ಪ್ರಜಾಸೇವೆ ಸಮಾರಂಭದಲ್ಲಿ ಸಲ್ಲಿಕೆಯಾದ ಅರ್ಜಿ, ಅಧಿಕೃತ ಸರ್ಕಾರದ ವೆಬ್‌ ಪೋರ್ಟ್‌ನಲ್ಲಿ ಹಾಕಲಾಗುತ್ತಿದ್ದು, ಅರ್ಜಿ ಸ್ಥಿತಿಗತಿ ಯಾವ ಹಂತದಲ್ಲಿದೆ ಎಂದು ಸಾರ್ವಜನಿಕರು ಕೂಡಾ ನೋಡಬಹುದು

ಹೂವಿನಹಡಗಲಿ: ಸರ್ಕಾರದ ಪ್ರತಿಷ್ಠಿತ ಪ್ರಜಾಸೇವೆ ಆಂದೋಲನ ಸಮಾರಂಭವು ಪಟ್ಟಣದ ಗವಿಸಿದ್ದೇಶ್ವರ ಸಮುದಾಯ ಭವನದಲ್ಲಿ ತಾಲೂಕಾಡಳಿತ ಆಯೋಜಿಸಿತ್ತು.

ಶಾಸಕ ಕೃಷ್ಣನಾಯ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈ ಹಿಂದೆ ಜನ ಸ್ಪಂದನಾ ಸಭೆ ನಡೆಯುತ್ತಿತ್ತು, ಆದರೆ ಅರ್ಜಿ ಆಯಾ ಇಲಾಖೆಗೆ ಹೋಗುತ್ತಿದ್ದವು. ಈಗ ಸರ್ಕಾರ ಇದಕ್ಕಾಗಿಯೇ ಪ್ರಜಾ ಸೇವೆ ಎಂಬ ಇಲಾಖೆ ತೆರೆದು ಇದಕ್ಕೊಬ್ಬ ಅಧಿಕಾರಿ ನೇಮಿಸಿ, ಶೀಘ್ರದಲ್ಲೇ ಜನರ ಸಮಸ್ಯೆಗೆ ಪರಿಹಾರ ಸಿಗುವಂತಹ ಕೆಲಸ ಮಾಡುತ್ತಿದೆ ಎಂದರು.

ಪ್ರಜಾಸೇವೆ ಸಮಾರಂಭದಲ್ಲಿ ಸಲ್ಲಿಕೆಯಾದ ಅರ್ಜಿ, ಅಧಿಕೃತ ಸರ್ಕಾರದ ವೆಬ್‌ ಪೋರ್ಟ್‌ನಲ್ಲಿ ಹಾಕಲಾಗುತ್ತಿದ್ದು, ಅರ್ಜಿ ಸ್ಥಿತಿಗತಿ ಯಾವ ಹಂತದಲ್ಲಿದೆ ಎಂದು ಸಾರ್ವಜನಿಕರು ಕೂಡಾ ನೋಡಬಹುದು ಎಂದರು.

ಅಧಿಕಾರಿಗಳು ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುತ್ತೀರಿ, ಆದರಿಂದ ಜನರ ಕಷ್ಟ ನಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು, ನಮ್ಮ ಕಡೆಗೆ ಜನ ಅರ್ಜಿ ಹಿಡಿದುಕೊಂಡು ಬರದಂತೆ ನೋಡಿಕೊಳ್ಳಬೇಕು, ತಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸಿ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡಬೇಡಿ, ಸಾರ್ವಜನಿಕರು ಸಮಾಧಾನದಿಂದ ಆಯಾ ಇಲಾಖೆಯ ಅಧಿಕಾರಿಗಳಿಗೆ, ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ನಂತರದಲ್ಲಿ ನಾನು ಕೂಡಾ ಅರ್ಜಿ ತರಿಸಿಕೊಂಡು ಅಧಿಕಾರಿಗಳ ಜತೆಗೆ ಚರ್ಚಿಸುತ್ತೇನೆಂದು ಹೇಳಿದರು.

ತಹಸೀಲ್ದಾರ್‌ ಕೆ.ಎಂ. ಗುರುಬಸವರಾಜ ಮಾತನಾಡಿ, ಜನರ ಜ್ವಲಂತ ಸಮಸ್ಯೆ ಆಲಿಸಲು ಸರ್ಕಾರ ಪ್ರಜಾಸೇವೆ ಇಲಾಖೆ ಜಾರಿಗೆ ತಂದಿದೆ. ಪ್ರತಿ ಶನಿವಾರ ಆಯಾ ತಾಲೂಕು ಕೇಂದ್ರ, ಹೋಬಳಿ ಮತ್ತು ಗ್ರಾಪಂ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು, ಜನ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ತಾಪಂ ಇಒ ಪರಮೇಶ್ವರ ಮಾತನಾಡಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ, ಪುರಸಭೆ ಮುಖ್ಯಾಧಿಕಾರಿ ಜಿ.ಹನುಮಂತಪ್ಪ, ಉಪ ತಹಸೀಲ್ದಾರ್‌ ಮಲ್ಲಿಕಾರ್ಜುನ ಸೇರಿದಂತೆ ಇತರೆ ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಪ್ರಜಾಸೇವೆ ಆಂದೋಲನದಲ್ಲಿ ವಿವಿಧ ಇಲಾಖೆಗಳು ಸೇರಿ ಒಟ್ಟು 49 ಅರ್ಜಿ ಸಲ್ಲಿಕೆಯಾಗಿವೆ. 2 ಅರ್ಜಿ ಸ್ಥಳದಲ್ಲೇ ಇತ್ಯರ್ಥವಾಗಿವೆ.