ಸಾರಾಂಶ
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಪ್ರಹ್ಲಾದ ಜೋಶಿ ಕಣಕ್ಕಿಳಿದಿದ್ದಾರೆ. ಜೋಶಿ ವಿರುದ್ಧ ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿರುವ ಕಾಂಗ್ರೆಸ್ ಅಚ್ಚರಿಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ:ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಪ್ರಹ್ಲಾದ ಜೋಶಿ ಕಣಕ್ಕಿಳಿದಿದ್ದಾರೆ. ಜೋಶಿ ವಿರುದ್ಧ ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿರುವ ಕಾಂಗ್ರೆಸ್ ಅಚ್ಚರಿಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ.
ಪ್ರಹ್ಲಾದ ಜೋಶಿ ಈಗಾಗಲೇ ನಾಲ್ಕು ಬಾರಿ ಗೆದ್ದಿದ್ದಾರೆ. ಪುನಃರಾಯ್ಕೆ ಬಯಸಿ ಈಗಾಗಲೇ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ಅವರಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಅಭ್ಯರ್ಥಿಯ ಹುಡುಕಾಟ ಬಹುದಿನಗಳಿಂದ ನಡೆದಿದೆ. ಅದರಲ್ಲೂ ಒಬಿಸಿಯೋ, ಲಿಂಗಾಯತ ಸಮುದಾಯವೋ ಎಂಬ ಜಿಜ್ಞಾಸೆಗೊಳಗಾಗಿರುವ ಕಾಂಗ್ರೆಸ್, ಮೋಹನ ಲಿಂಬಿಕಾಯಿ, ಶಿವಲೀಲಾ ಕುಲಕರ್ಣಿ, ರಜತ್ ಉಳ್ಳಾಗಡ್ಡಿಮಠ, ವಿನೋದ ಅಸೂಟಿ, ಲೋಹಿತ ನಾಯ್ಕರ ಹೀಗೆ ನಾಲ್ಕೈದು ಜನರ ಹೆಸರುಳನ್ನು ಇಟ್ಟುಕೊಂಡಿದೆ. ಇದೀಗ ಈ ಪಟ್ಟಿಗೆ ಡಾ. ಮಹೇಶ ನಾಲ್ವಾಡ ಹೆಸರು ಸೇರ್ಪಡೆಯಾಗಿದೆ.ಹಾಗೆ ನೋಡಿದರೆ ಮಹೇಶ ನಾಲವಾಡ ಮೊದಲು ಕಾಂಗ್ರೆಸ್ಸಿನಲ್ಲೇ ಇದ್ದವರು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶೆಟ್ಟರ್ ವಿರುದ್ಧ ಸೋತಿದ್ದಾರೆ. ಕಳೆದ ಮೂರು ನಾಲ್ಕು ವರ್ಷದ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದರು.ವಿಧಾನಸಭೆ ಚುನಾವಣೆ ವೇಳೆ ಜಗದೀಶ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ತೆರಳಿದ ವೇಳೆ ಇವರ ಹೆಸರು ಕೇಳಿ ಬಂದಿತ್ತು. ಬಿಜೆಪಿ ಟಿಕೆಟ್ ದೊರೆಯುತ್ತದೆ ಎಂದು ಹೇಳಲಾಗಿತ್ತು. ಆದರೆ ಕೊನೆಗೆ ಇವರಿಗೆ ಟಿಕೆಟ್ ತಪ್ಪಿ ಮಹೇಶ ಟೆಂಗಿನಕಾಯಿ ಅವರಿಗೆ ಲಭಿಸಿತ್ತು. ಅದಾದ ಬಳಿಕ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು ಕಳೆದ ಏಳೆಂಟು ತಿಂಗಳಿನಿಂದ ಅಲ್ಲಿ ಕೆಲಸ ಮಾಡಲು ಶುರು ಮಾಡಿದ್ದರು. ಟಿಕೆಟ್ ಸಿಗುವ ಭರವಸೆ ಕೂಡ ಇತ್ತು. ಕೆಲವು ಹಿರಿಯ ಮುಖಂಡರು ಟಿಕೆಟ್ ಕೊಡಿಸುವುದಾಗಿ ಭರವಸೆಯನ್ನೂ ನೀಡಿದ್ದರಂತೆ. ಆದರೆ ಅಷ್ಟರೊಳಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಟಿಕೆಟ್ ಅಖೈರುಗೊಳಿಸಿ ಹೈಕಮಾಂಡ್ ಘೋಷಿಸಿದೆ. ಇದರಿಂದ ಟಿಕೆಟ್ ವಿಷಯವಾಗಿ ಮತ್ತೊಮ್ಮೆ ನಿರಾಶೆಯನ್ನೇ ಅನುಭವಿಸಿದ್ದಾರೆ ನಾಲ್ವಾಡ್.ಧಾರವಾಡದತ್ತ ಚಿತ್ತ?
ಈಗ ಅತ್ತ ಹಾವೇರಿ ಟಿಕೆಟ್ ಸಿಗಲಿಲ್ಲ. ಇನ್ನು ಸೆಂಟ್ರಲ್ ಕ್ಷೇತ್ರವೂ ತಪ್ಪಿದೆ. ಈಗ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾರೆ ನಾಲವಾಡ. ಲಿಂಗಾಯತ ಸಮುದಾಯಕ್ಕೆ ಸೇರಿರುವ ನಾಲವಾಡ ಕೂಡ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಲ್ಪಸ್ವಲ್ಪ ಹಿಡಿತ ಹೊಂದಿದ್ದಾರೆ. ಅವರಿಗೆ ಟಿಕೆಟ್ ನೀಡಿದರೆ ಒಳ್ಳೆಯ ಫೈಟ್ ಕೊಡಬಹುದು ಎಂಬ ಲೆಕ್ಕಾಚಾರವೂ ಕಾಂಗ್ರೆಸಿಗರಲ್ಲಿದೆ. ಈ ಹಿನ್ನೆಲೆಯಲ್ಲಿ ಮಹೇಶ ಅವರನ್ನು ವಾಪಸ್ ಪಕ್ಷಕ್ಕೆ ಕರೆದುಕೊಂಡು ಬಂದು ಧಾರವಾಡ ಕ್ಷೇತ್ರದಿಂದ ಕಣಕ್ಕಿಳಿಸಬೇಕೆಂಬ ಯೋಚನೆ ಕೂಡ ಕಾಂಗ್ರೆಸ್ ಮುಖಂಡರಲ್ಲಿದೆ. ಈ ಸಂಬಂಧ ಒಂದೆರಡು ಬಾರಿ ಚರ್ಚೆ ಕೂಡ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ ನಾಲವಾಡ ಕಾಂಗ್ರೆಸ್ಸಿಗೆ ಮರಳಿ ಕಣಕ್ಕಿಳಿಯುವ ಬಗ್ಗೆ ಯಾವುದೇ ಸುಳಿವು ಈವರೆಗೆ ನೀಡಿಲ್ಲ. ಕಾಂಗ್ರೆಸ್ಸಿಗರ ಆಹ್ವಾನಕ್ಕೆ ಯೋಚನೆ ಮಾಡಲು ಒಂದೆರಡು ದಿನ ಬೇಕೆಂದು ಕೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.