ಸಾರಾಂಶ
ನಮ್ಮ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಪ್ರಮೋದ ಹೆಗಡೆ ಮಹತ್ವದ ಕೊಡುಗೆ ನೀಡಿದ್ದಾರೆ.
ಯಲ್ಲಾಪುರ: ನಮ್ಮ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಪ್ರಮೋದ ಹೆಗಡೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ 50 ವರ್ಷದ ಸಾರ್ವಜನಿಕ ಜೀವನದ ಬದುಕಿನ ಹಲವು ಸುಖ-ದುಃಖಗಳ ಮತ್ತು ರಾಜಕೀಯ ಕ್ಷೇತ್ರದಲ್ಲಿ ಎತ್ತರಕ್ಕೆ ಸಾಗುವಲ್ಲಿ ಹಿನ್ನಡೆಯಾಗಿದ್ದರೂ ಅವರು ಸಾಂಸ್ಕೃತಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ತಾಳಮದ್ದಲೆಯ ಮೇರು ಕಲಾವಿದ ಡಾ.ಪ್ರಭಾಕರ ಜೋಶಿ ಹೇಳಿದರು.
ತಾಲೂಕಿನ ಚಂದಗುಳಿಯ ಘಂಟೆ ಗಣಪನ ಅಷ್ಟಬಂಧ ಮಹೋತ್ಸವದ ನಿಮಿತ್ತ ಶುಕ್ರವಾರ ನಡೆದ ತಾಳಮದ್ದಲೆ ಕಾರ‍್ಯಕ್ರಮದಲ್ಲಿ ದೇವಸ್ಥಾನ ಸಮಿತಿಯಿಂದ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಪ್ರಮೋದ ಹೆಗಡೆ ಅವರಿಗೆ ನೀಡಿದ ಗೌರವ ಸನ್ಮಾನದ ಕುರಿತು ಮಾತನಾಡುತ್ತಿದ್ದರು.ನಮ್ಮ ಬದುಕು ಉತ್ಕೃಷ್ಠತೆ ಪಡೆಯಲು ಸಾಂಸ್ಕೃತಿಕ ವಾತಾವರಣ ತೀರಾ ಅಗತ್ಯವಾಗಿದೆ. ಅಂತಹ ಈ ನೆಲ ಯಕ್ಷಗಾನ ಸಂಗೀತ ಸೇರಿದಂತೆ ಕಲೆಗಳ ಸಂಗಮದ ನೆಲೆಯಾಗಿದೆ. ಕಳೆದ 37 ವರ್ಷಗಳಿಂದ ಪ್ರಮೋದ ಹೆಗಡೆ ಸಂಕಲ್ಪ ಉತ್ಸವದ ಮೂಲಕ ಸಾಂಸ್ಕೃತಿಕ ಕ್ಷೇತ್ರಕ್ಕೆ ಗಟ್ಟಿತನ ನೀಡಿದ್ದಾರೆ ಎಂದರು.ಅಷ್ಟಬಂಧ ಸಮೀತಿಯ ಉಪಾಧ್ಯಕ್ಷ ಡಿ.ಶಂಕರ ಭಟ್ಟ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲೂ ಪ್ರಮೋದ ಹೆಗಡೆ ಸಾರ್ಥಕ ಸೇವೆ ಸಲ್ಲಿಸಿದ್ದಾರೆ ಎಂದರು.
ದೇವಸ್ಥಾನದ ಅಧ್ಯಕ್ಷ ವಿ.ಲಕ್ಷ್ಮೀನಾರಾಯಣ ಭಟ್ಟ ಸಮೀತಿಯ ಪರವಾಗಿ ಪ್ರಮೋದ ಹೆಗಡೆ ಅವರನ್ನು ಸನ್ಮಾನಿಸಿದರು. ಕೋಶಾಧ್ಯಕ್ಷ ಎಲ್.ಪಿ. ಭಟ್ಟ, ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ಟ, ಎಂ.ಎನ್. ಹೆಗಡೆ ಹಳವಳ್ಳಿ, ಅನಂತ ಹೆಗಡೆ ದಂತಳಗಿ, ಶಂಕರ ಭಾಗ್ವತ್ ಯಲ್ಲಾಪುರ ಇದ್ದರು.