ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಯರು ತಮಗೆ ಆದ ಅನ್ಯಾಯವನ್ನು ಹೇಳಿಕೊಳ್ಳಲು ಮತ್ತು ಅವರಿಗೆ ಆತ್ಮಸ್ಥೈರ್ಯ ತುಂಬಿ ನ್ಯಾಯ ಒದಗಿಸಲು ಕಾನೂನು ನೆರವು ನೀಡಲಿಕ್ಕಾಗಿ ನಮ್ಮ ವಕೀಲರ ತಂಡವು ಸಜ್ಜಾಗಿದ್ದು, ಒಂದು ಕರೆ ಮಾಡಿದರೆ ಸಾಕು ನಿಮ್ಮ ಸಹಾಯಕ್ಕೆ ಬರಲಿದೆ ಎಂದು ಎಂದು ಹೈಕೋರ್ಟ್ ಹಿರಿಯ ವಕೀಲ ಬಿ.ಟಿ. ವೆಂಕಟೇಶ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಮಾಜಿ ಸಂಸದ ಪ್ರಜ್ವಲ್ ಕೇಸಿನ ವಿಚಾರವಾಗಿ ಎಸ್ ಐಟಿ ತಂಡ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ನಮ್ಮ ತಂಡದ ಬಳಿ ಬರುವ ಎಲ್ಲಾ ಸಂತ್ರಸ್ತೆಯರ ಹೆಸರು ಮತ್ತು ದೂರು ಸೇರಿ ತನಿಖೆಯನ್ನು ಗೌಪ್ಯವಾಗಿಡಲಾಗುವುದು. ಮಹಿಳಾ ವಕೀಲರು ಸಂತ್ರಸ್ತೆಯರ ಪರ ನಿಂತಿದ್ದು, ಭಯಪಡದೇ ದೂರನ್ನು ನೀಡಬಹುದಾಗಿದೆ. ಈಗಾಗಲೇ ಐದು ಪ್ರಕರಣಗಳು ದಾಖಲಾಗಿದ್ದು, ಉಳಿದವರು ಯಾವುದೇ ಭಯವಿಲ್ಲದೇ ಮತ್ತು ಅಂಜಿಕೆ ಇಲ್ಲದೇ ದೂರು ನೀಡಬಹುದಾಗಿದೆ. ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಮತ್ತು ನಿಮಗೆ ಕಾನೂನಿನ ಮೂಲಕ ನೆರವು ನೀಡುವ ದೃಷ್ಟಿಯಿಂದ ಮಹಿಳಾ ವಕೀಲರ ಪಡೆಯನ್ನು ನೇಮಕ ಮಾಡಲಾಗಿದೆ ಎಂದರು.
ಸಂತ್ರಸ್ತೆಯವರ ಪರ ನಾವು ಇದ್ದೇವೆ ಎಂದು ಈಗಾಗಲೇ ಹಾಸನದಲ್ಲಿ ಬೃಹತ್ ಹೋರಾಟ ನಡೆಸಿ ಸಂದೇಶ ಕೊಡಲಾಗಿದೆ. ಈಗಾಗಲೇ ಎಸ್.ಐ.ಟಿ. ಯಲ್ಲಿ ಐವರು ಮಹಿಳೆಯರು ದೂರು ದಾಖಲಿಸಿದ್ದಾರೆ. ಆದರೆ ಹಲವಾರು ವರ್ಷಗಳಿಂದ ಆಗಿರುವ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಸಾಧ್ಯವಾಗದ ಅನೇಕ ಸಂತ್ರಸ್ತೆಯರು ಇದ್ದಾರೆ. ಈಗಾಗಲೇ ಅವರನ್ನು ಭಯಪಡಿಸಿ ಆಮಿಷ ಒಡ್ಡುವ ಕೆಲಸ ಮಾಡಲಾಗುತ್ತಿದೆ. ಅನೇಕ ಸಂತ್ರಸ್ತೆಯರ ಮನೆ ಮುಂದೆ ಸಿಸಿ ಕ್ಯಾಮೆರಾ ಹಾಕುವುದರ ಜೊತೆಗೆ ನಿಗಾ ವಹಿಸಲಾಗಿದೆ. ಎಲ್ಲಾ ಸಂತ್ರಸ್ತೆಯರ ಹೆಸರು ಮತ್ತು ದೂರುಗಳು ಸೇರಿ ತನಿಖೆಯನ್ನು ಗೌಪ್ಯವಾಗಿ ಇಡಲಾಗುವುದು. ಸಂತ್ರಸ್ತೆಯರು ಮಹಿಳಾ ವಕೀಲರ ಸಹಾಯವನ್ನು ಪಡೆಯಬಹುದಾಗಿದೆ ಎಂದು ಹೇಳಿದರು.ವಕೀಲರಾದ ಅಖಿಲ ವಿದ್ಯಾಸಂದ್ರ ಮತ್ತು ಹೈಕೋರ್ಟ್ ವಕೀಲರಾದ ಮೈತ್ರಿ ಮಾತನಾಡಿ, ಮಾಜಿ ಸಂಸದ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿ ಇದು ಕೆಲ ಸಂತ್ರಸ್ತೆಯರ ಮೇಲೆ ಮಾತ್ರ ಆಗಿರುವ ಅಪರಾದವಲ್ಲ. ಇಡೀ ಸ್ತ್ರೀ ಸಮಾಜದ ಮೇಲೆ ಆಗಿದೆ ಎಂದು ನಾವು ಪರಿಗಣಿಸಬೇಕಾಗಿದೆ.ಸಂತ್ರಸ್ಥೆಯರಿಗೆ ನ್ಯಾಯ ದೊರಕಿಸಲು ನಮ್ಮ ತಂಡ ಸನ್ನದ್ಧವಾಗಿದೆ. ತಮ್ಮ ಮೇಲೆ ಆಗಿರುವ ಅನ್ಯಾಯವನ್ನು ಹೇಳಿಕೊಳ್ಳಲಾಗದೇ ಇರುವವರಿಗೆ ಕಾನೂನು ನೆರವು ಸಿಗಬೇಕು. ನಮ್ಮ ವಕೀಲರ ತಂಡದ ಬಳಿ ಬಂದರೆ ಎಲ್ಲಾ ಸಂತ್ರಸ್ತೆಯರ ಹೆಸರು ಮತ್ತು ದೂರುಗಳು ಸೇರಿದಂತೆ ತನಿಖೆಯನ್ನು ಗೌಪ್ಯವಾಗಿ ಇಡಲಾಗುವುದು. ಸಂತ್ರಸ್ತೆಯರ ಬೆಂಬಲಕ್ಕೆ ಮಹಿಳಾ ವಕೀಲರ ಸಹಾಯವನ್ನು ಪಡೆಯುವುದರ ಜೊತೆಗೆ ಪ್ರಕರಣ ಮುಗಿಯುವವರೆಗೂ ನಿಮ್ಮ ಜೊತೆ ಇರಲಿದ್ದಾರೆ ಎಂದು ಧೈರ್ಯ ತುಂಬಿದರು.
ಪತ್ರಿಕಾಗೋಷ್ಠಿಯಲ್ಲಿ ಹೈಕೋರ್ಟ್ ವಕೀಲ ವಿನಯ್ ಶ್ರೀನಿವಾಸ್, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆ.ಎಸ್. ವಿಮಲಾ, ಎಂ.ಜಿ. ಪೃಥ್ವಿ ಸೇರಿ ಇತರರು ಇದ್ದರು.