ದು ಯಾರು ಎನ್ನುವುದು ಗೊತ್ತಿದೆ

ಬಿ.ಎಸ್‌. ಯಡಿಯೂರಪ್ಪರನ್ನು ಪಿತೂರಿ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಅಧಿಕಾರದಿಂದ ಕೆಳಗೆ ಇಳಿಸಿದ್ದು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದ ಶ್ರೀಗಳು, ನಮ್ಮ ಹೋರಾಟ ಯಾವುದೇ ಪಕ್ಷದ ವಿರುದ್ಧವಲ್ಲ ಜೋಶಿ ವಿರುದ್ಧ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.