ತಮ್ಮ ಮನೆ ಕೆಲಸದ ಮಹಿಳೆ ಮೇಲೆ ಪ್ರಜ್ವಲ್‌ ರೇಪ್‌ ದೃಢ -ವಿಡಿಯೋಗಳೂ ಸತ್ಯ : ವಿಶೇಷ ತನಿಖಾ ತಂಡ

| Published : Aug 24 2024, 02:01 AM IST / Updated: Aug 24 2024, 06:26 AM IST

Prajwal Revanna.jpg
ತಮ್ಮ ಮನೆ ಕೆಲಸದ ಮಹಿಳೆ ಮೇಲೆ ಪ್ರಜ್ವಲ್‌ ರೇಪ್‌ ದೃಢ -ವಿಡಿಯೋಗಳೂ ಸತ್ಯ : ವಿಶೇಷ ತನಿಖಾ ತಂಡ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ಮನೆ ಕೆಲಸದ ಮಹಿಳೆಗೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಲೈಂಗಿಕ ಕಿರುಕುಳ ನೀಡಿರುವುದು ಹಾಗೂ ಅವರ ಪುತ್ರ ಮತ್ತು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿರುವುದು ದೃಢಪಟ್ಟಿದೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ  ವಿಶೇಷ ತನಿಖಾ ತಂಡ (ಎಸ್‌ಐಟಿ) ಉಲ್ಲೇಖಿಸಿದೆ.

 ಬೆಂಗಳೂರು : ತಮ್ಮ ಮನೆ ಕೆಲಸದ ಮಹಿಳೆಗೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಲೈಂಗಿಕ ಕಿರುಕುಳ ನೀಡಿರುವುದು ಹಾಗೂ ಅವರ ಪುತ್ರ ಮತ್ತು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿರುವುದು ದೃಢಪಟ್ಟಿದೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿದ ಆರೋಪಪಟ್ಟಿಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಉಲ್ಲೇಖಿಸಿದೆ.

ಅಲ್ಲದೆ ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ ಪ್ರಜ್ವಲ್ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ಎಸ್‌ಐಟಿ ಹೇಳಿದೆ.

ಇದರೊಂದಿಗೆ ಹಾಸನ ಪೆನ್‌ ಡ್ರೈವ್ ಹಗರಣ ಬಯಲಾದ ಬಳಿಕ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಪ್ರಜ್ವಲ್ ರೇವಣ್ಣರವರಿಂದ ಹಲವು ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ ಎಂದು ಎಸ್‌ಐಟಿ ಹೇಳಿದೆ.

ಏನಿದು ಪ್ರಕರಣ:

ಲೋಕಸಭಾ ಚುನಾವಣೆ ವೇಳೆ ಹಾಸನ ಕ್ಷೇತ್ರದಲ್ಲಿ ಮಾಜಿ ಸಂಸದ ಪ್ರಜ್ವಲ್ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ದೃಶ್ಯಾವಳಿಗಳು ತುಂಬಿದ್ದ ಪೆನ್‌ ಡ್ರೈವ್‌ ಬಹಿರಂಗವಾಗಿತ್ತು. ಈ ಕೃತ್ಯ ಬೆಳಕಿಗೆ ಬಂದ ಬಳಿಕ ಹೊಳೆನರಸೀಪುರ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿ ಮಾಜಿ ಸಚಿವ ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ವಿರುದ್ಧ ಅವರ ಮನೆ ಕೆಲಸದಾಳು ದೂರು ನೀಡಿದ್ದರು. ಈ ದೂರಿನ ಮೇರೆಗೆ ಹೊಳೆನರಸೀಪುರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ಬಳಿಕ ಈ ಲೈಂಗಿಕ ಹಗರಣದ ಕುರಿತು ಎಸ್‌ಐಟಿ ತನಿಖೆಗೆ ರಚಿಸಿತ್ತು. ಅಂತೆಯೇ ಹಾಸನ ಪೆನ್‌ಡ್ರೈವ್ ಪ್ರಕರಣದ ತನಿಖೆಗಿಳಿದ ಎಸ್‌ಐಟಿ, ಈಗ ಹೊಳೆನರಸೀಪುರ ಠಾಣೆಯಲ್ಲಿ ತಂದೆ-ಮಗನ ವಿರುದ್ಧ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದೆ.

2144 ಪುಟಗಳು, 137 ಸಾಕ್ಷಿಗಳು:

ಹೊಳೆ ನರಸೀಪುರ ಠಾಣೆಯಲ್ಲಿ ಏ.28ರಂದು ಲೈಂಗಿಕ ದೌರ್ಜನ್ಯದಡಿ 47 ವರ್ಷದ ಮನೆಗೆಲಸದ ಮಹಿಳೆ ದೂರು ನೀಡಿದ್ದರು. ಮೊದಲು ತಂದೆ-ಮಗನ ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು. ಆದರೆ ತನಿಖೆ ವೇಳೆ ಸಂತ್ರಸ್ತೆ ಮೇಲೆ ಪ್ರಜ್ವಲ್ ಅತ್ಯಾಚಾರ ಎಸಗಿರುವುದು ಬಯಲಾಗಿತ್ತು. ಹೀಗಾಗಿ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಪ್ರಜ್ವಲ್ ಮೇಲೆ ಅತ್ಯಾಚಾರ ಆರೋಪದಡಿ 2144 ಪುಟಗಳ ದೋಷಾರೋಪಪಟ್ಟಿಯನ್ನು ಎಸ್‌ಐಟಿ ಸಲ್ಲಿಸಿದೆ.

ಈ ಆರೋಪ ಪಟ್ಟಿಯಲ್ಲಿ 150ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆ, ವೈಜ್ಞಾನಿಕ ವರದಿಗಳು ಹಾಗೂ ತಾಂತ್ರಿಕ ಪುರಾವೆಗಳನ್ನು ಸಹ ಲಗತ್ತಿಸಲಾಗಿದೆ ಎಂದು ಎಸ್‌ಐಟಿ ಹೇಳಿದೆ.

ಹಣ್ಣು ಕೊಟ್ಟು ಕಿರುಕುಳ ನೀಡಿದ ರೇವಣ್ಣ:

ತಮ್ಮ ಪತ್ನಿ ಭವಾನಿ ರೇವಣ್ಣರವರ ಶಿಫಾರಸಿನ ಮೇರೆಗೆ ಹೊಳೆನರಸೀಪುರದ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಅಡುಗೆ ಕೆಲಸಕ್ಕೆ ಸಹಾಯಕರಾಗಿ ಸಂತ್ರಸ್ತೆಯನ್ನು ರೇವಣ್ಣ ನೇಮಿಸಿದ್ದರು. ಅಲ್ಲದೆ ಹಾಸ್ಟೆಲ್‌ನಲ್ಲಿ ಕೆಲಸ ಮಾಡಿಕೊಂಡೇ ರೇವಣ್ಣ ಮನೆಯಲ್ಲಿ 2019ರಿಂದ 2022 ರವರೆಗೆ ಮನೆಗೆಲಸಕ್ಕೂ ಸಂತ್ರಸ್ತೆ ನಿಯೋಜಿತರಾಗಿದ್ದರು.

ಆಗ ರೇವಣ್ಣ ಅವರು ಭ‍ವಾನಿ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಮನೆಕೆಲಸ ಮಾಡುವಾಗ ಸಂತ್ರಸ್ತೆಯನ್ನು ತಮ್ಮ ಕೊಠಡಿಗೆ, ‘ಬಾರಮ್ಮ ಏಕೆ ಕೆಳಗೆ ಹೋಗುತ್ತೀಯಾ, ನಾನೇನು ಮಾಡಲ್ಲ ಬಾ?’ ಎಂದು ಕರೆಯುತ್ತಿದ್ದರು. ಆಗ ಹಣ್ಣು ಕೊಡುವ ನೆಪದಲ್ಲಿ ಮನೆಯ ಮೊದಲ ಮಹಡಿಯಲ್ಲಿದ್ದ ಸ್ಟೋರ್‌ ರೂಮಿಗೆ ಮೂವರು ಮಹಿಳಾ ಕೆಲಸಗಾರರನ್ನು ಕರೆಸಿಕೊಳ್ಳುತ್ತಿದ್ದರು. ಒಬ್ಬೊಬ್ಬರಿಗೂ ಹಣ್ಣು ಕೊಟ್ಟು ರೂಮಿನಿಂದ ಹೊರಗಡೆ ಕಳುಹಿಸಿ ಸಂತ್ರಸ್ತೆಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಲೈಂಗಿಕ ಕಿರುಕುಳ ನೀಡುವ ದುರುದ್ದೇಶದಿಂದಲೇ ಸಂತ್ರಸ್ತೆಗೆ ಕೊನೆಗೆ ಹಣ್ಣು ಕೊಡಲೆಂದು ರೂಮಿನಲ್ಲಿರಿಸಿಕೊಳ್ಳುತ್ತಿದ್ದರು. ಇತರೆ ಕೆಲಸಗಾರರು ಹಣ್ಣು ಪಡೆದುಕೊಂಡು ತೆರಳಿದ ನಂತರ ಸಂತ್ರಸ್ತೆಯ ಇಚ್ಛೆಗೆ ವಿರುದ್ಧವಾಗಿ ಕೈಹಿಡಿದು ಎಳೆದು, ಅವರ ಮೈಕೈಯನ್ನು ಮುಟ್ಟಿ, ಹತ್ತಿರಕ್ಕೆ ಎಳೆದುಕೊಂಡು ಲೈಂಗಿಕ ಕಿರುಕುಳ ನೀಡಿ ಕೃತ್ಯ ಎಸಗಿರುವ ಬಗ್ಗೆ ತನಿಖೆಯಿಂದ ಸಾಬೀತಾಗಿದೆ ಎಂದು ದೋಷಾರೋಪಟ್ಟಿಯಲ್ಲಿ ಉಲ್ಲೇಖವಾಗಿದೆ.

ಬಿಟ್ಟು ಬಿಡಿ ಎಂದರೂ ಅತ್ಯಾಚಾರ ಎಸಗಿದ ಪ್ರಜ್ವಲ್‌:

ಹೊಳೆನರಸೀಪುರದ ಮನೆಯಲ್ಲಿ ತಮ್ಮ ತಂದೆ ರೇವಣ್ಣ ಹಾಗೂ ತಾಯಿ ಭವಾನಿ ರೇವಣ್ಣ ಅವರು ಇಲ್ಲದ ವೇಳೆ ಮನೆಗೆಲಸದ ಮಹಿಳೆಯನ್ನು ಪ್ರಜ್ವಲ್ ಲೈಂಗಿಕವಾಗಿ ಶೋಷಿಸಿದ್ದಾರೆ. ಮನೆಯ ಮೊದಲನೇ ಮಹಡಿಯ ಹಾಲ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಸೀರೆಯ ಸೆರಗನ್ನು ಎಳೆದಾಡುವುದು, ಅಡುಗೆ ಕೋಣೆಯಲ್ಲಿ ಇತರೆ ಕೆಲಸಗಾರರೂ ಇಲ್ಲದ ಸಮಯ ನೋಡಿ ಹಿಂದಿನಿಂದ ಹೋಗಿ ಹೊಟ್ಟೆ ಹಿಚುಕುವುದು, ತಬ್ಬಿಕೊಳ್ಳುವುದು ಮಾಡುತ್ತಿದ್ದರು ಮತ್ತು ಕಿವಿಯ ಹತ್ತಿರ ಹೋಗಿ ‘ಬಾ’ ಎಂದು ಕರೆಯುತ್ತಿದ್ದರು.

ಆಗಾಗ ಸಂತ್ರಸ್ತೆಗೆ ಫೋನ್‌ ಕರೆ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೆ 2020ರಲ್ಲಿ ಬೆಂಗಳೂರಿನ ಬಸವನಗುಡಿ ಮನೆ ಸ್ವಚ್ಛತೆಗೆ ಸಂತ್ರಸ್ತೆ ಸೇರಿದಂತೆ ಕೆಲಸಗಾರರನ್ನು ಭವಾನಿ ಕರೆದುಕೊಂಡು ಹೋಗಿದ್ದರು. ಒಂದು ದಿನ ಸಂತ್ರಸ್ತೆಗೆ ಮನೆ ಸ್ವಚ್ಛಗೊಳಿಸುವಂತೆ ಹೇಳಿ ಶಾಪಿಂಗ್‌ಗೆ ಭವಾನಿ ತೆರಳಿದ್ದರು. ಆಗ ಮನೆಯ ಮಹಡಿಯ ಪಶ್ಚಿಮ ಬದಿಯ ಬೆಡ್ ರೂಮಿನಲ್ಲಿ ಸ್ವಚ್ಛತೆ ಮಾಡುತ್ತಿದ್ದ ವೇಳೆ ಫೋನ್ ಹಿಡಿದುಕೊಂಡು ಏಕಾಏಕಿ ರೂಮಿನೊಳಗೆ ಪ್ರಜ್ವಲ್ ನುಗ್ಗಿದ್ದರು.

ಆಗ ಕೋಣೆಯಿಂದ ಹೊರಹೋಗಲು ಸಂತ್ರಸ್ತೆ ಯತ್ನಿಸಿದಾಗ ಬಲವಂತದಿಂದ ರೂಮ್ ಲಾಕ್ ಮಾಡಿದ ಪ್ರಜ್ವಲ್‌, ‘ಎಷ್ಟು ದಿವಸದಿಂದ ನನ್ನಿಂದ ನೀನು ತಪ್ಪಿಸಿಕೊಂಡು ತಿರುಗಾಡುತ್ತಿದ್ದೆ. ಎಣ್ಣೆ ಹಚ್ಚಲು ಬಾ ಎಂದರೆ ಸಬೂಬು ಹೇಳುತ್ತಿದ್ದೆ, ಈಗ ಒಂಟಿಯಾಗಿ ಸಿಕ್ಕಿದ್ದಿಯಾ? ಇವತ್ತು ನಾನು ಹೇಳಿದ ಹಾಗೆ ಕೇಳದಿದ್ದರೆ ನಿನ್ನ ಕಥೆ ಮುಗಿಸುತ್ತೇನೆ’ ಎಂದು ಬೆದರಿಸಿದ್ದರು.

ಆಗ ಬಟ್ಟೆ ಬಿಚ್ಚುವಂತೆ ಪ್ರಜ್ವಲ್ ಮಾತಿಗೆ ಸಂತ್ರಸ್ತೆ, ‘ಬೇಡ ಅಣ್ಣ ತಪ್ಪಾಯ್ತು ನನ್ನನ್ನ ಬಿಟ್ಟು ಬಿಡಿ. ಏನೂ ಮಾಡಬೇಡಿ’ ಎಂದು ಅಂಗಲಾಚಿ ಬೇಡಿದರು. ಈ ವಿನಂತಿಗೆ ಕ್ಯಾರೇ ಎನ್ನದೆ ಪ್ರಜ್ವಲ್‌, ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದರು.

ಆ ದಿನ ಅತ್ಯಾಚಾರ ಮಾಡುತ್ತಲೇ ತಮ್ಮ ಮೊಬೈಲ್‌ನಿಂದ ಕೃತ್ಯವನ್ನು ಪ್ರಜ್ವಲ್‌ ರೆಕಾರ್ಡ್‌ ಮಾಡಿಕೊಂಡಿದ್ದರು. ಈ ಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನ ಗಂಡನನ್ನು ಜೈಲು ಪಾಲು ಮಾಡುತ್ತೇನೆ ಮತ್ತೆ ನಿನ್ನ ಮಗಳಿಗೂ ಇದೇ ಗತಿ ಮಾಡುತ್ತೇನೆ ಎಂದು ಪ್ರಜ್ವಲ್ ಧಮ್ಕಿ ಹಾಕಿದ್ದರು. ತನಗೆ ಏನೇ ಮಾಡಿದರೂ ಮುಚ್ಚಿ ಹಾಕುವುದು ಗೊತ್ತು, ನಾನು ಎಂ.ಪಿ ಆಗಿದ್ದರಿಂದ ತನಗೆ ಯಾರೂ ಏನೂ ಮಾಡಲು ಆಗುವುದಿಲ್ಲ. ನೀನು ಈ ವಿಷಯ ಎಲ್ಲಾದರೂ ಬಾಯಿ ಬಿಟ್ಟರೆ ನಿನ್ನನ್ನು ಸಾಯಿಸುತ್ತೇನೆ ಎಂದು ಸಂತ್ರಸ್ತೆಗೆ ಪ್ರಜ್ವಲ್ ಜೀವ ಬೆದರಿಕೆ ಹಾಕಿರುವುದು ತನಿಖೆಯಲ್ಲಿ ರುಜುವಾತಾಗಿದೆ. ಹೀಗಾಗಿ ಆರೋಪಿ ವಿರುದ್ಧ ಅತ್ಯಾಚಾರ (376), ಲೈಂಗಿಕ ಕಿರುಕುಳ (354) ಹಾಗೂ ಜೀವ ಬೆದರಿಕೆ (506) ಅಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದೇವೆ ಎಂದು ಎಸ್ಐಟಿ ಹೇಳಿದೆ.

ಹಲವು ಮಹಿಳೆಯರಿಗೆ ರೇಪ್ ಮಾಡಿ ವಿಡಿಯೋ! ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಚಿತ್ರೀಕರಿಸಿಕೊಂಡು ಪ್ರಜ್ವಲ್ ಬೆದರಿಕೆ ಹಾಕುತ್ತಿದ್ದರು ಎಂಬ ಮಹತ್ವದ ಸಂಗತಿಯನ್ನು ಆರೋಪ ಪಟ್ಟಿಯಲ್ಲಿ ಎಸ್‌ಐಟಿ ಉಲ್ಲೇಖಿಸಿದೆ.ಸಂತ್ರಸ್ತ ಮಹಿಳೆಯರವರಿಗೆ ಲೈಂಗಿಕ ಶೋಷಣೆ ಮತ್ತು ಲೈಂಗಿಕ ಹಲ್ಲೆಗೆ ಒಳಪಡಿಸುವ ದುರುದ್ದೇಶದಿಂದ ಸಂತ್ರಸ್ತೆಯರ ನಗ್ನ ದೇಹವನ್ನು ಸಂತ್ರಸ್ತೆಯರ ಅರಿವಿಗೆ ಬಾರದಂತೆ ಮತ್ತು ಅವರ ಒಪ್ಪಿಗೆ ಇಲ್ಲದೆಯೇ ಪ್ರಜ್ವಲ್ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ಅಲ್ಲದೆ ವಿಡಿಯೋ ಕಾಲ್‌ನ ಸ್ಕ್ರೀನ್ ಶಾಟ್ ಪೋಟೋವನ್ನು ಸಹ ಪ್ರಜ್ವಲ್‌ ಇಟ್ಟುಕೊಂಡಿದ್ದರು.

ಅತ್ಯಾಚಾರ ಪ್ರಕರಣದ ಇಬ್ಬರು ಸಂತ್ರಸ್ತೆಯರು ಮಾತ್ರವಲ್ಲದೆ ಮೂವರು ಸಾಕ್ಷಿಗಳು ಸೇರಿದಂತೆ ಮಹಿಳೆಯವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆ ಸಮಯದಲ್ಲಿ ತಾನು ಬಳಸುತ್ತಿದ್ದ ಮೊಬೈಲ್‌ನಲ್ಲಿ ಅದೆಲ್ಲವನ್ನು ಚಿತ್ರೀಕರಿಸಿಕೊಂಡಿದ್ದರು. ಈ ಮಾಹಿತಿ ತಮ್ಮ ಕ್ಷೇತ್ರದ ಜನರಲ್ಲಿ ಹರಡುತ್ತಿದ್ದಂತೆ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ವಿದೇಶಕ್ಕೆ ಪಲಾಯನಗೈದು ಮೊಬೈಲ್ ಸಾಕ್ಷ್ಯ ನಾಶ ಪಡಿಸಿದ್ದಲ್ಲದೇ ಈ ಹಿಂದೆ ತಾವು ಬಳಸಿದ್ದ ಫೋನ್‌ಗಳಲ್ಲಿ ವಿದ್ಯುನ್ಮಾನ ಸಾಕ್ಷಿಗಳನ್ನು ನಾಶಪಡಿಸಿದ ಬಗ್ಗೆ ತನಿಖೆಯಿಂದ ದೃಢಪಟ್ಟಿದೆ ಎಂದು ಎಸ್‌ಐಟಿ ಹೇಳಿದೆ.

ಸಂತ್ರಸ್ತೆಗೆ ನಗ್ನಗೊಳ್ಳುವಂತೆ ವಿಡಿಯೋ ಕಾಲ್:

ಸಂತ್ರಸ್ತೆಗೆ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚುವಂತೆ ಪ್ರಜ್ವಲ್ ಪೀಡಿಸುತ್ತಿದ್ದ ವಿಕೃತ ಕೃತ್ಯ ಆರೋಪ ಪಟ್ಟಿಯಲ್ಲಿ ಬಯಲಾಗಿದೆ.2020-21ರಲ್ಲಿ ತನ್ನ ತಾಯಿ ಮನೆಗೆ ಸಂತ್ರಸ್ತೆ ತೆರಳಿದ್ದರು. ಆಗ ಅವರ ಮೊಬೈಲ್‌ಗೆ ಕರೆ ಮಾಡಿದ ಪ್ರಜ್ವಲ್‌, ‘ವಾಟ್ಸ್ ಆಪ್ ವಿಡಿಯೋ ಕಾಲ್ ಮಾಡ್ತೀನಿ ರಿಸೀವ್ ಮಾಡು’ ಎಂದಿದ್ದರು. ಬಳಿಕ ವಿಡಿಯೋ ಕಾಲ್ ಮಾಡಿ ಸಂತ್ರಸ್ತೆಗೆ ಮೈ ಮೇಲಿನ ಬಟ್ಟೆ ಬಿಚ್ಚಿ ಎದೆ ಭಾಗ ತೋರಿಸುವಂತೆ ಒತ್ತಾಯಿಸುತ್ತಿದ್ದರು. ಇದಕ್ಕೊಪ್ಪದೆ ಹೋದಾಗ ನಿಮ್ಮ ತಾಯಿ ಮತ್ತು ನಿನ್ನ ಗಂಡನ ಮನೆಯವರಿಗೆ ನೀನು ನನ್ನ ಜೊತೆ ಸಂಬಂಧ ಇಟ್ಟುಕೊಂಡಿದ್ದಿಯಾ ಎಂದು ಹೇಳುವೆ ಎಂದು ಬೆದರಿಸಿದ್ದರು. ಈ ಬ್ಲ್ಯಾಕ್‌ಮೇಲ್‌ಗೆ ಹೆದರಿ ಸಂತ್ರಸ್ತೆ ಮೈ ಮೇಲಿನ ಬಟ್ಟೆ ತೆಗೆದು ಎದೆ ಭಾಗ ತೋರಿಸಿ ಅರೆ ನಗ್ನವಾಗಿದ್ದರು. ಈ ಕೃತ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸ್ಕ್ರೀನ್ ಶಾಟ್ ಫೋಟೊ ಮಾಡಿಕೊಂಡು ಸಾಮಾಜಿಕ ಜಾಲತಾಣ ಹಾಗೂ ದೃಶ್ಯಮಾಧ್ಯಮಗಳಲ್ಲಿ ಹರಿದಾಡಲು ಪ್ರಜ್ವಲ್ ಕಾರಣಕರ್ತನಾಗಿರುವುದು ತನಿಖೆಯಲ್ಲಿ ಸಾಬೀತಾಗಿದೆ ಎಂದು ಎಸ್ಐಟಿ ಹೇಳಿದೆ.