40 ವರ್ಷಗಳ ಇತಿಹಾಸವಿರುವ, 100 ರೇಷನ್ ಕಾರ್ಡ್ ಗಳ ಮೂಲಕ ಆರಂಭವಾದ ಸೊಸೈಟಿಯು ಇಂದು 500ಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳನ್ನು ಹೊಂದಿದೆ. ನೂತನ ಅಧ್ಯಕ್ಷ ಪ್ರಕಾಶ್ ಸಂಸ್ಥೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಹೌಸಿಂಗ್ ಬೋರ್ಡ್ ಹುಡ್ಕೊ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಿ.ಪಿ.ಪ್ರಕಾಶ್ , ಉಪಾಧ್ಯಕ್ಷರಾಗಿ ಕುಮಾರಯ್ಯ ಅವಿರೋಧವಾಗಿ ಆಯ್ಕೆಯಾದರು.

ನೂತನ ಅಧ್ಯಕ್ಷ - ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಸುಮಿತ್ರ ಘೋಷಿಸಿದರು. ನಂತರ ಹಾಲಿ ನಿರ್ದೇಶಕ, ಮಾಜಿ ಅಧ್ಯಕ್ಷ ಜಿ.ಟಿ.ವೀರಪ್ಪ ಮಾತನಾಡಿ , 40 ವರ್ಷಗಳ ಇತಿಹಾಸವಿರುವ, 100 ರೇಷನ್ ಕಾರ್ಡ್ ಗಳ ಮೂಲಕ ಆರಂಭವಾದ ಸೊಸೈಟಿಯು ಇಂದು 500ಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳನ್ನು ಹೊಂದಿದೆ. ನೂತನ ಅಧ್ಯಕ್ಷ ಪ್ರಕಾಶ್ ಸಂಸ್ಥೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ ಎಂದು ಸಲಹೆ ನೀಡಿದರು.

ಮಾಜಿ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಸಂಘವು ಸ್ವಂತ ಜಾಗದಲ್ಲಿ ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಂತಾಗಲಿ ಎಂದು ಆಶಿಸಿದರು.

ಈ ವೇಳೆ ಮಾಜಿ ಅಧ್ಯಕ್ಷ ಚಂದ್ರಮೌಳಿ, ನಿರ್ದೇಶಕರಾದ ಕೃಷ್ಣ ಅರಸ್, ಜವರಯ್ಯ, ಕೃಷ್ಣಮೂರ್ತಿ (ಕಿರಣ್ ) ಬಿ.ಶ್ರೀಕಾಂತ್, ಸುನೀತಾ ಉಮೇಶ್, ಪುಷ್ಪಲತಾ, ಎ.ಪಿ.ಭಾಸ್ಕರ್, ಶಿವಕುಮಾರ್, ಸೊಸೈಟಿ ಕಾರ್ಯದರ್ಶಿ ತ್ರಿವೇಣಿ ಹಾಗೂ ಆಟೋ ರಾಜಣ್ಣ, ಡಾ.ಮೋಹನ್ ಕುಮಾರ್, ಗೋವಿಂದರಾಜು, ಆಟೋ ರಾಮಣ್ಣ ಇದ್ದರು.

ಇಂದಿನಿಂದ ಮೇ 29ರವರೆಗೆ ಉಪಲೋಕಾಯುಕ್ತ ಬಿ.ವೀರಪ್ಪ ಜಿಲ್ಲೆಯಲ್ಲಿ ಪ್ರವಾಸ

ಮಂಡ್ಯ: ಕರ್ನಾಟಕ ಉಪಲೋಕಾಯುಕ್ತ ಬಿ.ವೀರಪ್ಪ ಮೇ 26 ರಿಂದ 29 ರವರಿಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ಸಾರ್ವಜನಿಕರಿಂದ ಅರ್ಜಿ ಅಹವಾಲು ಸ್ವೀಕರಿಸಲಿದ್ದಾರೆ.

ಮೇ 26 ರಂದು ಸಂಜೆ 6.30ಕ್ಕೆ ಜಿಲ್ಲೆಗೆ ಆಗಮಿಸಿ ವಾಸ್ತವ್ಯ ಹೂಡಲಿರುವ ನ್ಯಾಯ ಮೂರ್ತಿಗಳು ಮೇ 27ರಂದು ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.ಮೇ 28 ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.30 ಹಾಗೂ 2.30ರಿಂದ ಸಂಜೆ 5ರವರೆಗೆ ಸುಭಾಷ್‌ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ಹಮ್ಮಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಅಧಿಕಾರಿ, ನೌಕರರಿಂದ ಕಾನೂನು ರೀತಿ ನಿರ್ವಹಿಸಬೇಕಾದ ಕೆಲಸದಲ್ಲಿ ವಿಳಂಬವಾಗಿದ್ದರೆ ಅಥವಾ ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ಕಾರಣವಿಲ್ಲದೇ ತೊಂದರೆ ಕೊಡುವುದು, ಲಂಚಕ್ಕೆ ಬೇಡಿಕೆ ಇಡುವುದು, ಇನ್ಯಾವುದೇ ತರಹದ ದುರಾಡಳಿತದಲ್ಲಿ ತೊಡಗಿದ್ದರೆ ಅದರಿಂದ ತೊಂದರೆಗೊಳಗಾದ ಸಾರ್ವಜನಿಕರು ಗೌರವಾನ್ವಿತರ ಮುಂದೆ ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ.

ಮೇ 29 ರಂದು ಬೆಳಗ್ಗೆ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ನಂತರ 11 ಗಂಟೆವರೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ನ್ಯಾಯಾಂಗ ಅಧಿಕಾರಿಗಳು, ವಕೀಲರು ಮತ್ತು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಬೆಳಗ್ಗೆ 11 ರಿಂದ ಮಧ್ಯಾಹ್ನ 1.45ವರೆಗೆ ಹಾಗೂ 2.30 ರಿಂದ ಸಂಜೆ 6 ಗಂಟೆವರೆಗೆ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಡ್ಯ ಜಿಲ್ಲೆಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ (ಗೌರವಾನ್ವಿತ ಉಪಲೋಕಾಯುಕ್ತರ ವ್ಯಾಪ್ತಿಗೆ ಒಳಪಡುವ ಪ್ರಕರಣಗಳಲ್ಲಿ) ತನಿಖೆ ಮತ್ತು ವಿಚಾರಣೆಗೆ ಬಾಕಿಯಿರುವ ಪ್ರಕರಣಗಳಲ್ಲಿ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರೀತ್ಯಾ ವಿಚಾರಣೆ ನಡೆಸಲಿದ್ದಾರೆ. ಆದ್ದರಿಂದ ದೂರುದಾರರು ಮತ್ತು ಎದುರುದಾರರು ನಿಗದಿತ ಸಮಯದಲ್ಲಿ ಹಾಜರಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.