ಸಾರಾಂಶ
ಮಧುಗಿರಿ : ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಕೃತ್ಯ ಜನ ತಗ್ಗಿಸುವಂತಹ ಪ್ರಕರಣವಾಗಿದ್ದು, ಈ ಕೂಡಲೇ ಅವರನ್ನು ಬಂಧಿಸಬೇಕು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುವರ್ಣಮ್ಮ ಹೇಳಿದರು.
ಪಟ್ಟಣದ ಅಂಬೇಡ್ಕರ್ ಪುತ್ಥಳಿ ಬಳಿ ತಾಲೂಕು ಮಹಿಳಾ ಕಾಂಗ್ರೆಸ್‌ನಿಂದ ಪ್ರಜ್ವಲ್ ರೇವಣ್ಣರ ಲೈಂಗಿಕ ಕೃತ್ಯ ವಿರೋಧಿಸಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರು ದಾರಿ ತಪುತ್ತಿದ್ದಾರೆ ಎಂಬ ಹೇಳಿಕೆ ನೀಡುವ ಮೂಲಕ ಹೆಣ್ಣು ಮಕ್ಕಳಿಗೆ ಅಪಮಾನ ಮಾಡಿ ರಾಜ್ಯದ ಗಮನ ಸಳೆದಿದ್ದರು. ಆದರೆ ಅವರ ಸಹೋದರ ಎಚ್. ಡಿ ರೇವಣ್ಣ ಮಗ ಯಾವ ರೀತಿ ದಾರಿ ತಪ್ಪಿದ್ದಾರೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದರು.
ಬಿಜೆಪಿ ನಾಯಕಿ, ನಟಿ ಶ್ರುತಿ ಸಹ ಹೆಣ್ಣು ಮಕ್ಕಳು ಉಚಿತ ಬಸ್ ಪಾಸ್ ಯೋಜನೆಯಿಂದ ಎಲ್ಲೆಲ್ಲೋ ಹೋಗುತ್ತಿದ್ದಾರೆ. ಎಂದು ಹೇಳಿಕೆ ನೀಡಿದ್ದು ಇಂದು ಹೆಣ್ಣು ಮಕ್ಕಳನ್ನು ಅವರ ಮಿತ್ರ ಪಕ್ಷ ಜೆಡಿಎಸ್ ಕ್ರೂರ ರೂಪದಲ್ಲಿ ಬಳಸಿಕೊಂಡಿದೆ. ಇದರ ಬಗ್ಗೆ ಕರ್ನಾಟಕದ ಜನತೆಗೆ ತಿಳಿಸಬೇಕಿದೆ. ಅದೇ ರೀತಿ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕು. ರಾಕ್ಷಸ ಕೃತ್ಯ ನಡೆಸಿರುವ ಪ್ರಜ್ವಲ್ ರೇವಣ್ಣನನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.ತಾಪಂ ಮಾಜಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ್ ಮಾತನಾಡಿ, ಪ್ರಜ್ವಲ್ ರೇವಣ್ಣ ಹೆಣ್ಣು ಮಕ್ಕಳನ್ನು ತನ್ನ ಕೃತ್ಯಕ್ಕೆ ಬಳಸಿಕೊಳ್ಲುವ ಮೂಲಕ ರಾಜ್ಯದ ಜನತೆ ತಲೆ ತಗ್ಗಿಸುವಂತಾಗಿದೆ. ಮಹಿಳೆಯರು ಯಾವುದಕ್ಕೂ ಹೆದರಬಾರದು. ನಿಮ್ಮ ಬೆಂಬಲಕ್ಕೆ ರಾಜ್ಯ ಸರ್ಕಾರ, ರಾಜ್ಯ ಮಹಿಳಾ ಆಯೋಗ ನಿಂತಿದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಮ್ಮ ಮಾತನಾಡಿ, ಪ್ರಜ್ವಲ್ ರೇವಣ್ಣ ಕೃತ್ಯ ಬಹಳ ಹೀನವಾಗಿದೆ. ಅವರ ಪಕ್ಷದ ಚಿಹ್ನೆ ತೆನೆ ಹೊತ್ತ ರೈತ ಮಹಿಳೆಯಾಗಿದೆ. ಆದರೆ ಅವರ ಪಕ್ಷದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಮ್ಮ,ಪ್ರಮೀಳಮ್ಮ, ಜಿಪಂ ಮಾಜಿ ಸದಸ್ಯ ಮಂಜುಳಾ ಆದಿನಾರಾಯಣರೆಡ್ಡಿ, ಪುರಸಭಾ ಸದಸ್ಯೆ ರಾಧಿಕಾ, ಪುಟ್ಟಮ್ಮ, ಗಿರಿಜಾ, ಪಾರ್ವತಮ್ಮ, ಭಾಗ್ಯಮ್ಮ, ರತ್ನಮ್ಮ, ಸಾವಿತ್ರಮ್ಮ, ಡಿ.ಎಚ್.ನಾಗಾರಜು, ಇದ್ದರು.